Asianet Suvarna News Asianet Suvarna News

ಸಚಿವ ಜಮೀರ್ ಅಹಮದ್ ಗೆ ದೊಡ್ಡ ಹೊಣೆ

ಸಿದ್ದರಾಮಯ್ಯ ಜಮೀರ್ ಅಹಮದ್ ಗೆ ಬಹುದೊಡ್ಡ ಜವಾಬ್ದಾರಿಯೊಂದನ್ನು ವಹಿಸಿದ್ದಾರೆ. ತಮ್ಮ ಹೊಸ ಟೀಂಗೆ ಸೇರಿಸಿಕೊಳ್ಳುವ ಮೂಲಕ ಹೊಣೆ ನೀಡಿದ್ದಾರೆ. 

Zameer Ahmed Take Big Responsibility in siddaramaiah Ahinda team
Author
Bengaluru, First Published Jun 30, 2019, 8:00 AM IST

ಬೆಂಗಳೂರು [ಜೂ.30] :  ಅಹಿಂದ- 1 ರ ಅವಧಿಯಲ್ಲಿ  ಸಂಘಟನೆಯಲ್ಲಿ ದೊಡ್ಡ ಪಾತ್ರ ನಿರ್ವಹಿಸಿದ್ದ ಜೆ.ಪಿ.ನಾರಾಯಣಸ್ವಾಮಿ ಹಾಗೂ ಸತೀಶ್ ಜಾರಕಿಹೊಳಿ ಅವರ ಪಾತ್ರವನ್ನು ಈ ಬಾರಿ ಹೆಬ್ಬಾಳ ಶಾಸಕ ಬೈರತಿ ಸುರೇಶ್ ಹಾಗೂ ಸಚಿವ ಜಮೀರ್ ಅಹ್ಮದ್ ಅವರು ನಿರ್ವಹಿಸುವ ಸಾಧ್ಯತೆಯಿದೆ. ಆರ್ಥಿಕ ಚೈತನ್ಯದ ಜತೆಗೆ ಸಮುದಾಯವನ್ನು ಸಂಘಟಿಸುವ ದಿಸೆಯಲ್ಲಿ ಈ ಇಬ್ಬರು ನಾಯಕರು ಪ್ರಮುಖ ಪಾತ್ರ  ನಿರ್ವಹಿಸುವ ಸಾಧ್ಯತೆಯಿದೆ. 

ಉಳಿದಂತೆ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ, ಆರ್.ಬಿ.ತಿಮ್ಮಾಪುರ, ಎಚ್. ಆಂಜನೇಯ, ಸಚಿವ ಮಹದೇವಪ್ಪ, ಪಿ.ಎಂ.ನರೇಂದ್ರಸ್ವಾಮಿ ಅವರಂತಹ ನಾಯಕರಿಗೂ ಮುಖ್ಯ ಹೊಣೆಗಳು ದೊರೆಯಲಿದೆ. ಅಹಿಂದ-1 ರ ಅವಧಿಯಲ್ಲಿ ಹುಬ್ಬಳ್ಳಿ-  ಧಾರವಾಡ, ಬೆಳಗಾವಿ, ಹಾಸನ, ತುಮಕೂರು, ಕೋಲಾರ, ಮೈಸೂರು ಸೇರಿದಂತೆ ಹಲವು ಕಡೆಗಳಲ್ಲಿ ಬೃಹತ್ ಸಮಾವೇಶವನ್ನು ಸಿದ್ದರಾಮಯ್ಯ ಅವರು ಸಂಘಟಿಸಿ ರಾಜ್ಯಾದ್ಯಂತ ಸದ್ದು ಮಾಡಿದ್ದರು. ಜೆಡಿಎಸ್ ಪಕ್ಷದಲ್ಲಿ ಇದ್ದುಕೊಂಡು, ಉಪ ಮುಖ್ಯಮಂತ್ರಿ ಸ್ಥಾನ ಅನುಭವಿಸುತ್ತಾ ಅಹಿಂದ ಸಂಘಟನೆಗೆ ಸಿದ್ದರಾಮಯ್ಯ ಮುಂದಾಗಿದ್ದು ಆಗ ದೇವೇಗೌಡರು ಕ್ರುದ್ಧರಾಗಲು ಕಾರಣವಾಗಿತ್ತು. ಈ ಸಂಘರ್ಷದ ಪರಿಣಾಮವಾಗಿ ಸಿದ್ದರಾಮಯ್ಯ ಹಾಗೂ ಅವರ ತಂಡ ಜೆಡಿಎಸ್ ತೊರೆದು ಕಾಂಗ್ರೆಸ್‌ಗೆ ಆಗಮಿಸಿತ್ತು. ಅನಂತರ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದಲ್ಲಿ ಹಿಡಿತ ಸಾಧಿಸಿ, ಮುಖ್ಯಮಂತ್ರಿಯಾಗಿದ್ದು ಈಗ ಇತಿಹಾಸ. 

