ಏಷ್ಯನ್ ಕುಸ್ತಿ: ಐತಿಹಾಸಿಕ ಚಿನ್ನ ಗೆದ್ದ ಸುನಿಲ್ ಕುಮಾರ್!
ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಸುನಿಲ್ ಕುಮಾರ್ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಗ್ರೀಕೋ ರೋಮನ್ ವಿಭಾಗದಲ್ಲಿ ಭಾರತದ ಪರ ಬರೋಬ್ಬರಿ 27 ವರ್ಷಗಳ ಬಳಿಕ ಚಿನ್ನದ ಪದಕ ಜಯಿಸುವಲ್ಲಿ ಸುನಿಲ್ ಕುಮಾರ್ ಯಶಸ್ವಿಯಾಗಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ..
ನವದೆಹಲಿ(ಫೆ.19): ಭಾರತದ ತಾರಾ ಕುಸ್ತಿಪಟು ಸುನಿಲ್ ಕುಮಾರ್ 27 ವರ್ಷಗಳ ಬಳಿಕ ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನ ಗ್ರೀಕೋ ರೋಮನ್ ವಿಭಾಗದಲ್ಲಿ ಚಿನ್ನ ಗೆದ್ದು ಇತಿಹಾಸ ಸೃಷ್ಟಿಸಿದ್ದಾರೆ. ಮಂಗಳವಾರ ಇಲ್ಲಿ ಆರಂಭಗೊಂಡ ಚಾಂಪಿಯನ್‌ಶಿಪ್‌ನ 87 ಕೆ.ಜಿ ವಿಭಾಗದ ಫೈನಲ್‌ನಲ್ಲಿ ಸುನಿಲ್, ಕಿರ್ಗಿಸ್ತಾನದ ಅಜಾತ್ ಸಲಿಡಿನೊವ್ ವಿರುದ್ಧ 5-0 ಅಂತರದಲ್ಲಿ ಜಯಿಸಿ ಸ್ವರ್ಣ ಪದಕಕ್ಕೆ ಮುತ್ತಿಟ್ಟರು. 1993ರಲ್ಲಿ ಪಪ್ಪು ಯಾದವ್ ಚಿನ್ನ ಗೆದ್ದು ದಾಖಲೆ ಬರೆದಿದ್ದರು. ಆ ಸಾಲಿಗೆ ಸುನಿಲ್ ಸೇರ್ಪಡೆಗೊಂಡಿದ್ದಾರೆ.
ಏಷ್ಯನ್ ಕುಸ್ತಿ: ವಿನೇಶ್, ಭಜರಂಗ್ ಮೇಲೆ ಹೆಚ್ಚಿನ ನಿರೀಕ್ಷೆ
2019ರ ಕೂಟದಲ್ಲಿ ಬೆಳ್ಳಿಗೆ ತೃಪ್ತಿಪಟ್ಟಿದ್ದ ಸುನಿಲ್, ಸೆಮಿಫೈನಲ್‌ನಲ್ಲಿ ಕಜಕಸ್ತಾನದ ಅಜ್ಮತ್ ಕುಸ್ತುಬಯೇವ್ ವಿರುದ್ಧ 12-8ರ ಅಂತರದಲ್ಲಿ ಗೆದ್ದು ಫೈನಲ್‌ಗೇರಿದರು. ಒಂದು ಹಂತದಲ್ಲಿ 1-8ರಿಂದ ಹಿಂದಿದ್ದ ಸುನಿಲ್ ಸತತ 11 ಅಂಕ ಗಳಿಸಿ ಜಯಭೇರಿ ಬಾರಿಸಿದರು.
ಕನ್ನಡಿಗ ಅರ್ಜುನ್‌ಗೆ ಕಂಚು
ದಾವಣಗೆರೆ ಕ್ರೀಡಾ ಹಾಸ್ಟೆಲ್‌ನ ವಿದ್ಯಾರ್ಥಿ ಅರ್ಜುನ್ ಹಲಕುರ್ಕಿ, ಗ್ರೀಕೋ ರೋಮನ್ ವಿಭಾಗದ 55 ಕೆ.ಜಿ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿದರು. ಹಿರಿಯರ ವಿಭಾಗದಲ್ಲಿ ಇದು ಅವರ ಮೊದಲ ಅಂತಾರಾಷ್ಟ್ರೀಯ ಪದಕ. ಸೆಮಿಫೈನಲ್‌ನಲ್ಲಿ ಇರಾನ್‌ನ ನಾಸೆರ್‌ಪೊರ್ ವಿರುದ್ಧ 7-1ರಿಂದ ಮುಂದಿದ್ದ ಅರ್ಜುನ್, ಅಂತಿಮವಾಗಿ 7-8ರಲ್ಲಿ ಸೋಲುಂಡರು. ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಕೊರಿಯಾದ ಡೊಂಗ್‌ಹೆಯೊಕ್ ವಿರುದ್ಧ 7-4ರಲ್ಲಿ ಜಯಗಳಿಸಿದರು.
ಕೂಟದ ಮೊದಲ ದಿನ ಭಾರತ 1 ಚಿನ್ನ ಹಾಗೂ 1 ಕಂಚಿನ ಪದಕ ಗೆದ್ದುಕೊಂಡಿತು. ಬುಧವಾರ ಗ್ರೀಕೋ ರೋಮನ್ ವಿಭಾಗದ ಸ್ಪರ್ಧೆಗಳು ಮುಕ್ತಾಯಗೊಳ್ಳಲಿವೆ.