ಏಷ್ಯನ್ ಶೂಟಿಂಗ್: ಭಾರತಕ್ಕೆ ಮತ್ತೆ 8 ಪದಕ
ಏಷ್ಯನ್ ಶೂಟಿಂಗ್ ಚಾಂಪಿಯನ್’ಶಿಪ್‌ನಲ್ಲಿ ಭಾರತೀಯ ಶೂಟರ್‌ಗಳು ಎರಡನೇ ದಿನವೂ ಭರ್ಜರಿ ಪದಕದ ಬೇಟೆ ನಡೆಸಿದ್ದು, 8 ಪದಕಗಳನ್ನು ಬಾಚಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ದೋಹಾ[ನ.07]: 14ನೇ ಏಷ್ಯನ್ ಶೂಟಿಂಗ್ ಚಾಂಪಿಯನ್’ಶಿಪ್‌ನಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ಕೂಟದ 2ನೇ ದಿನವಾದ ಬುಧವಾರ ಭಾರತೀಯ ಶೂಟರ್‌ಗಳು ಒಟ್ಟು 8 ಪದಕಗಳನ್ನು ಗೆದ್ದರು. ಮೊದಲ ದಿನ 5 ಪದಕ ಗೆದ್ದಿದ್ದ ಭಾರತ, ತನ್ನ ಖಾತೆಯಲ್ಲಿ ಒಟ್ಟು 4 ಚಿನ್ನ, 3 ಬೆಳ್ಳಿ ಹಾಗೂ 6 ಕಂಚಿನ ಪದಕಗಳನ್ನು ಇರಿಸಿಕೊಂಡಿದೆ.
ಏಷ್ಯನ್ ಶೂಟಿಂಗ್ ಕೂಟ: ಚಿನ್ನಕ್ಕೆ ’ಶೂಟ್’ ಮಾಡಿದ ಮನು ಭಾಕರ್
ಬುಧವಾರ 8 ಪದಕಗಳನ್ನು ಗೆದ್ದರೂ, 3 ಒಲಿಂಪಿಕ್ ಕೋಟಾಗಳು ಭಾರತದ ಕೈತಪ್ಪಿದವು. ವೈಯುಕ್ತಿಕ ವಿಭಾಗದಲ್ಲಿ ಕೈನಾನ್ ಚೆನೈ, ಅನೀಶ್ ಭನವಾಲಾ ನಿರಾಸೆ ಮೂಡಿಸಿದರು. ಪುರುಷರ ಟ್ರ್ಯಾಪ್ ತಂಡಗಳ ಸ್ಪರ್ಧೆಯಲ್ಲಿ ಕ್ಯಾನನ್, ಮಾನವ್ ಜಿತ್ ಮತ್ತು ಪೃಥ್ವಿರಾವ್ ಅವರಿದ್ದ ಭಾರತ ತಂಡ 357 ಅಂಕಗಳಿಸಿ ಬೆಳ್ಳಿ ಗೆದ್ದಿತು. ಕುವೈತ್ ತಂಡ ಚಿನ್ನ ಜಯಿಸಿತು.
25ಮೀ. ರ‍್ಯಾಪಿಡ್ ಫೈರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಅನೀಶ್, ಭವೇಶ್, ಆದರ್ಶ್ ಅವರಿದ್ದ ತಂಡ 1,716 ಅಂಕಗಳಿಸಿ ಕಂಚು ಗೆದ್ದಿತು. ಕಿರಿಯರ ವಿಭಾಗದ 25 ಮೀ. ರ‍್ಯಾಪಿಡ್ ಫೈರ್ ಪಿಸ್ತೂಲ್ ಸ್ಫರ್ಧೆಯಲ್ಲಿ ಆಯುಷ್, ಸಾಂಗ್ವಾನ್, ಜಪ್ತೇಶ್ ಅವರನ್ನೊಳಗೊಂಡ ತಂಡ ಕಂಚು ಜಯಿಸಿತು. 50 ಮೀ. ರೈಫಲ್ ಪ್ರೊನ್ ಸ್ಪರ್ಧೆಯಲ್ಲಿ ನೀರಜ್, ಅಬಿದ್ ಅಲಿ ಖಾನ್, ಹರ್ಷ್‌ರಾಜ್ ಅವರಿದ್ದ ತಂಡ, ಚೀನಾ ಹಾಗೂ ಕೊರಿಯಾ ತಂಡಗಳನ್ನು ಹಿಂದಿಕ್ಕಿ 1845 ಅಂಕಗಳಿಸಿ ಚಿನ್ನ ಗೆದ್ದಿತು. ಇದೇ ವಿಭಾಗದಲ್ಲಿ ನೀರಜ್ 616.3 ಅಂಕ ವೈಯಕ್ತಿಕ ವಿಭಾಗದಲ್ಲಿ ಬೆಳ್ಳಿ ಗೆದ್ದರೆ, ಅಬಿದ್ ಅಲಿ ಖಾನ್ 614.4 ಅಂಕ ವೈಯಕ್ತಿಕ ವಿಭಾಗದಲ್ಲಿ ಕಂಚು ಗೆದ್ದರು.
ಕಿರಿಯ ಮಹಿಳೆಯರ ಪ್ರೊನ್ ತಂಡ ಸ್ಪರ್ಧೆಯಲ್ಲಿ ನಿಶ್ಚಲ್, ಭಕ್ತಿ ಮತ್ತು ಕಿನ್ನೊರಿ ಅವರಿದ್ದ ತಂಡ 1836.3 ಅಂಕಗಳಿಸಿ ಚಿನ್ನದ ಪದಕ ಗೆದ್ದಿತು. ನಿಶ್ಚಲ್ ಮತ್ತು ಭಕ್ತಿ ವೈಯಕ್ತಿಕ ವಿಭಾಗದಲ್ಲಿ ಕ್ರಮವಾಗಿ 615.3 ಮತ್ತು 614.2 ಅಂಕಗಳಿಸಿ ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಗೆದ್ದರು. ಕಿರಿಯರ ಪುರುಷ ಹಾಗೂ ಮಹಿಳಾ ವಿಭಾಗದ 50ಮೀ. ರೈಫಲ್ ಪ್ರೊನ್ ಸ್ಪರ್ಧೆಯಲ್ಲಿ ಭಾರತದ ಶೂಟರ್‌ಗಳು 2 ಚಿನ್ನ, 2 ಬೆಳ್ಳಿ ಹಾಗೂ 2 ಕಂಚು ಗೆದ್ದರು.