Asianet Suvarna News Asianet Suvarna News

ಗುಜರಾತ್ ಚುನಾವಣೆಯಲ್ಲಿ  ಗೆಲ್ಲೋದು ಯಾರು?

ಗುಜರಾತಿನಲ್ಲಿ ಈಗಲೂ ಬಿಜೆಪಿಗೆ ಉತ್ತಮ ಅವಕಾಶವಿದೆ. ವಿಕಾಸದ ಜತೆಗೆ ಗುಜರಾತಿ ಅಸ್ಮಿತೆಯನ್ನು ಬಳಸಿ ಜನರನ್ನು ಮಾತಿನಲ್ಲೇ ಸೆಳೆಯುವುದರಲ್ಲಿ ಮೋದಿ ಸಿದ್ಧಹಸ್ತರು. ಅವರೀಗ ಪ್ರಧಾನಿ ಬೇರೆ. ಜೊತೆಗೆ ರಣತಂತ್ರಗಾರ ಅಮಿತ್ ಶಾ ಇದ್ದಾರೆ

Who Will Win Gujarat Elections

ಅಡ್ವಾಣಿ ಅವರಂತಹ ಹಿರಿಯರನ್ನು ಬದಿಗೊತ್ತಿ 2014ರ ಲೋಕಸಭೆ ಚುನಾವಣೆಗೆ ನರೇಂದ್ರ ಮೋದಿ ಅವರನ್ನು ‘ಬಿಜೆಪಿ ಪ್ರಧಾನಿ ಅಭ್ಯರ್ಥಿ’ಯಾಗಿ ಘೋಷಿಸಬೇಕು ಎಂಬ ಕೂಗು ಬಲಗೊಂಡಿದ್ದು 2012ರಲ್ಲಿ. ಗುಜರಾತಿನ ವಿಧಾನಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಸಾರಥ್ಯದಲ್ಲಿ ಬಿಜೆಪಿ ಹ್ಯಾಟ್ರಿಕ್ ಜಯ ಸಾಧಿಸಿದ ಬಳಿಕ. ನೋಡನೋಡುತ್ತಿದ್ದಂತೆ 5 ವರ್ಷಗಳು ಉರುಳಿವೆ. ಗುಜರಾತಿನ ಜನರ ಮುಂದೆ ಮತ್ತೊಂದು ವಿಧಾನಸಭೆ ಚುನಾವಣೆ ಮುಖಾಮುಖಿ ನಿಂತಿದೆ. 182 ವಿಧಾನಸಭಾ ಕ್ಷೇತ್ರಗಳಿಗೆ ಡಿ.9 ಹಾಗೂ ಡಿ.14ರಂದು ಮತದಾನ. ಡಿ.18ಕ್ಕೆ ಫಲಿತಾಂಶ. ಎರಡು ಪಕ್ಷಗಳ ನಡುವಣ ಪೈಪೋಟಿಯ ಕಣವಾಗಿ ಈಗಲೂ ಉಳಿದಿರುವ ಗುಜರಾತಿನಲ್ಲಿ ಈ ಬಾರಿ ಜನ ಯಾರನ್ನು ಆಯ್ಕೆ ಮಾಡುತ್ತಾರೆ ಎಂಬ ಕುತೂಹಲ ಹೆಚ್ಚಾಗುತ್ತಿದೆ. ಗುಜರಾತ್ ಫಲಿತಾಂಶ ರಾಷ್ಟ್ರ ರಾಜಕಾರಣದ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಅಥವಾ ಬೇರೆ ರಾಜ್ಯಗಳಿಗೆ ಎಂತಹ ಸಂದೇಶ ಹೊತ್ತು ತರಬಹುದು ಎಂಬ ನಿರೀಕ್ಷೆಯೂ ಗರಿಗೆದರಿದೆ.

