Danish Open: ಸ್ಮಿಮ್ಮಿಂಗ್‌ನಲ್ಲಿ ಗೋಲ್ಡ್ ಗೆದ್ದ ನಟ ಮಾಧವನ್ ಮಗ ವೇದಾಂತ್
Madhavan's son Vedaant wins Gold: ಬಹುಭಾಷಾ ನಟ ಆರ್ ಮಾಧವನ್ ಮಗ ಓಲಿಂಪಿಕ್ಸ್‌ಗಾಗಿ ಭರ್ಜರಿ ತಾಲೀಮು ನಡೆಸಿರುವುದು ಎಲ್ಲರಿಗೂ ತಿಳಿದ ವಿಚಾರ. ಆದರೆ ಕೇವಲ ಎರಡು ದಿನಗಳ ಅಂತರದೊಳಗೆ ಮಾಧವನ್ ಮಗ ಒಂದು ಗೋಲ್ಡ್ ಮತ್ತು ಸಿಲ್ವರ್ ಪದಕ ಗೆದ್ದಿದ್ದಾರೆ.
ಬಹುಭಾಷಾ ನಟ ಮಾಧವನ್ ಅವರ ಮಗ ವೇದಾಂತ್ ಮಾಧವನ್ ಡ್ಯಾನಿಷ್ ಓಪನ್ 2022ರ (Danish Open 2022) ಸ್ವಿಮ್ಮಿಂಗ್‌ನಲ್ಲಿ ಬಂಗಾರದ ಪದಕ ಪಡೆದುಕೊಂಡಿದ್ದಾರೆ. ವೇದಾಂತ್ 800 ಮೀಟರ್ ಸ್ಮಿಮ್ಮಿಂಗ್ ಸ್ಪರ್ಧೆಯನ್ನು 8 ನಿಮಿಷ 17.28 ಸೆಕೆಂಡ್‌ಗಳಲ್ಲಿ ಮುಗಿಸಿ ಮೊದಲ ಸ್ಥಾನಗಳಿಸಿದ್ದಾರೆ (Vedaant wins gold in swimming). ಈ ಬಗ್ಗೆ ಇನ್ಸ್ಟಾಗ್ರಾಂ ಖಾತೆಯಲ್ಲಿ ಸಂತಸ ವ್ಯಕ್ತಪಡಿಸಿರುವ ಮಾಧವನ್, "ಎಲ್ಲರ ಆಶಿರ್ವಾದದಿಂದ ಮತ್ತು ದೇವರ ಕೃಪೆಯಿಂದ ವೇದಾಂತ್ ಚಿನ್ನದ ಪದಕ ಪಡೆದಿದ್ದಾನೆ. ಇಂದು 800 ಮೀಟರ್ ಈಜಿನಲ್ಲಿ ಮೊದಲ ಸ್ಥಾನ ಪಡೆದಿದ್ದಾನೆ. ಅಪಾರ ಸಂತಸವಾಗಿದೆ," ಎಂದು ಖುಷಿ ತೋಡಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಮಗನ ಗೆಲುವಿಗೆ ಸಂತಸ ವ್ಯಕ್ತಪಡಿಸುವ ಜೊತೆಗೆ, ವೇದಾಂತ್ ಕೋಚ್ ಮತ್ತು ಇಡೀ ತಂಡಕ್ಕೆ ಧನ್ಯವಾದ ಅರ್ಪಿಸಿದ್ದಾರೆ.
ಮಾಧವನ್ ಇನ್ಸ್ಟಾಗ್ರಾಂ ಪೋಸ್ಟ್‌ಗೆ ಚಿತ್ರರಂಗದಿಂದ ವ್ಯಾಪಕ ಸಂತಸ ವ್ಯಕ್ತವಾಗಿದೆ. ಶಿಲ್ಪಾ ಶಿರೋಡ್ಕರ್ (Shilpa Shirodkar) ಮಾಧವನ್ ಪೋಸ್ಟ್‌ಗೆ ರಿಪ್ಲೇ ಮಾಡಿ, ಇದು ನಮ್ಮೆಲ್ಲರಿಗೂ ಸಿಕ್ಕ ಜಯ. ವೇದಾಂತ್ ಗೆಲುವಿನಿಂದ ಇಡೀ ಇಂಡಸ್ಟ್ರಿಗೆ ಖುಷಿಯಾಗಿದೆ. ವೇದಾಂತ್‌ಗೆ ಪ್ರೀತಿ ಮತ್ತು ಆಶಿರ್ವಾದ ಕಳಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಮಾಧವನ್‌ರ ಅಭಿಮಾನಿಗಳು ಕೂಡ ಸಂತಸವನ್ನು ವ್ಯಕ್ತಪಡಿಸಿದ್ದಾರೆ.
