ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್: 10 ಪದಕ ಗೆದ್ದ ಭಾರತದ ಮಹಿಳಾ ಬಾಕ್ಸರ್‌ಗಳು
* ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭರ್ಜರಿ ಪದಕ ಬೇಟೆಯಾಡಿದ ಭಾರತದ ಮಹಿಳಾ ಬಾಕ್ಸರ್‌ಗಳು
* ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ 10 ಪದಕ ಬಾಚಿಕೊಂಡ ಭಾರತೀಯ ವನಿತೆಯರು.
* ಸತತ ಎರಡನೇ ಬಾರಿಗೆ ಚಿನ್ನದ ಪದಕಕ್ಕೆ ಮುತ್ತಿಕ್ಕಿದ ಪೂಜಾ ರಾಣಿ, ಬೆಳ್ಳಿಗೆ ತೃಪ್ತಿಪಟ್ಟ ಮೇರಿ.
ದುಬೈ(ಮೇ.31): ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಮಹಿಳಾ ಬಾಕ್ಸರ್‌ಗಳು ಭರ್ಜರಿ ಪದಕಗಳ ಬೇಟೆಯಾಡಿದ್ದು, ಒಂದು ಚಿನ್ನ, ಮೂರು ಬೆಳ್ಳಿ ಹಾಗೂ 6 ಕಂಚಿನ ಪದಕ ಸೇರಿದಂತೆ ಒಟ್ಟು 10 ಪದಕಗಳೊಂದಿಗೆ ತಮ್ಮ ಅಭಿಯಾನ ಮುಗಿಸಿದ್ದಾರೆ.
ಪೂಜಾ ರಾಣಿ ಸತತ ಎರಡನೇ ಬಾರಿಗೆ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಮಾಲ್ಡ್ವಾದ ಮೊವಲ್ನೋವಾ ಅವರನ್ನು ಫೈನಲ್‌ನಲ್ಲಿ 5-0 ಅಂತರದಲ್ಲಿ ಅನಾಯಾಸವಾಗಿ ಮಣಿಸುವ ಮೂಲಕ ಪೂಜಾ ರಾಣಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ ಪೂಜಾ ರಾಣಿ ರಿಂಗ್‌ನಲ್ಲಿ ಮಾರಕ ಪಂಚ್‌ಗಳ ಮೂಲಕ ಎದುರಾಳಿ ಬಾಕ್ಸರ್ ಅವರನ್ನು ತಬ್ಬಿಬ್ಬುಗೊಳಿಸಿದರು.
ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಅದ್ಭುತ ಪ್ರದರ್ಶನ ತೋರಿದ ಭಾರತದ ಮಹಿಳಾ ಬಾಕ್ಸರ್‌ಗಳಿಗೆ ಕ್ರೀಡಾ ಸಚಿವ ಕಿರಣ್ ರಿಜಿಜು ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಅಂದ ಹಾಗೆ ಇದು ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಪೂಜಾಗೆ ಒಲಿದ 4ನೇ ಪದಕವಾಗಿದೆ. ಈ ಮೊದಲು 2012ರಲ್ಲಿ ಬೆಳ್ಳಿ, 2015ರಲ್ಲಿ ಕಂಚಿನ ಪದಕ ಜಯಿಸಿದ್ದ ಪೂಜಾ 2019 ಹಾಗೂ 2021ರಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್: ಬೆಳ್ಳಿಗೆ ತೃಪ್ತಿಪಟ್ಟ ಮೇರಿ ಕೋಮ್!
ಇನ್ನುಳಿದಂತೆ ಫೈನಲ್ ಪ್ರವೇಶಿಸಿ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ್ದ ಒಲಿಂಪಿಕ್ಸ್ ಪದಕ ವಿಜೇತೆ ಮೇರಿ ಕೋಮ್(51 ಕೆ.ಜಿ) ಲಾಲ್‌ಬುತ್ಸಾಯಿ(64 ಕೆ.ಜಿ) ಹಾಗೂ ಅನುಪಮಾ(81+ ಕೆ.ಜಿ) ವಿಭಾಗದಲ್ಲಿ ಕೂದಲೆಳೆ ಅಂತರದಲ್ಲಿ(ಎಲ್ಲರೂ 3-2 ಅಂತರದಲ್ಲಿ ಸೋಲು) ಮುಗ್ಗರಿಸುವ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು.
ಇನ್ನುಳಿದಂತೆ ಸಿಮ್ರನ್‌ಜಿತ್ ಕೌರ್(60 ಕೆ.ಜಿ), ಲೌಲ್ಲಿನ್ ಬೋರ್ಗನ್(69 ಕೆಜಿ), ಜಾಸ್ಮೈನ್(57 ಕೆ.ಜಿ), ಸಾಕ್ಷಿ ಚೌಧರಿ(54 ಕೆ.ಜಿ), ಮೋನಿಕಾ(48 ಕೆ.ಜಿ) ಹಾಗೂ ಸವೇತಿ(81 ಕೆ.ಜಿ) ಸೆಮಿಫೈನಲ್‌ನಲ್ಲೇ ಮುಗ್ಗರಿಸುವ ಮೂಲಕ ಕಂಚಿನ ಪದಕಕ್ಕೆ ಕೊರಳೊಡ್ಡಿದರು.