ಭುವನೇಶ್ವರ್(ಜು.12); ಭಾರತದ ಅತೀವೇಗದ ಮಹಿಳಾ ಅಥ್ಲೀಟ್ ದ್ಯುತಿ ಚಾಂದ್ ಕೊರೋನಾ ವೈರಸ್ ಕಾರಣ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಟೊಕಿಯೊ ಒಲಿಂಪಿಕ್ಸ್ ಕೂಟಕ್ಕೆ ಅತ್ಯುತ್ತಮ ತರಬೇತಿ ಪಡೆಯಲು ಹಣದ ಅವಶ್ಯಕತೆ ಇದೆ. ಆದರೆ ಕಳೆದ 3 ತಿಂಗಳಿನಿಂದ ಕೊರೋನಾ ವೈರಸ್ ಕಾರಣ ಎಲ್ಲಾ ಕ್ರೀಡಾ ಚಟುವಟಿಕೆಗಳು ಸ್ಥಗಿತಗೊಂಡಿದೆ. ಹೀಗಾಗಿ ಬರುವ ಆದಾಯವೂ ನಿಂತು ಹೋಗಿದೆ. ಹೀಗಾಗಿ ಒಲಿಂಪಿಕ್ಸ್ ತರಬೇತಿಗಾಗಿ ದ್ಯುತಿ ಚಾಂದ್ ತಮ್ಮ ಕಾರು ಮಾರಾಟ ಮಾಡಲು ನಿರ್ಧರಿಸಿದ್ದಾರೆ.

ರಾಷ್ಟ್ರೀಯ ಅಥ್ಲೆಟಿಕ್ಸ್ : ದಾಖಲೆ ಬರೆದ ಅಥ್ಲೀಟ್ ದ್ಯುತಿ ಚಾಂದ್.

24 ವರ್ಷದ ದ್ಯುತಿ ಚಾಂದ್, ರಾಂಚಿಯಲ್ಲಿ ನಡೆದ 59ನೇ ನ್ಯಾಷನಲ್ ಒಪನ್ ಮೀಟ್‌ನಲ್ಲಿ 11.22 ಸೆಕೆಂಡ್ ದಾಖಲೆ ಬರೆದಿದ್ದಾರೆ. ಎಪ್ರಿಲ್ ತಿಂಗಳಿನಿಂದ ನಡೆಯಬೇಕಿದ್ ಫೆಡ್ ಕಪ್ ಕೂಟ ಕೂಡ ಕೊರೋನಾ ವೈರಸ್ ಕಾರಣ ರದ್ದಾಗಿದೆ. ಕಳೆದ 4 ತಿಂಗಳಿನಿಂದ ಇರುವ ಹಣ ಖರ್ಚಾಗಿದೆ. ಒಲಿಂಪಿಕ್ಸ್ ಕೂಟದ ತರಬೇತಿಗೆ ಕನಿಷ್ಠ 25 ಲಕ್ಷ ರೂಪಾಯಿ ಹಣದ ಅವಶ್ಯಕತೆ ಇದೆ. ಹೀಗಾಗಿ ನಾನು ಕಾರು ಮಾರಾಟ ಮಾಡಲು ಮುಂದಾಗಿದ್ದೇನೆ ಎಂದು ದ್ಯುತಿ ಚಾಂದ್ ಹೇಳಿದ್ದಾರೆ.

ಲಾಕ್‌ಡೌನ್ ಸಮಯದಲ್ಲಿ ನಿರ್ಗತಿಕರಿಗೆ, ಬಡವರಿಗೆ ಸಹಾಯ ಮಾಡಿದ್ದ ದ್ಯುತಿ ಚಾಂದ್, ಇದೀಗ ದುಬಾರಿ ಮೊತ್ತಕ್ಕೆ ಕಾರು ಮಾರಾಟ ಮಾಡಲು ಮುಂದಾಗಿದ್ದಾರೆ. ಪ್ರಾಯೋಜಕತ್ವ ಕೂಡ ಇಲ್ಲವಾಗಿದೆ. ಕೊರೋನಾ ವೈರಸ್ ಕಾರಣ ಪ್ರಾಯೋಜಕರು ಕೂಡ ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಕಾರು ಮಾರಾಟ ಅನಿವಾರ್ಯವಾಗಿದೆ ಎಂದು ದ್ಯುತಿ ಚಾಂದ್ ಹೇಳಿದ್ದಾರೆ.