ಗುಜರಾತ್ ರಾಜಕಾರಣ 2014ರಂತಿಲ್ಲ

2014ರ ಲೋಕಸಭೆ ಚುನಾವಣೆಯ ರೀತಿಯಲ್ಲೇ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಮತದಾನವೇನಾದರೂ ನಡೆದರೆ, 182 ಕ್ಷೇತ್ರಗಳ ಪೈಕಿ 160ರಲ್ಲಿ ಬಿಜೆಪಿ ಅನಾಯಾಸವಾಗಿ ಗೆದ್ದು ಸರ್ಕಾರ ರಚಿಸಬೇಕು. ಸತತ ಏಳನೇ ಸಲ ಕಾಂಗ್ರೆಸ್ ಮಂಡಿಯೂರಬೇ ಕು. ಗುಜರಾತಿನ ವ್ಯಕ್ತಿಯೊಬ್ಬರು ಪ್ರಧಾನಿಯಾಗಲು ಅವಕಾಶ ನೀಡಬೇಕು ಎಂಬ ತುಡಿತದಿಂದ ಮೂರೂವರೆ ವರ್ಷದ ಹಿಂದೆ 26ಕ್ಕೆ 26 ಲೋಕಸಭಾ ಕ್ಷೇತ್ರಗಳನ್ನೂ ಬಿಜೆಪಿ ಮಡಿಲಿಗೆ ಹಾಕಿದ್ದ ಗುಜರಾತಿಗಳು, ಈಗಿನ ವಿಧಾನಸಭೆ ಚುನಾವಣೆಯಲ್ಲೂ ಅದೇ ರೀತಿ ಮತದಾನ ಮಾಡುತ್ತಾರೆ ಎಂಬುದಕ್ಕೆ ಯಾವ ಖಾತ್ರಿಯೂ ಇಲ್ಲ.

ಏಕೆಂದರೆ, 2014ರ ಗುಜರಾತಿನ ರಾಜಕಾರಣ ಹಾಗೂ ಈಗಿನದರ ನಡುವೆ ಬದಲಾವಣೆಯಾಗಿದೆ. ಆಗ ಗುಜರಾತಿನ ಮುಖ್ಯಮಂತ್ರಿ ಪಟ್ಟದಲ್ಲಿ ಮೋದಿ ಎಂಬ ಅದ್ವಿತೀಯ ನಾಯಕ ಇದ್ದರು. ಆದರೆ ಈಗ ಇರುವ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರಿಗೆ ರಾಜ್ಯವ್ಯಾಪಿ ವರ್ಚಸ್ಸು ಇಲ್ಲ. ಮೋದಿ- ಅಮಿತ್ ಶಾ ಅವರ ಸಹಾಯವಿಲ್ಲದೆ ಗೆದ್ದು ಬರಬಲ್ಲೆ ಎಂಬ ವಿಶ್ವಾಸ ಅವರಲ್ಲಿ ಯಾವತ್ತೂ ಕಂಡುಬಂದಿಲ್ಲ. ಕಾಂಗ್ರೆಸ್ಸಿಗೂ ಅಷ್ಟೆ. ವರ್ಚಸ್ವಿ ನಾಯಕನ ಕೊರತೆ ಎದ್ದು ಕಾಣುತ್ತಿದೆ. ಇದರ ಫಲವಾಗಿ ಈ ಬಾರಿಯ ಗುಜರಾತ್ ಚುನಾವಣೆ ಮತ್ತೊಂದು ಸುತ್ತಿನಲ್ಲಿ ಮೋದಿ ವರ್ಸಸ್ ರಾಹುಲ್ ಹಣಾಹಣಿಯಂತಾಗಿದೆ.

