All England Badminton ಸೆಮೀಸ್‌ಗೆ 20 ವರ್ಷದ ಲಕ್ಷ್ಯ ಸೆನ್ ಲಗ್ಗೆ
* ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತೀಯರ ಭರ್ಜರಿ ಪ್ರದರ್ಶನ
* ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸೆಮೀಸ್ ಪ್ರವೇಶಿಸಿ ಪದಕ ಖಚಿತಪಡಿಸಿಕೊಂಡ ಲಕ್ಷ್ಯ ಸೆನ್
* ಮಹಿಳಾ ಡಬಲ್ಸ್‌ನಲ್ಲಿ ಗಾಯತ್ರಿ ಗೋಪಿಚಂದ್- ತ್ರೀಸಾ ಜಾಲಿ ಕೂಡಾ ಸೆಮೀಸ್ ಪ್ರವೇಶ
ಬರ್ಮಿಂಗ್‌ಹ್ಯಾಮ್(ಮಾ.19): ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ (All England Badminton Tournament) ಭಾರತದ ಯುವ ಶಟ್ಲರ್‌ಗಳು ಮುನ್ನಡೆ ಪಡೆದಿದ್ದಾರೆ. ಪುರುಷರ ಸಿಂಗಲ್ಸ್‌ನ ಲಕ್ಷ್ಯ ಸೆನ್ (Lakshya Sen), ಮಹಿಳಾ ಡಬಲ್ಸ್‌ನಲ್ಲಿ ಗಾಯತ್ರಿ ಗೋಪಿಚಂದ್ ಹಾಗೂ ತ್ರೀಸಾ ಜಾಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಕ್ವಾರ್ಟರ್ ಫೈನಲ್ ಪಂದ್ಯ ಚೀನಾದ ಗುವಾಂಗ್ ಝು ಲು ವಿರುದ್ಧ ಲಕ್ಷ್ಯ ಸೆಣಸಬೇಕಿತ್ತು. ಆದರೆ ಝು ಲು ವಾಕ್ ಓವರ್ ನೀಡಿದ ಕಾರಣ, ಕಣಕ್ಕಿಳಿಯದೇ ಲಕ್ಷ್ಯ ಸೆಮಿಫೈನಲ್‌ಗೆ ಅರ್ಹತೆ ಪಡೆದರು. ಇದೀಗ ಲಕ್ಷ್ಯ ಸೆನ್ ಮತ್ತು ಮಹಿಳಾ ಡಬಲ್ಸ್‌ನಲ್ಲಿ ಗಾಯತ್ರಿ ಗೋಪಿಚಂದ್ (Gayatri Gopichand) ಹಾಗೂ ತ್ರೀಸಾ ಜಾಲಿ ಸೆಮೀಸ್ ಪ್ರವೇಶಿಸುವ ಮೂಲಕ ಕನಿಷ್ಠ ಕಂಚಿನ ಪದಕವನ್ನು ಖಚಿತಪಡಿಸಿಕೊಂಡಿದ್ದಾರೆ
20 ವರ್ಷದ ಲಕ್ಷ್ಯ, 2ನೇ ಸುತ್ತಿನಲ್ಲಿ ವಿಶ್ವ ನಂ.3 ಆ್ಯಂಡರ್ಸ್ ಆ್ಯಂಟೋನ್ಸೆನ್‌ರನ್ನು ಸೋಲಿಸಿದ್ದರು. ಕಳೆದ ವಾರ ವಿಶ್ವ ನಂ.1 ಡೆನ್ಮಾರ್ಕ್ನ ವಿಕ್ಟರ್ ಆಕ್ಸೆಲ್ಸೆನ್ ವಿರುದ್ಧ ಗೆದ್ದು ಜರ್ಮನ್ ಓಪನ್ ಫೈನಲ್‌ಗೇರಿದ್ದರು. ಇನ್ನು ವಿಶ್ವ ಶ್ರೇಯಾಂಕದಲ್ಲಿ 46ನೇ ಸ್ಥಾನದಲ್ಲಿರುವ ಗಾಯತ್ರಿ ಹಾಗೂ ತ್ರೀಸಾ, ವಿಶ್ವ ಚಾಂಪಿಯನ್‌ಶಿಪ್ ಬೆಳ್ಳಿ ವಿಜೇತ ಜೋಡಿ, ದಕ್ಷಿಣ ಕೊರಿಯಾದ ಲೀ ಸೊಹೀ ಹಾಗೂ ಶಿನ್ ಸಂಗ್‌ವಾನ್ ವಿರುದ್ಧ 14-21, 22-20, 21-15 ಗೇಮ್‌ಗಳಲ್ಲಿ ಅಚ್ಚರಿಯ ಗೆಲುವು ದಾಖಲಿಸಿತು. ಸೆಮೀಸ್‌ನಲ್ಲಿ ಚೀನಾದ ಝಾಂಗ್ ಶು ಕ್ಸಿಯನಾನ್, ಝೆಂಗ್ ಯು ಜೋಡಿ ವಿರುದ್ಧ ಸೆಣಸಲಿದೆ.
