ಪ್ರಧಾನಿ ನರೇಂದ್ರ ಮೋದಿ ಅವರು ಕೆಲ ದಿನಗಳ ಫಿಟ್ ನೆಸ್ ಚಾಲೆಂಜ್ ಸ್ವೀಕಾರ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದ ಅದಕ್ಕೆ ಮಾಡಿರುವ ವೆಚ್ಚದ ಬಗ್ಗೆಯೂ ಕೂಡ ಅನೇಕ ಸುದ್ದಿಗಳು ಹರಿದಾಡಿದ್ದವು. ಈ ಬಗ್ಗೆ ಪ್ರಧಾನಿ ಕಚೇರಿ ಸ್ಪಷ್ಟನೆ ನೀಡಿದೆ.
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಫಿಟ್ ನೆಸ್ ಚಾಲೆಂಜ್ ಸ್ವೀಕರಿಸಿದ ವಿಡಿಯೋ ಮಾಡಲು 35 ಲಕ್ಷ ರು. ವ್ಯಯ ಮಾಡಲಾಗಿದೆ ಎಂದು ವರದಿಯೊಂದು ಪ್ರಸಾರವಾಗಿತ್ತು. ಆದರೆ ಇದೀಗ ಪ್ರಧಾನಿ ಕಚೇರಿ ಈ ಬಗ್ಗೆ ಸ್ಪಷ್ಟನೆ ನೀಡಿದೆ. ಇದಕ್ಕೆ ಯಾವುದೇ ಪ್ರಮಾಣದ ವೆಚ್ಚ ಮಾಡಲಾಗಿಲ್ಲ. ಇದೊಂದು ಶೂನ್ಯ ಬಜೆಟ್ ಕಾರ್ಯಕ್ರಮ ಎಂದು ಹೇಳಿದೆ.
ಈ ವಿಡಿಯೋ ಪ್ರಧಾನಿ ಅವರ ಕ್ಯಾಮರಾ ಮನ್ ಅವರಿಂದ ಮಾಡಲಾಗಿದ್ದು ಪ್ರಧಾನಿ ನಿವಾಸದಲ್ಲಿ ಇದರ ಶೂಟಿಂಗ್ ಮಾಡಲಾಗಿತ್ತು ಎಂದು ಪ್ರಧಾನಿ ಕಚೇರಿ ಹೇಳಿದೆ.
ಈ ಸಂಬಂಧ ಇದೀಗ ಪತ್ರಕರ್ತ ಹಾಗೂ ಇಂಡಿಯಾ ಸ್ಕೂಪ್ ವೆಬ್ ಸೈಟ್ ಎಡಿಟರ್ ನಿಖಿಲ್ ವಾಗ್ಲೇ ಎನ್ನುವವರಿಗೆ ಲೀಗಲ್ ನೋಟಿಸ್ ಜಾರಿ ಮಾಡಲಾಗಿದೆ. ಪ್ರಧಾನಿ ಮೋದಿ ವಿರುದ್ಧ ಇಂತಹ ವರದಿ ಪ್ರಸಾರ ಮಾಡಿರುವ ಸಂಬಂಧ ನೋಟಿಸ್ ನೀಡಲಾಗಿದೆ.
ಇದಕ್ಕೆ ಯಾವುದೇ ಪ್ರಮಾಣದಲ್ಲಿ ವೆಚ್ಚ ಮಾಡಲಾಗಿಲ್ಲ. ಪ್ರಧಾನಿ ಮೋದಿ ಅವರ ನಿವಾಸದಲ್ಲೇ ವಿಡಿಯೋ ಮಾಡಲಾಗಿದೆ ಎಂದು ಆರ್ ಟಿಐ ಅರ್ಜಿಯೊಂದಕ್ಕೆ ಪ್ರಧಾನಿ ಕಚೇರಿಯಿಂದ ಉತ್ತರ ನೀಡಿದ್ದು, ಶೂನ್ಯ ಬಜೆಟ್ ಕಾರ್ಯಕ್ರಮ ಎಂದಿದೆ.
ತಿಂಗಳ ಹಿಂದಷ್ಟೇ ಫಿಟ್ ನೆಸ್ ಚಾಲೆಂಜ್ ಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು 35 ಲಕ್ಷ ವೆಚ್ಚ ಮಾಡಿದ್ದಾರೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗಿತ್ತು. ಯೋಗ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋಗಳನ್ನು ಹಾಕಲಾಗಿದ್ದು, ಖರ್ಚಿನ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗುತ್ತಲೇ ಕಾಂಗ್ರೆಸ್ ಮುಖಂಡರು ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದರು.

Last Updated 9, Sep 2018, 9:31 PM IST