* ನೀರಜ್‌ಗೆ ‘ಲೈಂಗಿಕ ಜೀವ​ನ​’ದ ಬಗ್ಗೆ ಕೇಳಿದ ರಾಜೀವ್‌ ಸೇಠಿ* ನೀರಜ್‌ಗೆ ಇತಿಹಾಸ ತಜ್ಞನಿಂದ ಮುಜುಗರದ ಪ್ರಶ್ನೆ* ಸಾಮಾ​ಜಿಕ ಮಾಧ್ಯ​ಮ​ಗ​ಳಲ್ಲಿ ಭಾರೀ ಆಕ್ಷೇ​ಪ

ನವದೆಹಲಿ(ಸೆ.05): 2020ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಜಾವೆಲಿನ್‌ ಎಸೆತದಲ್ಲಿ ಭಾರತಕ್ಕೆ ಚಿನ್ನ ತಂದುಕೊಟ್ಟನೀರಜ್‌ ಚೋಪ್ರಾ ಅವರಿಗೆ ಇತಿಹಾಸ ತಜ್ಞರೊಬ್ಬರು ಮುಜುಗರದ ಪ್ರಶ್ನೆಯೊಂದನ್ನು ಕೇಳಿದ ಘಟನೆ ನಡೆದಿದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದ್ದು, ಅಶ್ಲೀಲ ಪ್ರಶ್ನೆ ಕೇಳಿದ ಇತಿಹಾಸಕಾರನ ವಿರುದ್ಧ ಭಾರೀ ಆಕ್ರೋಶ ಭುಗಿಲೆದ್ದಿದೆ.

ಚೋಪ್ರಾ ಅವರಿಗೆ ಆನ್‌​ಲೈನ್‌ ಸಂದ​ರ್ಶ​ನ​ದಲ್ಲಿ ಇತಿ​ಹಾಸ ತಜ್ಞ ರಾಜೀವ್‌ ಸೇಠಿ ಅವ​ರು ‘ಲೈಂಗಿಕತೆ ಮತ್ತು ಅಥ್ಲೆಟಿಕ್ಸ್‌ ಅನ್ನು ಹೇಗೆ ಸರಿದೂಗಿಸುತ್ತೀರಿ?’ ಎಂದು ಪ್ರಶ್ನಿಸಿದರು. ಮುಜು​ಗ​ರಕ್ಕೆ ಈಡಾ​ಗಿ ಇದಕ್ಕೆ ಉತ್ತರಿಸಲು ನೀರಜ್‌ ನಿರಾಕರಿಸಿ ‘ಸಾ​ರಿ’(ಕ್ಷಮಿಸಿ) ಎಂದರು. ಆದರೆ ಇಷ್ಟಕ್ಕೆ ಸುಮ್ಮನಾಗದ ಸೇಠಿ, ಪುನಃ ಅದೇ ಪ್ರಶ್ನೆ ಕೇಳಿದರು. ಆಗಲೂ ನೀರಜ್‌ ಉತ್ತರಿಸಲಿಲ್ಲ. ಕೊನೆಗೆ ರಾಜೀವ್‌ ಕ್ಷಮೆ ಕೇಳಿ​ದ್ದಾ​ರೆ.

ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದು ತಾಯ್ನಾಡಿಗೆ ಆಗಮಿಸಿದ ಬಳಿಕ ನೀರಜ್‌ ಅವರಿಗೆ ಆದ ಕಹಿ ಅನುಭವ ಇದೇ ಮೊದಲೇನಲ್ಲ. ಇದಕ್ಕೂ ಮುನ್ನ ಪ್ರಸಿದ್ಧ ಟೀವಿ ಆ್ಯಂಕರ್‌ ಒಬ್ಬರು ಸಂದರ್ಶನದ ವೇಳೆ ನೀರಜ್‌ ಅವರಿಗೆ ತಮ್ಮ ಪ್ರೇಯಸಿ ಬಗ್ಗೆ ತಿಳಿಸಿ ಎಂದು ಕೇಳಿದ್ದರು.

ಅಲ್ಲದೆ ಪಾಕಿಸ್ತಾನದ ಜಾವೆಲಿನ್‌ ಆಟಗಾರ ಅರ್ಷದ್‌ ನದೀಂ ಬಗ್ಗೆ ಪ್ರಸ್ತಾವನೆ ಸೇರಿದಂತೆ ಇನ್ನಿತರ ವಿಚಾರಗಳ ಕುರಿತಾಗಿ ಟ್ವೀಟ್‌ ಮಾಡಿದ್ದ ನೀರಜ್‌ ಅವರು ಅನಗತ್ಯ ವಿವಾದಗಳಿಗೆ ಸಿಲುಕಿದ್ದರು.