ಬಿಜೆಪಿಗೆ, ಸೋತುಬಿಟ್ಟರೇ ಎಂಬ ಅಳುಕು

ಮೂರು ಸಮೀಕ್ಷೆಗಳು ಗುಜರಾತಿನಲ್ಲಿ ಬಿಜೆಪಿ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತದೆ ಎಂದು ಭವಿಷ್ಯ ನುಡಿದಿವೆ. ತಳಮಟ್ಟದಲ್ಲಿ ಬಿಜೆಪಿಯ ಸಂಘಟನೆ ಕಾಂಗ್ರೆಸ್ಸಿಗಿಂತ ಬಲವಾಗಿದೆ. ಮೋದಿ ಅವರಂತ ಹ ಚತುರ ವಾಕ್ಪಟು, ಅಮಿತ್ ಶಾ ಅವರಂತಹ ರಣತಂತ್ರಗಾರರನ್ನು ಬಿಜೆಪಿ ಹೊಂದಿದೆ. ಬಿಜೆಪಿ ಗೆದ್ದೇ ಬಿಡುತ್ತದೆ ಎಂಬ ಭಾವನೆ ನಾಯಕರಲ್ಲಿ ಇದೆಯಾದರೂ, ‘ಸೋತುಬಿಟ್ಟರೆ’ ಎಂಬ ಅಳುಕೂ ಬಾಧಿಸುತ್ತಿರುವುದು ನಡವಳಿಕೆಯಲ್ಲೇ ಗೊತ್ತಾಗುತ್ತಿದೆ. ಪಕ್ಷ ಎಂದೂ ಗೆಲ್ಲದ ರಾಜ್ಯಗಳಲ್ಲೂ ‘ಕಮಲ’ ಅರಳಿಸಿದ ಮೋದಿ- ಶಾ ಜೋಡಿಗೆ ಆ ಎಲ್ಲಾ ಚುನಾವಣೆಗಳಿಗಿಂತ ಗುಜರಾತಿನ ಗೆಲುವು ಪ್ರತಿಷ್ಠೆಯದ್ದು. ಒಂದೂವರೆ ವರ್ಷದಲ್ಲಿ ಲೋಕಸಭೆ ಚುನಾವಣೆ ಎದುರಾಗುವುದರಿಂದ, ಗುಜರಾತಿನ ಫಲಿತಾಂಶದಲ್ಲಿ ಆಗುವ ಏರುಪೇರು ಕಂಪನ ಸೃಷ್ಟಿಸಬಹುದು ಎಂಬ ಕಳವಳ ಪಕ್ಷವನ್ನು ಕಾಡುತ್ತಿದೆ.