ಇದೇ ವೇಳೆ ಪುರುಷರ ಡಬಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಸಾತ್ವಿಕ್ ಸಾಯಿರಾಜ್ ಹಾಗೂ ಚಿರಾಗ್ ಶೆಟ್ಟಿ, ಅಗ್ರ ಶ್ರೇಯಾಂಕಿತ ಇಂಡೋನೇಷ್ಯಾ ಜೋಡಿ ಮಾರ್ಕಸ್ ಫೆರ್ನಾಲ್ಡಿ ಹಾಗೂ ಕೆವಿನ್ ಸಂಜಯ ವಿರುದ್ಧ 22-24, 17-21 ಗೇಮ್‌ಗಳಲ್ಲಿ ಪರಾಭವಗೊಂಡಿತು.
ಬೆಂಗಳೂರು ಟೆನಿಸ್: ಸೆಮೀಸ್‌ಗೆ ಖಾಡೆ
ಬೆಂಗಳೂರು: ಐಟಿಎಫ್ ಬೆಂಗಳೂರು ಓಪನ್ ಟೆನಿಸ್ ಟೂರ್ನಿಯ (Bengaluru Open Tennis) ಪುರುಷರ ಸಿಂಗಲ್ಸ್ ಸೆಮಿಫೈನಲ್‌ಗೆ ಭಾರತದ ಅರ್ಜುನ್ ಖಾಡೆ ಪ್ರವೇಶಿಸಿದ್ದಾರೆ. ಆದರೆ ಅಗ್ರ ಶ್ರೇಯಾಂಕಿತ, ಭಾರತದ ಶಶಿಕುಮಾರ್ ಮುಕುಂದ್ ಸೋತು ಹೊರಬಿದ್ದಿದ್ದಾರೆ. ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಅರ್ಜುನ್, ಭಾರತದವರೇ ಆದ ದಿಗ್ವಿಜಯ್ ಪ್ರತಾಪ್ ಸಿಂಗ್ ವಿರುದ್ಧ 7-5, 5-7, 7-6(2) ಸೆಟ್‌ಗಳಲ್ಲಿ ಜಯಗಳಿಸಿದರೆ, ಶಶಿಕುಮಾರ್ ಪೋಲೆಂಡ್‌ನ ಮಾಕ್ಸ್ ಕಾನ್ಸಿಕೊವ್ಸಿ$್ಕ ವಿರುದ್ಧ 7-6(5), 6-7(5), 3-6 ಸೆಟ್‌ಗಳಲ್ಲಿ ಪರಾಭವಗೊಂಡರು. ಸೆಮೀಸ್‌ನಲ್ಲಿ ಖಾಡೆ ಹಾಗೂ ಮಾಕ್ಸ್ ಎದುರಾಗಲಿದ್ದಾರೆ.
