ಅಖಿಲ ಭಾರತ ಮಹಿಳಾ ಕಬಡ್ಡಿ ಟೂರ್ನಿ: ಲಕ್ಷ-ಲಕ್ಷ ಬಹುಮಾನ ಗೆದ್ದ ಮಹಿಳಾ ತಂಡಗಳು..!
ಬಾಗಲಕೋಟೆಯ ಮಹಾಲಿಂಗಪೂರದಲ್ಲಿ ನಡೆದ ಭರ್ಜರಿ ಪಂದ್ಯಾವಳಿ
ರಾಷ್ಟ್ರ ಮಟ್ಟದ ಪ್ರಮುಖ ಮಹಿಳಾ ತಂಡಗಳು ಭಾಗಿ
ಲಕ್ಷ ಲಕ್ಷ ಬಹುಮಾನ ಪಡೆದ ತಂಡಗಳು.
ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್
ಬಾಗಲಕೋಟೆ(ಜ.06): ಇತ್ತೀಚಿನ ದಿನಗಳಲ್ಲಿ ಕ್ರೀಡೆಗಳು ನಶಿಸಿ ಹೋಗುತ್ತಿದ್ದು, ಇವುಗಳ ಮಧ್ಯೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಕೊರೋನಾ ಹಾವಳಿಯಿಂದ ರಾಷ್ಟ್ರ ಮಟ್ಟದ ಪಂದ್ಯಾವಳಿಗಳೇ ವಿರಳವಾಗಿದ್ದವು, ಆದರೆ ಇದೀಗ ಮಹಿಳಾ ಕಬಡ್ಡಿಗೂ ಉತ್ತೇಜನ ನೀಡಬೇಕೆಂಬ ಉದ್ದೇಶದಿಂದಲೇ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪೂರದಲ್ಲಿ ಅಖಿಲ ಭಾರತ ಮಹಿಳಾ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿತ್ತು. ಈ ಕುರಿತ ವರದಿ ಇಲ್ಲಿದೆ.
ಒಂದೆಡೆ ಗಂಡು ಮಕ್ಕಳಿಗೆ ತಾವೇನು ಕಮ್ಮಿ ಇಲ್ಲವೆಂಬಂತೆ ಭರ್ಜರಿ ಕಬಡ್ಡಿ ಆಡಿದ ಯುವತಿಯರು, ಮತ್ತೊಂದೆಡೆ ಯುವತಿಯರ ಕಬಡ್ಡಿ ಆಟ ಕಂಡು ಚಪ್ಪಾಳೆ ತಟ್ಟಿ ಹುರುದುಂಬಿಸುತ್ತಿರುವ ಪ್ರೇಕ್ಷಕರು, ಕ್ರೀಡೆ ಉತ್ತೇಜನಕ್ಕಾಗಿ ವಿಜೇತರಿಗೆ ಲಕ್ಷ ಲಕ್ಷ ಬಹುಮಾನ ನೀಡಿ ಕ್ರೀಡಾಪಟುಗಳನ್ನ ಗೌರವಿಸಿದ ಆಯೋಜಕರು, ಅಂದಹಾಗೆ ಇಂತಹವೊಂದು ಕ್ಷಣಕ್ಕೆ ಸಾಕ್ಷಿಯಾಗಿದ್ದು ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪೂರ ಪಟ್ಟಣ. ಹೌದು, ಕಬಡ್ಡಿ ಅಮೆಚೂರು ಪೆಡ್ರೇಶನ್ ಸಹಯೋಗದಲ್ಲಿ ಕ್ರೀಡಾ ಪ್ರೇಮಿ ಸಿದ್ದು ಕೊಣ್ಣೂರ ಅವರ ಸಾರಥ್ಯದ ಸಿದ್ದು ಸ್ಪೋರ್ಟ್ಸ ಕ್ಲಬ್ ವತಿಯಿಂದ ಅಖಿಲ ಭಾರತ ಮಹಿಳಾ ಕಬಡ್ಡಿ ಪಂದ್ಯಾವಳಿಯನ್ನ ಆಯೋಜನೆ ಮಾಡಲಾಗಿತ್ತು. ನಗರದ ಕೆಎಲ್ಇ ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರೀಯ ಮಹಿಳಾ ಕಬಡ್ಡಿ ಪಂದ್ಯಾವಳಿಯಲ್ಲಿ ದೇಶದ ಪ್ರತಿಷ್ಠಿತ 16 ಮಹಿಳಾ ಕಬಡ್ಡಿ ತಂಡಗಳು ಭಾಗವಹಿಸುವ ಮೂಲಕ ಒಟ್ಟು 24 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ಹೊನಲು ಬೆಳಕಿನ ಮಧ್ಯೆ ನಡೆದ ಮಹಿಳಾ ಕಬಡ್ಡಿ ಪಂದ್ಯಾವಳಿಗಳನ್ನ ನೋಡಲು ಸಾವಿರಾರು ಸಂಖ್ಯೆಯಲ್ಲಿ ಜನ್ರು ಸೇರಿದ್ದರು. ಕ್ರೀಡೆಗಳು ನಶಿಸಿ ಹೋಗುತ್ತಿರುವ ಹಿನ್ನೆಲೆಯಲ್ಲಿ ಇಂದು ಮಹಿಳಾ ಕಬಡ್ಡಿಗೆ ಇನ್ನಷ್ಟು ಉತ್ತೇಜನ ನೀಡಬೇಕೆಂಬ ಕಾರಣದಿಂದ ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ ಎಂದು ಕ್ರೀಡಾಪ್ರೇಮಿ ಸಿದ್ದು ಕೊಣ್ಣೂರ ಹೇಳಿದರು.
ರಾಷ್ಟ್ರ ಮಟ್ಟದ ಪ್ರಬಲ ಮಹಿಳಾ ತಂಡಗಳು ಭಾಗಿ:
ಇನ್ನು ಈ ಅಖಿಲ ಭಾರತ ಮಹಿಳಾ ಕಬಡ್ಡಿ ಪಂದ್ಯಾವಳಿಯಲ್ಲಿ ದೆಹಲಿ, ಮದ್ಯಪ್ರದೇಶ, ಹರಿಯಾಣ ಸೇರಿದಂತೆ ದೇಶದ ನಾನಾ ರಾಜ್ಯಗಳಿಂದ ಪ್ರಬಲ ಮಹಿಳಾ ಕಬಡ್ಡಿ ತಂಡಗಳು ಆಗಮಿಸಿದ್ದವು, ಅಂತಾರಾಜ್ಯದ 16 ತಂಡಗಳು ಸೇರಿ ಒಟ್ಟು ಒಟ್ಟು 24 ತಂಡಗಳು ಭಾಗವಹಿಸಿದ್ದವು. ಅತ್ತ ಮಹಿಳಾ ಕ್ರೀಡಾಳುಗಳು ಭರ್ಜರಿ ರೈಡ್ ಮಾಡಿ ತಮ್ಮ ಕಬಡ್ಡಿ ಕ್ರೀಡಾ ಪ್ರದರ್ಶನ ಮಾಡಿದರೆ ಇತ್ತ ನೆರೆದಿದ್ದ ಸಾವಿರಾರು ಜನ ಕೇಕೆ ಹಾಕಿ ಸಂಭ್ರಮಿಸಿ ಕ್ರೀಡಾಳುಗಳಿಗೆ ಪ್ರೋತ್ಸಾಹ ಮಾಡುತ್ತಿದ್ದದ್ದು ಕಂಡು ಬಂತು. ಅಲ್ಲದೆ ಊಟ ವಸತಿ ಸಹಿತ ವಿವಿಧ ಸೌಲಭ್ಯಗಳನ್ನು ನೀಡುವ ಮೂಲಕ ಕಬಡ್ಡಿ ಕ್ರೀಡೆಯನ್ನು ಸುಗಮವಾಗಿ ಆಯೋಜಿಸಿದ್ದು ಖುಷಿ ತಂದಿದೆ ಎಂದು ಮಹಿಳಾ ಕ್ರೀಡಾಪಟುಗಳು ಅಭಿಪ್ರಾಪಟ್ಟರು.