3 ಯುವ ನಾಯಕರು ಬಿಜೆಪಿಗೆ ಸವಾಲು

19 ವರ್ಷಗಳಿಂದ ನಿರಂತರವಾಗಿ ಗುಜರಾತಿನಲ್ಲಿ ಬಿಜೆಪಿ ಆಳ್ವಿಕೆ ನಡೆಸುತ್ತಿದೆ. ಹೀಗಾಗಿ ಜನರಲ್ಲಿ ಅದರಲ್ಲೂ ಬರಪೀಡಿತ ಪ್ರದೇಶಗಳ ಕೃಷಿಕರಲ್ಲಿ ‘ಆಡಳಿತ ವಿರೋಧಿ ಅಲೆ’ ಮೂಡಬಹುದು ಎಂಬ ಆತಂಕ ಆ ಪಕ್ಷಕ್ಕೆ ಒಂದೆಡೆಯಾದರೆ, ಮೋದಿ ಪ್ರಧಾನಿಯಾದ ಬಳಿಕ ಗುಜರಾತಿನಲ್ಲಿ ಉದಯವಾಗಿರುವ ಮೂವರು ಯುವ ನಾಯಕರ ಸವಾಲು ಮತ್ತೊಂದೆಡೆ. ಪಟೇಲ್ ಸಮುದಾಯಕ್ಕೆ ಮೀಸಲು ನೀಡಬೇಕು ಎಂದು ಬೀದಿಗಿಳಿದು ನಾಯಕರಾಗಿರುವ ಹಾರ್ದಿಕ್ ಪಟೇಲ್, ಏಕತಾ ಮಂಚ್ ಹೆಸರಿನಲ್ಲಿ ಮೀಸಲಾತಿ ಹೋರಾಟ ನಡೆಸಿ ನಾಯಕರಾಗಿರುವ ಅಲ್ಪೇಶ್ ಠಾಕೂರ್ ಹಾಗೂ ಉನಾ ದಲಿತರ ಚರ್ಮ ಸುಲಿದ ಪ್ರಕರಣದ ಬಳಿಕ ಸೃಷ್ಟಿಯಾದ ಜಿಗ್ನೇಶ್ ಮೇವಾನಿ ಎಷ್ಟು ಮತಗಳನ್ನು ಹೊಂದಿದ್ದಾರೆ, ಅವರ ಮತಗಳು ಎತ್ತ ಹರಿಯಲಿವೆ ಎಂಬ ಆತಂಕವೂ ಬಿಜೆಪಿಗೆ ಇದೆ. ಗುಜರಾತಿನಲ್ಲಿ 4.33 ಕೋಟಿ ಮತದಾರರಿದ್ದು, ಆ ಪೈಕಿ 25ರಿಂದ 35ರ ವಯೋಮಾನದ ಮತದಾರರ ಸಂಖ್ಯೆ ಶೇ. 65ರಷ್ಟಿದೆ. ಇವರಲ್ಲಿ ಸಾಕಷ್ಟು ಮಂದಿ ಹಾರ್ದಿಕ್, ಅಲ್ಪೇಶ್ ಹಾಗೂ ಜಿಗ್ನೇಶ್ ಹೋರಾಟದ ಪೈಕಿ ಒಂದರಲ್ಲಾದರೂ ಸಕ್ರಿಯವಾಗಿ ಭಾಗಿಯಾಗಿದ್ದಾರೆ ಎಂಬುದು ಗಮನಾರ್ಹ. ವ್ಯಾಪಾರಿ ಸಮುದಾಯ ಹೆಚ್ಚಿರುವ ಗುಜರಾತಿನಲ್ಲಿ ಮೋದಿ ಸರ್ಕಾರದ ನೋಟುರದ್ದತಿ ಹಾಗೂ ಜಿಎಸ್‌ಟಿಯಂತಹ ಕ್ರಮಗಳು ಪ್ರತಿಕೂಲವಾಗಿ ಪರಿಣಮಿಸಿವೆ. ಅವುಗಳ ಪರಿಣಾಮ ಯಾವ ಮಟ್ಟಿಗೆ ಇರುತ್ತದೆ ಎಂಬ ಅಂದಾಜು ಲಭಿಸುತ್ತಿಲ್ಲ. ಪಟೇಲ್ ಸಮುದಾಯವನ್ನು ಬಿಜೆಪಿ ಅತಿಯಾಗಿ ನೆಚ್ಚಿಕೊಂಡಿಲ್ಲ. 2012ರ ಚುನಾವಣೆಯಲ್ಲಿ ಆ ಸಮುದಾಯ ಕೇಶುಭಾಯ್ ಪಟೇಲ್ ಬೆನ್ನಿಗೆ ನಿಂತಿದ್ದರೂ, ಬಿಜೆಪಿಗೇ  ಬಹುಮತ ಸಿಕ್ಕಿತ್ತು ಎಂಬ ನಿದರ್ಶನವನ್ನು ನಾಯಕರು ಮುಂದಿಡುತ್ತಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ನಡುವಣ ಶೇಕಡಾವಾ ರು ಮತಗಳಿಕೆ ಪ್ರಮಾಣ ಪ್ರತಿ ವಿಧಾನಸಭೆ ಚುನಾವಣೆಯಲ್ಲೂ ಸರಾಸರಿ ಶೇ.10ರಷ್ಟಿದೆ. ಈ ಮೂವರೂ ನಾಯಕರ ದೆಸೆ ಹಾಗೂ ಕೇಂದ್ರದ ಆರ್ಥಿಕ ಸುಧಾರಣೆಯಿಂದ ರೊಚ್ಚಿಗೆದ್ದು ಜನರೇನಾದರೂ ತಿರುಗಿಬಿದ್ದು, ಕಾಂಗ್ರೆಸ್ ಬುಟ್ಟಿಗೆ ಶೇ.5ರಿಂದ ಶೇ.8ರಷ್ಟು ಮತ ಸೇರಿದರೂ ಫಲಿತಾಂಶದಲ್ಲಿ ಏರುಪೇರಾಗುವ ಸಂಭವವಿದೆ.

ಬಿಜೆಪಿ ನಂಬಿರುವುದು ಮೋದಿಯನ್ನೇ

ಕ್ಷತ್ರಿಯರು, ಹರಿಜನರು, ಆದಿವಾಸಿಗಳು ಹಾಗೂ ಮುಸ್ಲಿಂ (ಖಾಮ್) ಎಂಬ ಜಾತಿ ಸೂತ್ರದೊಂದಿಗೆ 80ರ ದಶಕದವರೆಗೂ ಕಾಂಗ್ರೆಸ್ ಗುಜರಾತಿನಲ್ಲಿ ಅಧಿಕಾರದ ಗದ್ದುಗೆ ಹಿಡಿದಿತ್ತು . ಆದರೆ ಹಿಂದುತ್ವದ ಜತೆ ವಿಕಾಸ ಬೆರೆಸಿ ಕಾಂಗ್ರೆಸ್ಸಿನಿಂದ ಅಧಿಕಾರ ಕಸಿಯುವಲ್ಲಿ ಬಿಜೆಪಿ ಯಶಸ್ವಿಯಾಯಿತು. ಮೋದಿ ಅವಧಿಯಲ್ಲಿ ಹಿಂದುತ್ವ- ವಿಕಾಸ ಎಂಬ ಸೂತ್ರ ಚೆನ್ನಾಗಿಯೇ ಕೆಲಸ ಮಾಡಿತು. ಗೋಧ್ರಾ ಗಲಭೆ, ‘ಸಾವಿನ ವ್ಯಾಪಾರಿ’ ಎಂಬ ಸೋನಿಯಾ ಗಾಂಧಿ ಟೀಕೆ, 2012ರಲ್ಲಿ ಯುಪಿಎ ಸರ್ಕಾರದ ಹಗರಣಗಳು ಬಿಜೆಪಿಗೆ ತಕ್ಕಮಟ್ಟಿಗೆ ಲಾಭ ತಂದುಕೊಂಡಿತ್ತು. ಆದರೆ ಈ ಬಾರಿ ಕೇಂದ್ರದತ್ತ ಮೋದಿ ದೂರುವಂತಿಲ್ಲ. ಆದಾಗ್ಯೂ ಗುಜರಾತಿನಲ್ಲಿ ಈಗಲೂ ಬಿಜೆಪಿಗೆ ಉತ್ತಮ ಅವಕಾಶವಿದೆ. ವಿಕಾಸದ ಜತೆಗೆ ಗುಜರಾತಿ ಅಸ್ಮಿತೆಯನ್ನು ಬಳಸಿ ಜನರನ್ನು ಮಾತಿನಲ್ಲೇ ಸೆಳೆಯುವುದರಲ್ಲಿ ಮೋದಿ ಸಿದ್ಧಹಸ್ತರು. ಜತೆಗೆ ಗುಜರಾತ್ ಮೂಲದ ಪ್ರಧಾನಿಗೆ ಈ ಚುನಾವಣೆ ಪ್ರತಿಷ್ಠೆಯ ಕಣ ಎಂದು ಬಿಂಬಿಸಿ, ಲಾಭ ಪಡೆವ ಚಾಕಚಕ್ಯತೆಯೂ ಅವರಿಗೆ ಇದೆ. ಬಿಜೆಪಿ ಕೊನೆಗೆ ನಂಬಿಕೊಂಡಿರುವುದು ಅದನ್ನೇ.

Who Will Win Gujarat Elections

ಎಂ.ಎಲ್.ಲಕ್ಷ್ಮೀಕಾಂತ್, ಪತ್ರಕರ್ತ

 

 

Follow Us:
Download App:
  • android
  • ios