ಇದೇ ವೇಳೆ ಮನೀಶ್ ಸುರೇಶ್‌ಕುಮಾರ್ ಹಾಗೂ ಸಿದ್ಧಾಥ್‌ರ್ ರಾವತ್ ಸಹ ಸಿಂಗಲ್ಸ್ ವಿಭಾಗದಲ್ಲಿ ಸೆಮಿಫೈನಲ್‌ಗೇರಿದ್ದಾರೆ. ಇನ್ನು ಪುರುಷರ ಡಬಲ್ಸ್ ಫೈನಲ್‌ಗೆ ಭಾರತದ ಶಶಿಕುಮಾರ್ ಹಾಗೂ ವಿಷ್ಣು ವರ್ಧನ್ ಜೋಡಿ ಪ್ರವೇಶಿಸಿದೆ. ಫೈನಲ್‌ನಲ್ಲಿ ಭಾರತದ ಅರ್ಜುನ್ ಖಾಡೆ ಹಾಗೂ ಬ್ರಿಟನ್‌ನ ಜೂಲಿಯನ್ ಕ್ಯಾಷ್ ವಿರುದ್ಧ ಸೆಣಸಲಿದೆ.
ವಿಶ್ವ ಒಳಾಂಗಣ ಅಥ್ಲೆಟಿಕ್ಸ್: ಸೆಮೀಸ್‌ಗೇರದ ದ್ಯುತಿ ಚಂದ್
ಬೆಲ್ಗೆ್ರೕಡ್(ಸರ್ಬಿಯಾ): 2022ರ ವಿಶ್ವ ಒಳಾಂಗಣ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ ಶುಕ್ರವಾರ ಚಾಲನೆ ದೊರೆತಿದ್ದು, ಭಾರತದ ತಾರಾ ಅಥ್ಲೀಟ್ ದ್ಯುತಿ ಚಂದ್ ಮಹಿಳೆಯರ 60 ಮೀ. ಓಟದ ಸ್ಪರ್ಧೆಯಲ್ಲಿ ಸೆಮಿಫೈನಲ್ ಪ್ರವೇಶಿಸಲು ವಿಫಲರಾಗಿದ್ದಾರೆ.
ಅರ್ಹತಾ ಸುತ್ತಿನಲ್ಲಿ ಅವರು 6ನೇ ಸ್ಥಾನ ಪಡೆದರು. ಒಟ್ಟು 6 ಹೀಟ್ಸ್ ಸುತ್ತುಗಳು ನಡೆದವು. ಒಟ್ಟಾರೆ 46 ಸ್ಪರ್ಧಿಗಳ ಪೈಕಿ ದ್ಯುತಿ 30ನೇ ಸ್ಥಾನ ಪಡೆದರು. ಪ್ರತಿ ಹೀಟ್ಸ್‌ನಲ್ಲಿ ಅಗ್ರ 3 ಸ್ಥಾನ ಪಡೆದ ಹಾಗೂ ಉತ್ತಮ ಸಮಯ ಗಳಿಸಿದ ನಂತರದ 6 ಅಥ್ಲೀಟ್‌ಗಳು ಸೆಮೀಸ್‌ಗೇರಿದರು. 3 ದಿನಗಳ ಕಾಲ ನಡೆಯುವ ಚಾಂಪಿಯನ್‌ಶಿಪ್‌ನಲ್ಲಿ ಭಾರತ 3 ಅಥ್ಲೀಟ್‌ಗಳು ಪಾಲ್ಗೊಂಡಿದ್ದಾರೆ. ಪುರುಷರ ಲಾಂಗ್‌ಜಂಪ್‌ನಲ್ಲಿ ಶ್ರೀಶಂಕರ್, ಶಾಟ್‌ಪುಟ್ ಸ್ಪರ್ಧೆಯಲ್ಲಿ ತಜೀಂದರ್ ಪಾಲ್ ತೂರ್ ಸ್ಪರ್ಧಿಸಲಿದ್ದಾರೆ.