ಲೋಕಸಭೆ ಚುನಾವಣೆ ಫಲಿತಾಂಶದ ಪರಿಣಾಮ: ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆ ಅಹಿಂದ ವರ್ಗಗಳು ಈಗ ಒಂದೇ ಛಾವಣಿಯಡಿಯಲ್ಲಿ ಇಲ್ಲ, ಅವು ಛಿದ್ರಗೊಂಡಿವೆ ಎಂಬುದನ್ನು ಸ್ಪಷ್ಟವಾಗಿ ಹೇಳಿದೆ. ಕುರುಬ ಹಾಗೂ ಅಲ್ಪಸಂಖ್ಯಾತರು ಈಗಲೂ ಕಾಂಗ್ರೆಸ್ ಜತೆಗೆ ಇದ್ದರೆ, ಇತರೆ ಹಿಂದುಳಿದ ವರ್ಗಗಳು ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ಮತಗಳು ಛಿದ್ರಗೊಂಡಿವೆ. ಈ ಪೈಕಿ ಬಹುತೇಕ ಸಮುದಾಯಗಳು ಬಿಜೆಪಿಯತ್ತ ವಾಲಿವೆ. ಇದು ಅಹಿಂದ ನಾಯಕ ಎಂಬ ಸಿದ್ದರಾಮಯ್ಯ ಅವರ ಖ್ಯಾತಿಗೆ ದೊಡ್ಡ ಹೊಡೆತ ಕೊಟ್ಟಿದೆ ಮತ್ತು ಸಿದ್ದರಾಮಯ್ಯ ಅವರು ಕೇವಲ ಕುರುಬ ಸಮುದಾಯದ ನಾಯಕರೇ ಎಂಬ ಪ್ರಶ್ನೆಯೂ ಹುಟ್ಟುವಂತೆ ಮಾಡಿದೆ.

ಹೀಗಾಗಿ, ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕೇವಲ ಕುರುಬ ಸಮಾಜದ ಅಭ್ಯುದಯಕ್ಕಾಗಿ ಕೆಲಸ ಮಾಡಿಲ್ಲ. ಇತರೆ ಹಿಂದುಳಿದವರು ಹಾಗೂ ದಲಿತರಿಗೂ ಕೆಲಸ ಮಾಡಿದ್ದೇನೆ ಎಂಬುದನ್ನು ಈ ವರ್ಗಗಳಿಗೆ ಹೇಳುವ ಜತೆಗೆ, ಬಿಜೆಪಿಗೆ ಬೆಂಬಲ ನೀಡುವುದು ಹೇಗೆ ಇತರೆ ಅಹಿಂದ ವರ್ಗಗಳಿಗೆ ಘಾತುಕವಾಗುತ್ತದೆ ಎಂಬುದನ್ನು ಈ ವರ್ಗಗಳಿಗೆ ಮನದಟ್ಟು ಮಾಡಿಕೊಡುವ ಉದ್ದೇಶದೊಂದಿಗೆ ಸಿದ್ದರಾಮಯ್ಯ ಅಹಿಂದ-೨ಗೆ ಸಜ್ಜಾಗಿದ್ದಾರೆ. ಇದಕ್ಕೆ ಇದೀಗ ಹೊಸ ಪಡೆ ಕಟ್ಟಲು ಮುಂದಾಗಿದ್ದಾರೆ.

Follow Us:
Download App:
  • android
  • ios