ಶ್ರೀನಗರ: ಪುಲ್ವಾಮಾ ದಾಳಿಯಿಂದ ಎಚ್ಚೆತ್ತಿರುವ ಕೇಂದ್ರ ಸರ್ಕಾರ, ಜಮ್ಮು-ಕಾಶ್ಮೀರದಲ್ಲಿ ಸೇನಾ ತುಕಡಿಗಳು ಪ್ರಯಾಣಿಸುವಾಗ ನಾಗರಿಕರ ಪ್ರಯಾಣಕ್ಕೆ ನಿರ್ಬಂಧ ಹೇರಲು ನಿರ್ಧರಿಸಿದೆ. ಅಂದರೆ, ಇನ್ನು ಮುಂದೆ ಸೈನಿಕರ ವಾಹನಗಳು ಹೋಗುವಾಗ ರಸ್ತೆಯಲ್ಲಿ ಜನಸಾಮಾನ್ಯರ ವಾಹನಗಳಿಗೆ ಅವಕಾಶ ಇರುವುದಿಲ್ಲ ಅರ್ಥಾತ್‌ ಜೀರೋ ಟ್ರಾಫಿಕ್‌ ಇರುತ್ತದೆ. ಇದೇ ವೇಳೆ, ಪಾಕಿಸ್ತಾನ ಹಾಗೂ ಅದರ ಗುಪ್ತಚರ ಸಂಸ್ಥೆ ಐಎಸ್‌ಐನಿಂದ ನೆರವು ಪಡೆಯುತ್ತಿರುವ ಪ್ರತ್ಯೇಕತಾವಾದಿ ಹುರಿಯತ್‌ ನಾಯಕರಿಗೆ ನೀಡಲಾಗಿರುವ ಭದ್ರತೆ ಕಡಿತಗೊಳಿಸುವ ಕುರಿತು ಸರ್ಕಾರ ಸುಳಿವು ನೀಡಿದೆ.

ಪುಲ್ವಾಮಾ ಜಿಲ್ಲೆಯಲ್ಲಿ 2500 ಸೈನಿಕರನ್ನು ಹೊತ್ತು 78 ಬಸ್‌ಗಳು ಸಾಗುತ್ತಿದ್ದಾಗ ಜೈಷ್‌ ಎ ಮೊಹಮ್ಮದ್‌ ಉಗ್ರಗಾಮಿಯೊಬ್ಬ ಸ್ಫೋಟಕ ತುಂಬಿದ್ದ ಸ್ಕಾರ್ಪಿಯೋ ಕಾರು ನುಗ್ಗಿಸಿ ದಾಳಿ ನಡೆಸಿ, 40 ಮಂದಿಯನ್ನು ಬಲಿ ಪಡೆದಿದ್ದ. ಸೈನಿಕರು ಸಾಗುವಾಗ ಸಾರ್ವಜನಿಕರ ವಾಹನಗಳಿಗೆ ಅವಕಾಶ ನೀಡಿದ್ದರಿಂದಾಗಿ ಉಗ್ರನನ್ನು ಪತ್ತೆ ಹಚ್ಚಲು ಆಗಿರಲಿಲ್ಲ.

ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ಜಮ್ಮು- ಕಾಶ್ಮೀರದಲ್ಲಿ ಸೇನೆ ಹಾಗೂ ಭದ್ರತಾ ಪಡೆಗಳಿಗೆ ಸೇರಿದ ತುಕಡಿಗಳು ಸಾಗುವಾಗ ನಾಗರಿಕರ ಪ್ರಯಾಣಕ್ಕೆ ನಿರ್ಬಂಧ ಹೇರಲಾಗುತ್ತದೆ ಎಂದು ಗೃಹ ಸಚಿವ ರಾಜನಾಥ ಸಿಂಗ್‌ ತಿಳಿಸಿದ್ದಾರೆ.

ಪುಲ್ವಾಮಾ ದಾಳಿ ಹಿನ್ನೆಲೆಯಲ್ಲಿ ಶುಕ್ರವಾರ ಅತ್ಯುನ್ನತ ಮಟ್ಟದ ಭದ್ರತಾ ಪರಿಶೀಲನೆ ಸಭೆ ನಡೆಸಿದ ಅವರು, ಪಾಕಿಸ್ತಾನದಿಂದ ನೆರವು ಪಡೆಯುತ್ತಿರುವ ನಾಯಕರಿಗೆ ನೀಡಲಾಗಿರುವ ಭದ್ರತೆಯನ್ನು ಪರಿಶೀಲಿಸಲಾಗುವುದು ಎಂದು ಹುರಿಯತ್‌ ಹೆಸರು ಪ್ರಸ್ತಾಪಿಸದೇ ತಿಳಿಸಿದರು.