ಕಳೆದ ಶನಿವಾರ ಮಾಧವನ್ ಮಗ ವೇದಾಂತ್ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದರು. 1,500 ಮೀಟರ್ ಈಜು ಸ್ಪರ್ಧೆಯನ್ನು 15:57.86 ನಿಮಿಷಗಳಲ್ಲಿ ಮುಗಿಸಿದ ವೇದಾಂತ್ ಎರಡನೇ ಸ್ಥಾನ ಪಡೆದಿದ್ದರು. ಅದಾದ ನಂತರ ಮೊದಲ ಸ್ಥಾನ ಪಡೆದಿರುವುದರಿಂದ ಮಾಧವನ್‌ಗೆ ಅತೀವ ಸಂತಸವಾಗಿರುವುದು ಸಹಜ. ಓಲಿಂಪಿಕ್ಸ್‌ಗಾಗಿ ಮಗನನ್ನು ಸಜ್ಜು ಮಾಡಲೆಂದೇ ಭಾರತ ತೊರೆದು ಹೋಗಿರುವ ಮಾಧವನ್ ಕನಸು, ಮಗ ಓಲಿಂಪಿಕ್ಸ್‌ನಲ್ಲಿ ದೇಶಕ್ಕೆ ಚಿನ್ನದ ಪದಕ ಗೆಲ್ಲುವುದಾಗಿದೆ. ಇದಕ್ಕಾಗಿ ತಮ್ಮ ಸಿನೆಮಾ ಕೆಲಸಗಳನ್ನೂ ಬದಿಗೊತ್ತಿ ಮಾಧವನ್ ಮಗನ ಭವಿಷ್ಯದ ಕಡೆಗೆ ಗಮನ ಹರಿಸಿದ್ದಾರೆ.
ಮಾಧವನ್ ಮಗ ವೇದಾಂತ್ ದೇಶವನ್ನು ಹಲವಾರು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಪ್ರತಿನಿಧಿಸಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಪಡೆದಿದ್ದಾರೆ.
ಇದನ್ನೂ ಓದಿ: ಮಾಧವನ್ ಪುತ್ರ ವೇದಾಂತ್‌ಗೆ 7 ಮೆಡಲ್
ಈಗಾಗಲೇ ಮಾಧವನ್‌ರ ಮುಂದಿನ ಚಿತ್ರದ ಶೂಟಿಂಗ್ ಕೂಡ ಮುಗಿದಿದ್ದು, ಜುಲೈ 1 ರಂದು ರಾಕೆಟ್ರಿ: ದಿ ನಂಬಿ ಎಫೆಕ್ಟ್ ಬಿಡುಗಡೆಯಾಗುತ್ತಿದೆ. ಈ ಚಿತ್ರ ತಮಿಳುನಾಡಿದ ಮಾಜಿ ಇಸ್ರೋ ವಿಜ್ಙಾನಿಯ ಕುರಿತ ಬಯೋಪಿಕ್ ಆಗಿದ್ದು, ಮಾಧವನ್ ಸೈಂಟಿಸ್ಟ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ಹೊರತುಪಡಿಸಿ ಸದ್ಯ ಆರ್ ಮಾಧವನ್ ಯಾವುದೇ ಸಿನೆಮಾವನ್ನೂ ಒಪ್ಪಿಕೊಂಡಿಲ್ಲ ಎನ್ನಲಾಗಿದೆ.
ಇದನ್ನೂ ಓದಿ: ಆರವ್ ಕುಮಾರ್ ಆಯ್ತು, ಈಗ ಮಾಧವನ್ ಮಗನ ಜೊತೆ ಆರ್ಯನ್ ಖಾನ್ ಹೋಲಿಕೆ
ಈ ಹಿಂದೆ ಬೆಂಗಳೂರಿನಲ್ಲಿ ನಡೆದ ಜೂನಿಯರ್ ರಾಷ್ಟ್ರೀಯ ಅಕ್ವಾಟಿಕ್ ಚಾಂಪಿಯನ್‌ಶಿಪ್‌ನಲ್ಲಿ ವೇದಾಂತ್ ಏಳು ಪದಕಗಳನ್ನು ಗೆದ್ದಿದ್ದರು. 800 ಮೀಟರ್ ಫ್ರೀಸ್ಟೈಲ್ ಈಜು, 1500 ಫ್ರೀಸ್ಟೈಲ್ ಈಜು, 4×100 ಫ್ರೀಸ್ಟೈಲ್ ರಿಲೇ ಮತ್ತು 4×200 ಫ್ರೀಸ್ಟೈಲ್ ರಿಲೇ ಸ್ಪರ್ಧೆಗಳಲ್ಲಿ ಬೆಳ್ಳಿ ಗೆದ್ದರು. ಅದಾದ ನಂತರ ಏಷ್ಯಾದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆಲುವು ಸಾಧಿಸಿದ್ದ ಅವರು, ಈಗ ಅಂತಾರಾಷ್ಟ್ರೀಯ ಮಟ್ಟದಲ್ಲೂ ಹೆಸರು ಮಾಡುತ್ತಿದ್ದಾರೆ. ಓಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿ ಗೆಲ್ಲುವುದೇ ಅವರ ಗುರಿಯಾಗಿದೆ. ಅದಕ್ಕಾಗಿಯೇ ಅವರ ತಂದೆ ಮಾಧವನ್ ಮತ್ತು ಇಡೀ ಕುಟುಂಬ ಅವರ ಬೆನ್ನೆಲುಬಾಗಿ ನಿಂತಿದೆ.