SA20 2023: ಸೌಥ್ ಆಫ್ರಿಕಾ ಟಿ20 ಲೀಗ್ ಬಗ್ಗೆ ಕ್ರಿಕೆಟ್ ಅಭಿಮಾನಿಗಳು ತಿಳಿದಿರಬೇಕಾದ ಸಂಗತಿಗಳಿವು..!
ವಿಜೇತ ಮಹಿಳಾ ಕಬಡ್ಡಿ ತಂಡಗಳಿಗೆ ಲಕ್ಷ ಲಕ್ಷ ಬಹುಮಾನದ ಗೌರವ:
ಇನ್ನು ಕಬಡ್ಡಿ ಕ್ರೀಡೆ ಉತ್ತೇಜಿಸಲೆಂದೆ ಆಯೋಜನೆಯಾಗಿ ಸತತ ಮೂರು ದಿನಗಳ ಕಾಲ ನಡೆದ ಅಂತಾರಾಷ್ಟ್ರೀಯ ಮಹಿಳಾ ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನ 1 ಲಕ್ಷ 50 ಸಾವಿರ, ದ್ವೀತಿಯ ಬಹುಮಾನ 1 ಲಕ್ಷ , ತೃತೀಯ ಬಹುಮಾನಗಳು 50 ಸಾವಿರದಂತೆ ಎರಡು ತಂಡಗಳಿಗೆ ಒಟ್ಟು ನಾಲ್ಕು ಬಹುಮಾನ ನೀಡಲಾಯಿತು. ಮೊದಲ ಬಹುಮಾನ ವೆಸ್ಟರ್ನ್ ರೈಲ್ವೆ ಪಾಲಾದರೆ, ದ್ವೀತಿಯ ಬಹುಮಾನ ದೆಹಲಿಯ ಪಾಲಂ ತಂಡ ಪಡೆಯಿತು, ಇನ್ನು ತೃತೀಯ ಬಹುಮಾನ ಮೂಡಬಿದಿರೆಯ ಆಳ್ವಾಸ ತಂಡಕೆ ಒಲಿದು, ನಾಲ್ಕನೇ ಬಹುಮಾನ ಚಿಂಚಲಿಯ ಜೈ ಮಹಾಕಾಳಿ ತಂಡ ಪಡೆಯಿತು.ಇನ್ನು ವಿಜೇತ ತಂಡಗಳು ಬಹುಮಾನ, ಪಾರಿತೋಷಕ ಪಡೆದು ಸಂಭ್ರಮಿಸಿದರು. ಇನ್ನು ದೇಶದ ವಿವಿಧ ಭಾಗಗಳಿಂದ ಬಂದ ಕಬಡ್ಡಿ ಆಟಗಾರ್ತಿಯರಿಗೆ ಊಟ ವಸತಿ ಸೇರಿದಂತೆ ಎಲ್ಲ ಸೌಲಭ್ಯ ನೀಡಲಾಗಿತ್ತು. ಇನ್ನು ನಿರಂತರ ಮೂರು ದಿನಗಳ ಕಾಲ ನಡೆದ ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರತಿನಿತ್ಯ ಸಾವಿರಾರು ಜನ್ರು ಸೇರುವ ಮೂಲಕ ಪ್ರೋತ್ಸಾಹ ನೀಡಿದ್ರು ಅಂತಾರೆ ನಂದುಗೌಡ ಪಾಟೀಲ.
ಒಟ್ಟಿನಲ್ಲಿ ಮಹಾಲಿಂಗಪೂರದಲ್ಲಿ ನಡೆದ ರಾಷ್ಟ್ರ ಮಟ್ಟದ ಮಹಿಳಾ ಕಬಡ್ಡಿ ಪಂದ್ಯಾವಳಿಗಳು ಭರ್ಜರಿಯಾಗಿ ನಡೆದಿದ್ದು, ಇಂತಹ ಪಂದ್ಯಾವಳಿಗಳು ಆಯೋಜನೆಯಾಗುವ ಮೂಲಕ ಭವಿಷ್ಯದಲ್ಲಿ ಮಹಿಳಾ ಕಬಡ್ಡಿಗೆ ಇನ್ನಷ್ಟು ಪ್ರೋತ್ಸಾಹ ಸಿಗಲಿ ಅನ್ನೋದೆ ಎಲ್ಲರ ಆಶಯ.