ಹಾಕಿಯಿಂದ ಲಾಭವಿಲ್ಲ, ದೂರ ಮಾಡಿದ್ದ ತಂಡಕ್ಕೆ ಆಪತ್ಭಾಂದವನಾಗಿದ್ದು ಪಟ್ನಾಯಕ್!
* ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲು ಸಜ್ಜಾದ ಭಾರೀಯ ಮಹಿಳಾ ಹಾಕಿ ತಂಡ
* ಹಾಕಿಯಿಂದ ಲಾಭವಿಲ್ಲ ಎಂದು ಉದ್ಯಮಿಗಳು, ಸರ್ಕಾರ ದೂರ ಮಾೆಡಿದ್ದ ತಂಡಕ್ಕೆ ಆಸರೆಯಾಗಿದ್ದು ಒಡಿಶಾ
* ಒಡಿಶಾ ಸರ್ಕಾರ, ಸಿಎಂ ಪಟ್ನಾಯಕ್ ಕೊಡುಗೆ ಸ್ಮರಿಸಿದ ನೆಟ್ಟಿಗರು
ಭುವನೇಶ್ವರ(ಆ.04): ಭಾರತೀಯ ಮಹಿಳಾ ಹಾಕಿ ತಂಡವು ಇತಿಹಾಸ ನಿರ್ಮಿಸಿದೆ. ಸೋಮವಾರದಂದು ಇದೇ ಮೊದಲ ಬಾರಿಗೆ ಭಾರತದ ಮಹಿಳಾ ಹಾಕಿ ತಂಡ ಒಲಿಂಪಿಕ್ಸ್ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ ಹೀಗಿರುವಾಗ ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಒಡಿಶಾ ಸರ್ಕಾರದ ಕೊಡುಗೆಯನ್ನು ಮೆಲುಕು ಹಾಕಲಾರಂಭಿಸಿದ್ದಾರೆ. ನಿರೀಕ್ಷೆ ಇಲ್ಲದಿದ್ದ ಸಂದರ್ಭದಲ್ಲಿ ಪುರುಷ ಹಾಗೂ ಮಹಿಳಾ ತಂಡ ಅದ್ಭುತ ಸಾಧನೆ ಮಾಡಿವೆ. ಅಲ್ಲದೇ ಮಹಿಳಾ ತಂಡ ಸೆಮಿಫೈನಲ್ ಪ್ರವೇಶಿಸಿದ್ದು, ಸುಮಾರು 50 ವರ್ಷಗಳ ಬಳಿಕ ಭಾರತ ಪದಕಕ್ಕೆ ಹತ್ತಿರವಾಗುತ್ತಿದೆ.
ಅಷ್ಟಕ್ಕೂ ಒಲಿಂಪಿಕ್ಸ್‌ಗೂ, ಒಡಿಶಾ ಸರ್ಕಾರಕ್ಕೂ ಯಾವ ನಂಟು? ಎಂಬ ಪ್ರಶ್ನೆ ಕಾಡುವುದು ಸಹಜ. ಆದರೆ ಭಾರತೀಯ ಪುರುಷರ ಹಾಕಿ ತಂಡದ ಪ್ರಸ್ತುತ ಉಪನಾಯಕ, ಬೀರೇಂದ್ರ ಲಾಕ್ರಾ ಮತ್ತು ಮಹಿಳಾ ತಂಡದ ದೀಪ್ ಗ್ರೇಸ್ ಎಕ್ಕಾ ಇಬ್ಬರೂ ಒಡಿಶಾದವರು ಎಂಬುವುದು ಉಲ್ಲೇಖನೀಯ. ಅಲ್ಲದೇ 2018ರಿಂದ ಒಡಿಶಾ ಸರ್ಕಾರ ಭಾರತೀಯ ಹಾಕಿ ತಂಡದ ಪ್ರಾಯೋಜಕತ್ವ ವಹಿಸಿಕೊಂಡಿದೆ ಎಂಬುವುದು ತಿಳಿದುಕೊಳ್ಳಲೇಬೇಕಿರುವ ವಿಚಾರ.
