ಮುಸ್ಲಿಂ ಸಮುದಾಯದ ಬೆಂಬಲ ಇಲ್ಲದ ನಾಲಾಯಕರಿಗೆ ಸಚಿವ ಸ್ಥಾನ ನೀಡಿದ್ದಾರೆ ಎಂಬ ಮಾಜಿ ಸಚಿವ ತನ್ವೀರ್‌ ಸೇಠ್‌ ಹೇಳಿಕೆಗೆ ತಿರುಗೇಟು ನೀಡಿರುವ ಆಹಾರ ಸಚಿವ ಜಮೀರ್‌ ಅಹ್ಮದ್‌ ಖಾನ್‌, ಜನಬೆಂಬಲ ಸಾಬೀತುಪಡಿಸಲು ತನ್ವೀರ್‌ ಅವರಿಗೆ ಪಂಥಾಹ್ವಾನ ನೀಡಿದ್ದಾರೆ. 

ಬೆಂಗಳೂರು (ಜೂ. 20): ಆಹಾರ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಅವರಿಂದ ಹಜ್‌ ಖಾತೆ ಮತ್ತು ವಕ್ಫ್ ಖಾತೆಗಳನ್ನು ವಾಪಸು ಪಡೆಯುವಂತೆ ಮಾಜಿ ಸಚಿವ ರೋಷನ್‌ ಬೇಗ್‌ ಅವರು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಮೇಲೆ ತೀವ್ರ ಒತ್ತಡ ಹೇರುತ್ತಿದ್ದಾರೆ ಎಂದು ತಿಳಿದುಬಂದಿದೆ.

ಮುಸ್ಲಿಂ ಸಮುದಾಯದ ಬೆಂಬಲ ಇಲ್ಲದ ನಾಲಾಯಕರಿಗೆ ಸಚಿವ ಸ್ಥಾನ ನೀಡಿದ್ದಾರೆ ಎಂಬ ಮಾಜಿ ಸಚಿವ ತನ್ವೀರ್‌ ಸೇಠ್‌ ಹೇಳಿಕೆಗೆ ತಿರುಗೇಟು ನೀಡಿರುವ ಆಹಾರ ಸಚಿವ ಜಮೀರ್‌ ಅಹ್ಮದ್‌ ಖಾನ್‌, ಜನಬೆಂಬಲ ಸಾಬೀತುಪಡಿಸಲು ತನ್ವೀರ್‌ ಅವರಿಗೆ ಪಂಥಾಹ್ವಾನ ನೀಡಿದ್ದಾರೆ.

ಅಲ್ಲದೆ, ಖುದ್ದು ತನ್ವೀರ್‌ಸೇಠ್‌ ಕ್ಷೇತ್ರ ನರಸಿಂಹರಾಜಕ್ಕೆ ಹೋಗುತ್ತೇನೆ. ಅವರ ಕ್ಷೇತ್ರದಲ್ಲಿಯೇ ಜನರು ತನ್ವೀರ್‌ಸೇಠ್‌ಗೆ ಬೆಂಬಲ ಸೂಚಿಸುತ್ತಾರೋ ಅಥವಾ ನನಗೆ ಸೂಚಿಸುತ್ತಾರೋ ನೋಡೋಣ. ಅವರು ಹೇಳಿದ ಸಮಯಕ್ಕೆ, ಹೇಳಿದ ಸ್ಥಳಕ್ಕೆ ಹೋಗುತ್ತೇನೆ. ಜನ ಬೆಂಬಲ ಯಾರಿಗಿದೆ ಎಂಬುದು ನಿರ್ಧಾರವಾಗಲಿ ಎಂದು ಸವಾಲು ಹಾಕಿದ್ದಾರೆ.

ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯು.ಟಿ. ಖಾದರ್‌ ಹಾಗೂ ಜಮೀರ್‌ ಅಹ್ಮದ್‌ಖಾನ್‌ಗೆ ಮುಸ್ಲಿಂ ಸಮುದಾಯದ ಬೆಂಬಲವಿಲ್ಲ. ಅಂತಹ ನಾಲಾಯಕ್‌ಗಳಿಗೆ ಸಚಿವ ಸ್ಥಾನ ನೀಡಿದ್ದಾರೆ ಎಂಬ ತನ್ವೀರ್‌ ಸೇಠ್‌ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದರು. ಸುಮ್ಮಸುಮ್ಮನೆ ಸಚಿವ ಸ್ಥಾನ ನೀಡಲು ರಾಹುಲ್‌ ಗಾಂಧಿ ನನ್ನ ನೆಂಟನಲ್ಲ. ಸಾಮರ್ಥ್ಯ ಇರುವುದರಿಂದಲೇ ನನಗೆ ಮಂತ್ರಿ ಸ್ಥಾನ ನೀಡಿದ್ದಾರೆ. ನಾನು ಇಂತಹದ್ದೇ ಖಾತೆ ಬೇಕು ಎಂದು ಕೇಳುವವನಲ್ಲ. ನನ್ನ ಹಣೆಯಲ್ಲಿ ದೇವರು ಬರೆದಿದ್ದ, ಅದಕ್ಕೇ ಮಂತ್ರಿಯಾಗಿದ್ದೇನೆ. ಇಲ್ಲವಾದರೆ ಸಿದ್ದರಾಮಯ್ಯ, ಪರಮೇಶ್ವರ್‌ ಅವರಿಂದಲೂ ನನ್ನನ್ನು ಸಚಿವನಾಗಿ ಮಾಡಲು ಸಾಧ್ಯವಾಗುತ್ತಿರಲಿಲ್ಲ. ದೇವರು ಬರೆದಿದ್ದರಿಂದ ನಾನು ಮಂತ್ರಿಯಾಗಿದ್ದೇನೆ ಎಂದರು.

ಆದರೆ, ತನ್ವೀರ್‌ ಸೇಠ್‌ ನನ್ನನ್ನು ಸೋಲಿಸಲು ಜಮೀರ್‌ ಪ್ರಯತ್ನಿಸಿದ್ದಾರೆ ಎಂದಿದ್ದಾರೆ. ಹಾಗಿದ್ದರೆ ಅವರು ಹೈಕಮಾಂಡ್‌ಗೆ ದೂರು ಕೊಡಬಹುದಿತ್ತು. ಈಗ ಇದ್ದಕ್ಕಿದ್ದಂತೆ ನನ್ನನ್ನು ಜಮೀರ್‌ ಅಹ್ಮದ್‌ ಸೋಲಿಸಲು ಪ್ರಯತ್ನಿಸಿದ್ದರು ