Asianet Suvarna News Asianet Suvarna News

ಜಗತ್ತೇ ಹೊಗಳುತ್ತೇ, ರಾಹುಲ್ ಮಾತ್ರ ಬೈತಾರೆ!

ಅಪನಗದೀಕರಣಕ್ಕೆ 1 ವರ್ಷ ತುಂಬುತ್ತಿದೆ. ಜಿಎಸ್‌ಟಿ ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ. ಆರ್ಥಿಕಾಭಿವೃದ್ಧಿ ದರ ಕಡಿಮೆಯಾಗಿದೆ. ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಇವೆಲ್ಲದರ ಕೀಲಿಯಿರುವುದು ದೇಶದ ಹಣಕಾಸು ಸಚಿವರ ಕೈಲಿ. ರಿಪಬ್ಲಿಕ್ ಟೀವಿಗೆ ನೀಡಿದ ಸಂದರ್ಶನದಲ್ಲಿ ಅರುಣ್ ಜೇಟ್ಲಿ ಈ ಎಲ್ಲದರ ಬಗ್ಗೆ ವಿಸ್ತೃತವಾಗಿ ಮಾತನಾಡಿದ್ದಾರೆ. ಆಯ್ದ ಭಾಗ ಇಲ್ಲಿದೆ.

Arun Jaitley Interview

ರಾಹುಲ್ ಗಾಂಧಿ ಹೆಚ್ಚುಕಮ್ಮಿ ಪ್ರತಿದಿನ ನಿಮ್ಮ ಬಗ್ಗೆ ಏನಾದರೊಂದು ಟ್ವೀಟ್ ಮಾಡುತ್ತಾರೆ. ಯಾಕೆ ಅವರಿಗೆ ನೀವೆಂದರೆ ಅಷ್ಟೊಂದು ‘ಪ್ರೀತಿ?’

ನೀವು ಏನಾದರೂ ಕೆಲಸ ಮಾಡುತ್ತಿದ್ದೀರಿ ಎಂದಾದರೆ ಅದನ್ನು ಮೆಚ್ಚಿಕೊಳ್ಳುವವರು ಹೊಗಳುತ್ತಾರೆ. ನಿಮ್ಮ ಕೆಲಸ ಅರ್ಥವಾಗದೇ ಇರುವವರು ಅಥವಾ ನಿಮ್ಮನ್ನು ವಿರೋಧಿಸಲೇಬೇಕೆಂದು ವಿರೋಧಿಸುವವರು ಅದನ್ನು ಟೀಕೆ ಮಾಡುತ್ತಾರೆ. ನಾವು ತರುತ್ತಿರುವ ಸುಧಾರಣಾ ಕ್ರಮಗಳು ರಾಹುಲ್ ಗಾಂಧಿಗೆ ಎಷ್ಟು ಅರ್ಥವಾಗುತ್ತದೆಯೋ ನನಗೆ ಗೊತ್ತಿಲ್ಲ.

ನಿಮ್ಮ ಪ್ರಕಾರ ದೇಶದ ಆರ್ಥಿಕತೆಯಲ್ಲಿ ಏನೂ ಸಮಸ್ಯೆಗಳಿಲ್ಲವೇ?

ಯಾವುದೇ ಆರ್ಥಿಕತೆಯಲ್ಲಿ ಸದಾಕಾಲ ಸವಾಲುಗಳು ಇದ್ದೇ ಇರುತ್ತವೆ. ನನ್ನ ಕೆಲಸ ಸುಲಭದ್ದಲ್ಲ. ಆರ್ಥಿಕತೆಗೆ ಸಂಬಂಧಿಸಿದಂತೆ ದೇಸೀ ಸಮಸ್ಯೆಗಳೂ ಇವೆ, ಜಾಗತಿಕ ಸಮಸ್ಯೆಗಳೂ ಇವೆ. ಆದರೆ, ಭಾರತದ ಆರ್ಥಿಕತೆ ಒಟ್ಟಾರೆ ಒಳ್ಳೆಯ ಹಾದಿಯಲ್ಲಿದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನಮ್ಮದು ಸತತ 3 ವರ್ಷಗಳಿಂದ ಜಗತ್ತಿನಲ್ಲೇ ಅತಿ ಹೆಚ್ಚು ಅಭಿವೃದ್ಧಿಯ ದರ ಹೊಂದಿರುವ ಆರ್ಥಿಕತೆ. ಜಿಡಿಪಿ ಅಭಿವೃದ್ಧಿ ದರವನ್ನು ನೋಡುವಾಗ ಆ ಸಮಯದಲ್ಲಿ ಜಾಗತಿಕ ಆರ್ಥಿಕ ಸ್ಥಿತಿ ಹೇಗಿದೆ ಎಂಬುದನ್ನು ಹೋಲಿಸಿ ನೋಡಬೇಕು. ಜಗತ್ತಿನ ಆರ್ಥಿಕತೆಗಳೆಲ್ಲ ನಿಧಾನವಾಗಿ ಬೆಳೆಯುತ್ತಿರುವಾಗ ನಾವು ವೇಗವಾಗಿ ಬೆಳೆಯುತ್ತಿದ್ದೇವೆ ಎಂಬುದೇ ಹೆಗ್ಗಳಿಕೆ. ಜಗತ್ತಿನ ಎಲ್ಲರೂ ಭಾರತದಲ್ಲಿ ಜಾರಿಯಾಗುತ್ತಿರುವ ಸುಧಾರಣಾ ಕ್ರಮಗಳನ್ನು ಹೊಗಳುತ್ತಿದ್ದಾರೆ.

ಹಾಗಾದರೆ ಅಪನಗದೀಕರಣ ಹಾಗೂ ಜಿಎಸ್‌ಟಿ ಜಾರಿಯ ನಂತರ ಆದ ತೊಂದರೆಗಳ ಬಗ್ಗೆ ಏನು ಹೇಳುತ್ತೀರಿ?

ಯಾವುದೇ ದೇಶದ ತೆರಿಗೆ ಅಥವಾ ಆರ್ಥಿಕ ವ್ಯವಸ್ಥೆಯಲ್ಲಿ ಮೂಲಭೂತ ಬದಲಾವಣೆಗಳನ್ನು ಮಾಡಿದಾಗ ಕೆಲ ಅಡ್ಡಪರಿಣಾಮಗಳು ಉಂಟಾಗುವುದು ಅತ್ಯಂತ ಸಹಜ. ಆರಂಭದಲ್ಲಿ ಸಮಸ್ಯೆಗಳು ಬಂದೇ ಬರುತ್ತವೆ. ಆದರೆ, ಮಧ್ಯಮಾವಧಿ ಮತ್ತು ದೀರ್ಘಾವಧಿಯಲ್ಲಿ ಆರ್ಥಿಕತೆ ಹಿಂದೆಂದಿಗಿಂತ ವೇಗವಾಗಿ ಬೆಳೆಯುತ್ತದೆ ಮತ್ತು ಅದರ ಲಾಭ ಎಲ್ಲ ಜನರಿಗೂ ಸಿಗುತ್ತದೆ. ಹಾಗಾದರೆ ಸದ್ಯಕ್ಕೆ ನಮ್ಮೆದುರು ಸಮಸ್ಯೆಗಳೇ ಇಲ್ಲವೇ? ಖಂಡಿತ ಇವೆ. ನಮ್ಮ ಬ್ಯಾಂಕಿಂಗ್ ವ್ಯವಸ್ಥೆ ಸಮಸ್ಯೆಯಲ್ಲಿದೆ. ಅದನ್ನು ಬಗೆಹರಿಸುತ್ತಿದ್ದೇವೆ. ನಮ್ಮಲ್ಲಿ ಸಂಕೀರ್ಣ ತೆರಿಗೆ ವ್ಯವಸ್ಥೆಯಿದೆ. ಅದನ್ನು ದುರಸ್ತಿ ಮಾಡುತ್ತಿದ್ದೇವೆ. ದೇಶದ ಕೃಷಿ ಕ್ಷೇತ್ರ ಕಷ್ಟದಲ್ಲಿದೆ. ಅದಕ್ಕೆ ಪರಿಹಾರ ಹುಡುಕಲೇಬೇಕಿದೆ.

ಜಿಎಸ್‌ಟಿ ಜಾರಿಗೆ ತಂದ ಮೇಲೆ ಬಹಳ ಕಡಿಮೆ ಅವಧಿಯಲ್ಲಿ ಮೂರು ಬಾರಿ ಅದರಲ್ಲಿ ಬದಲಾವಣೆ ಮಾಡಿದ್ದೀರಿ. ಅಂದರೆ, ಮೊದಲು ತಪ್ಪು ಮಾಡಿ ಈಗ ಸರಿಪಡಿಸಿಕೊಳ್ಳುತ್ತಿದ್ದೀರಾ?

ಹೀಗೆ ಹೇಳುವವರಿಗೆ ಸ್ವಲ್ಪ ವಿವರವಾಗಿ ಉತ್ತರ ಕೊಡಬೇಕು. ಭಾರತದಲ್ಲಿ ಜಗತ್ತಿನ ಅತ್ಯಂತ ಕೆಟ್ಟ ಪರೋಕ್ಷ ತೆರಿಗೆ ಪದ್ಧತಿಯಿತ್ತು. ಒಂದಷ್ಟು ತೆರಿಗೆಗಳನ್ನು ಕೇಂದ್ರ ಸರ್ಕಾರ , ಇನ್ನೊಂದಷ್ಟು ತೆರಿಗೆಗಳನ್ನು ರಾಜ್ಯ ಸರ್ಕಾರ ವಿಧಿಸುತ್ತಿತ್ತು. ಉದ್ಯಮದ ಮೇಲೆ ಕೇಂದ್ರ ಸರ್ಕಾರ 17 ತೆರಿಗೆ ಹಾಗೂ 23 ಮೇಲ್ತೆರಿಗೆ ವಿಧಿಸುತ್ತಿತ್ತು. ನಂತರ 30 ರಾಜ್ಯಗಳು ವ್ಯಾಟ್ ಸೇರಿದಂತೆ ತಮ್ಮದೇ ತೆರಿಗೆ ಹಾಗೂ ಮೇಲ್ತೆರಿಗೆಗಳನ್ನು ವಿಧಿಸುತ್ತಿದ್ದವು. ಇವುಗಳನ್ನೆಲ್ಲ ತೆಗೆದು ಒಂದು ತೆರಿಗೆ ಜಾರಿಗೆ ತಂದು, 1300 ವಸ್ತುಗಳಿಗೆ ತೆರಿಗೆ ನಿಗದಿಪಡಿಸಿದೆವು. ಹೀಗೆ ಮಾಡುವಾಗ 4 ಹಂತದಲ್ಲಿ ತೆರಿಗೆ ನಿಗದಿಪಡಿಸಲಾಯಿತು. ಈ 4 ಹಂತ ಏಕೆ, ಒಂದೇ ದರದ ತೆರಿಗೆ ನಿಗದಿಪಡಿಸಿ ಎಂದು ಕಾಂಗ್ರೆಸ್ ಸೇರಿದಂತೆ ಕೆಲವರು ಕೇಳುತ್ತಿದ್ದಾರೆ. ತೆರಿಗೆ ವ್ಯವಸ್ಥೆಯನ್ನು ಆಮೂಲಾಗ್ರ ಬದಲಾವಣೆ ಮಾಡುವಾಗ ಸರ್ಕಾರ ತನಗೆ ಹರಿದುಬರುತ್ತಿದ್ದ ತೆರಿಗೆ ಹಣ ಮೊದಲಿನಷ್ಟೇ ಇರುವಂತೆ ನೋಡಿಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ನೌಕರರಿಗೆ ಸಂಬಳ ನೀಡಲು, ಸೇನೆಯನ್ನು ನಡೆಸಲು, ಯೋಜನೆಗಳನ್ನು  ಜಾರಿಗೊಳಿಸಲು ಹಣ ಇರುವುದಿಲ್ಲ. ಆದಾಯ ಮೊದಲಿನಷ್ಟೇ ಇರಬೇಕಾದರೆ ಜನರಿಗೆ ಹೊರೆಯಾಗದ ರೀತಿಯಲ್ಲಿ ಏನಾದರೂ ತಂತ್ರ ಹುಡುಕಲೇಬೇಕು. ಹಾಗೆ ಜಾರಿಗೆ ತಂದಿದ್ದೇ 4 ಹಂತಗಳ ತೆರಿಗೆ. ಕಾಂಗ್ರೆಸ್‌ನವರು ಕೇಳುತ್ತಿರುವಂತೆ ಎಲ್ಲ ತೆರಿಗೆಗಳನ್ನು ಶೇ.18ಕ್ಕಿಂತ ಕೆಳಗೆ ನಿಗದಿಪಡಿಸಲು ಸಾಧ್ಯವಿಲ್ಲ. ಆರೋಗ್ಯಕ್ಕೆ ಹಾನಿಕಾರಕವಾದ ಸಿಗರೇಟಿಗೆ ಶೇ.18ಕ್ಕಿಂತ ಕಡಿಮೆ ತೆರಿಗೆ ವಿಧಿಸಬೇಕೆ? ಶ್ರೀಮಂತರಲ್ಲೇ ಶ್ರೀಮಂತರು ಬಳಸುವ ಬಿಎಂಡಬ್ಲ್ಯು, ಮರ್ಸಿಡಿಸ್ ಕಾರಿಗೆ ಕಡಿಮೆ ತೆರಿಗೆ ವಿಧಿಸಬೇಕೆ? ಹವಾಯಿ ಚಪ್ಪಲಿಗೂ ಐಷಾರಾಮಿ ಕಾರಿಗೂ ಒಂದೇ ತೆರಿಗೆ ಇರಬೇಕೆ? ಸರ್ಕಾರದ ಆದಾಯ ಹೆಚ್ಚುತ್ತ ಹೋದಂತೆ ಇತರ ವಸ್ತುಗಳ ತೆರಿಗೆಯನ್ನು ಖಂಡಿತ ಕಡಿಮೆ ಮಾಡಲಾಗುತ್ತದೆ.

ಮೋದಿ ಮತ್ತು ಜೇಟ್ಲಿ ಆರಂಭದಲ್ಲಿ ಜನರಿಗೆ ಕಠಿಣ ನಿಯಮಗಳನ್ನು ವಿಧಿಸುತ್ತಾರೆ, ನಂತರ ಅದರಲ್ಲಿ ಒಂದೆರಡನ್ನು ಸ್ವಲ್ಪ ಸುಲಭಗೊಳಿಸಿ ಏನೋ ಉಪಕಾರ ಮಾಡಿದಂತೆ ತೋರಿಸಿಕೊಳ್ಳುತ್ತಾರೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರಲ್ಲ?

ಹಾಗಾದರೆ 2014ಕ್ಕಿಂತ ಹಿಂದಿದ್ದ ಭ್ರಷ್ಟ ವ್ಯವಸ್ಥೆಗೆ ಮರಳಿ ಹೋಗಬೇಕೆ? ಜಗತ್ತಿನಲ್ಲೇ ಅತ್ಯಂತ ಸಂಕೀರ್ಣವಾದ ತೆರಿಗೆ ವ್ಯವಸ್ಥೆಗೆ ಮರಳಬೇಕೆ? ಅಥವಾ ಬದಲಾವಣೆ ತಂದು ದೇಶಕ್ಕೂ ಜನರಿಗೂ ಒಳ್ಳೆಯದು ಮಾಡಬೇಕೆ? ಜನರು ಖಂಡಿತ ಬೈಯುತ್ತಿಲ್ಲ. ಕೆಲ ರಾಜಕಾರಣಿಗಳು ಇದನ್ನು ಮಾಡಿಸುತ್ತಿದ್ದಾರೆ. ದೇಶದ ಒಳಿತಿಗಾಗಿ ತೆರಿಗೆ ಕಟ್ಟಲು ಜನರು ಸಿದ್ಧರಿದ್ದಾರೆ. ಆದರೆ, ಭ್ರಷ್ಟಾಚಾರ ಮಾಡಿ ಹಣ ನುಂಗಿಹಾಕುವ ಸರ್ಕಾರವಿದ್ದರೆ ಯಾಕೆ ತೆರಿಗೆ ಕಟ್ಟಬೇಕು ಎಂದು ಪ್ರಶ್ನಿಸುತ್ತಾರಷ್ಟೆ.

ಕಳೆದ ಮೂರು ವರ್ಷದಲ್ಲಿ ದೇಶದ ಆದಾಯ ತೆರಿಗೆದಾರರ ಸಂಖ್ಯೆ 3 ಕೋಟಿಯಿಂದ 6.4 ಕೋಟಿಗೆ ಏರಿಕೆಯಾಗಿದೆಯಲ್ಲ, ಜನರಿಗೆ ಇಷ್ಟವಿಲ್ಲದೆ ಇದ್ದಿದ್ದರೆ ಅವರೇಕೆ ತೆರಿಗೆದಾರರಾಗಿ ನೋಂದಣಿ ಮಾಡಿಸಿಕೊಳ್ಳುತ್ತಿದ್ದರು?

ಹಾಗಿದ್ದರೆ ರಾಹುಲ್ ಗಾಂಧಿ ಏಕೆ ಇದನ್ನು ಗಬ್ಬರ್‌ಸಿಂಗ್ ಟ್ಯಾಕ್ಸ್ ಎಂದು ಕರೆಯುತ್ತಿದ್ದಾರೆ?

ಅವರಿಗೆ ಈ ವ್ಯವಸ್ಥೆಯೇ ಅರ್ಥವಾಗಿಲ್ಲ ಅನ್ನಿಸುತ್ತದೆ. ಏನೇನೋ ಮಾತನಾಡುವ ಮೂಲಕ ಜನರನ್ನು ದಾರಿತಪ್ಪಿಸುತ್ತಿದ್ದೇನೆ ಎಂಬುದಾದರೂ ಅವರಿಗೆ ಅರ್ಥವಾಗಬೇಕು. ಅವರ ಮುತ್ತಜ್ಜ ಈ ದೇಶದ ಜನರ ಮೇಲೆ ಶೇ.95ರಷ್ಟು ತೆರಿಗೆ ವಿಧಿಸಿದವರು. 1990ರ ನಂತರ ನೆಹರು ಮಾದರಿಯ ಆರ್ಥಿಕತೆಯನ್ನು ದೇಶ ತಿರಸ್ಕರಿಸಿದ ಮೇಲೆ ನಮ್ಮ ಆರ್ಥಿಕತೆ ಬೆಳೆಯಲು ಆರಂಭಿಸಿತು. ಹಾಗಾಗಿ ರಾಹುಲ್ ಈ ಬಗ್ಗೆ ಮಾತನಾಡದೇ ಇರುವುದೇ ಒಳ್ಳೆಯದು.

ದೇಶದಲ್ಲಿ ಉದ್ಯೋಗ ಸೃಷ್ಟಿ ನಿಂತೇಹೋಗಿದೆ. ಏಕೆ ನೀವು ಮತ್ತು ಮೋದಿಯವರು ಈ ವಿಷಯ ಪ್ರಸ್ತಾಪಿಸಿದಾಗಲೆಲ್ಲ ಬೇರೇನೋ ಹೇಳಿ ತೇಪೆ ಹಚ್ಚುತ್ತೀರಿ?

ನಮ್ಮ ದೇಶದಲ್ಲಿ ಉದ್ಯೋಗಾವಕಾಶಗಳನ್ನು ಲೆಕ್ಕಹಾಕುವ ಸರಿಯಾದ ವ್ಯವಸ್ಥೆ ಇಲ್ಲ. ಸರ್ಕಾರಿ ಹಾಗೂ ಖಾಸಗಿ ಕಂಪನಿಯಂತಹ ಸಂಘಟಿತ ವಲಯದಲ್ಲಿ ಕೆಲಸ ಮಾಡುವವರ ಸಂಖ್ಯೆ ನಮ್ಮ ದೇಶದಲ್ಲಿ ಬಹಳ ಸಣ್ಣದು. ಇದು ಮಾತ್ರ ಲೆಕ್ಕಕ್ಕೆ ಸಿಗುತ್ತದೆ. ಇನ್ನುಳಿದ ದೊಡ್ಡ ಸಂಖ್ಯೆಯ ಜನರು ಅಸಂಘಟಿತ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಾರೆ. ಇವರ ಲೆಕ್ಕ ಸರಿಯಾಗಿ ಸಿಗುವುದಿಲ್ಲ. ಅದು ಹಾಗಿರಲಿ, ನಾವು ಬಂದ ಮೇಲೆ ವಿದೇಶಿ ಬಂಡವಾಳದ ಹರಿವನ್ನು ಸುಗಮಗೊಳಿಸಿ, ಬ್ಯಾಂಕುಗಳಿಂದ ಸಣ್ಣ ಉದ್ದಿಮೆಗಳಿಗೆ ಹೆಚ್ಚು ಸಾಲ ಸಿಗುವಂತೆ ಮಾಡಿ ತನ್ಮೂಲಕ ಹೆಚ್ಚು ಉದ್ಯೋಗ ಸೃಷ್ಟಿಯಾಗಲು ವೇದಿಕೆ ಸೃಷ್ಟಿಸಿದ್ದೇವೆ. ಇವೆಲ್ಲ ಶೀಘ್ರದಲ್ಲೇ ಫಲ ಕೊಡಲಿವೆ.

ನ.8 ಹತ್ತಿರ ಬರುತ್ತಿದೆ. ಕಳೆದ ವರ್ಷ ಅಪನಗದೀಕರಣ ಜಾರಿಗೆ ಬಂದ ದಿನವಿದು. ಅಂದು ವಿರೋಧ ಪಕ್ಷಗಳು ಕರಾಳ ದಿನ ಆಚರಿಸಿ ದೊಡ್ಡ ಮೆರವಣಿಗೆ ನಡೆಸಲಿವೆ. ಅಪನಗದೀಕರಣ ಯಶಸ್ವಿಯಾಗಿದ್ದರೆ ಇಂತಹ ಮೆಗಾರ್ಯಾಲಿಗೆ ಈಗ ಸಿಗುತ್ತಿರುವ ನೈತಿಕ ಬೆಂಬಲ ಸಿಗುತ್ತಿತ್ತೇ?

ಅಪನಗದೀಕರಣದ ನಂತರ ದೇಶದಲ್ಲಿ ನಗದು ಬಳಕೆ ಕಡಿಮೆಯಾಗಿ, ಕಪ್ಪು ಹಣ ಚಲಾವಣೆ ನಿಂತಿದೆ. ಡಿಜಿಟಲ್ ಅಥವಾ ಆನ್‌ಲೈನ್ ವ್ಯವಹಾರ ಹೆಚ್ಚಿರುವುದರಿಂದ ಭ್ರಷ್ಟಾಚಾರ ಕಡಿಮೆಯಾಗಿದೆ. ಜಮ್ಮು ಕಾಶ್ಮೀರದಲ್ಲಿ ಕಲ್ಲೆಸೆಯುವವರಿಗೆ ಹಣ ಸಿಗದೆ ಪರದಾಡುತ್ತಿದ್ದಾರೆ. ಭಯೋತ್ಪಾದನೆಗೆ ಹಣದ ಹರಿವು ನಿಂತಿದೆ. ತೆರಿಗೆ ಪಾವತಿದಾರರ ಸಂಖ್ಯೆ ದುಪ್ಪಟ್ಟಾಗಿದೆ. ಮೊದಲ ಹಂತದಲ್ಲೇ ಇಷ್ಟೆಲ್ಲ ಬದಲಾವಣೆಯಾಗಿದೆ. ಇನ್ನೂ ನಾವು ಮಾಡಬೇಕಾದ ಕೆಲಸಗಳು ಬಾಕಿಯಿವೆ. ಇಷ್ಟಾಗಿಯೂ ಇದರ ವಿರುದ್ಧ ಕರಾಳ ದಿನ ಆಚರಿಸುತ್ತೇವೆ ಎಂದು ಹೇಳಿದರೆ ಜನರೇ ಅರ್ಥಮಾಡಿಕೊಳ್ಳಬೇಕು.

Follow Us:
Download App:
  • android
  • ios