2018ರ ಫೆಬ್ರವರಿಯ ವರದಿಯನ್ವಯ ಒಡಿಶಾ ಸರ್ಕಾರ, ಮುಂದಿನ ಐದು ವರ್ಷದವರೆಗೆ ಭಾರತೀಯ ಹಾಕಿ ತಂಡದ ಪ್ರಾಯೋಜಕತ್ವ ವಹಿಸಿಕೊಂಡಿದ್ದು, ಈಗಾಗಲೇ ರಾಜ್ಯದ ಹೆಸರು ಆಟಗಾರರ ಜರ್ಸಿಯಲ್ಲಿ ರಾರಾಜಿಸುತ್ತಿದೆ. ಇದು ಸುಮಾರು 150 ಕೋಟಿ ರೂ. ಮೊತ್ತದ ಒಪ್ಪಂದವೆನ್ನಲಾಗಿದ್ದು, ಈ ಹಿಂದಿನ ಪ್ರಾಯೋಜಕರಾದ ಸಹಾರಾ ಪಾವತಿಸುತ್ತಿದ್ದ ಮೊತ್ತಕ್ಕಿಂತ ಸುಮಾರು ಮೂರು ಅಥವಾ ನಾಲ್ಕು ಪಟ್ಟು ಹೆಚ್ಚಾಗಬಹುದು ಎಂದು ವರದಿಗಳು ಉಲ್ಲೇಖಿಸಿವೆ.
ಇಂದು ಒಲಿಂಪಿಕ್ಸ್‌ನಲ್ಲಿ ಭಾರತೀಯ ತಂಡ ಸಾಧನೆ ಮಾಡಿದ ಸಂದರ್ಭದಲ್ಲಿ ಇದರ ಶ್ರೇಯಸ್ಸು ಪಡೆಯಲು ಎಲ್ಲರೂ ಮುಂದಾಗಿದ್ದಾರೆ. ಆದರೆ ಈ ಪಂದ್ಯದಿಂದ ಯಾವುದೇ ಲಾಭವಿಲ್ಲ ಎಂಬ ಕಾರಣಕ್ಕೆ ತಂಡಕ್ಕೆ ಪ್ರಾಯೋಜಕತ್ವ ವಹಿಸಿಕೊಳ್ಳಲು ಉದ್ಯಮಿಗಳು ಹಾಗೂ ಯಾವುದೇ ಸರ್ಕಾರ ಮುಂದಾಗದಾಗ ಸಿಎಂ ಪಟ್ನಾಯಕ್ ಹಾಗೂ ಒಡಿಶಾ ಸರ್ಕಾರ ಹಾಕಿ ತಂಡದ ಕೈ ಹಿಡಿದಿತ್ತು.
ಭಾರತೀಯ ಹಾಕಿ ತಂಡದ ಪ್ರಾಯೋಜಕತ್ವ ವಹಿಸಿಕೊಂಡ ಒಡಿಶಾ ಸರ್ಕಾರ ಈಗಾಗಲೇ ಭುವನೇಶ್ವರದಲ್ಲಿ ಪುರುಷರ ವಿಶ್ವಕಪ್, ವಿಶ್ವ ಲೀಗ್, ಪ್ರೊ-ಲೀಗ್, ಒಲಿಂಪಿಕ್ ಅರ್ಹತಾ ಪಂದ್ಯಗಳು ಸೇರಿದಂತೆ ಪ್ರಮುಖ ಹಾಕಿ ಪಂದ್ಯಾವಳಿಗಳನ್ನು ನಡೆಸಿದೆ. ಸದ್ಯ ಬಾರತೀಯ ತಂಡ ಒಲಿಂಪಿಕ್ಸ್‌ನಲ್ಲಿ ಪದಕಕ್ಕೆ ಕೊರಳೊಡ್ಡಲು ತಯಾರಾಗಿರುವ ಸಂದರ್ಭದಲ್ಲಿ, ಹಾಕಿ ತಂಡದ ಪ್ರಾಯೋಜಕತ್ವ ವಹಿಸಿ ಕ್ರೀಡಾಪಟುಗಳಿಗೆ ಮತ್ತಷ್ಟು ಪ್ರೋತ್ಸಾಹ ಕೊಟ್ಟ ಒಡಿಶಾ ಸರ್ಕಾರ ಹಾಗೂ ಸಿಎಂ ನವೀನ್ ಪಟ್ನಾಯಕ್‌ರವರನ್ನು ನೆನಪಿಸಿಕೊಂಡಿರುವ ನೆಟ್ಟಿಗರು ಹೃತ್ಪೂರ್ವಕ ಧನ್ಯವಾದ ಅರ್ಪಿಸಿದ್ದಾರೆ.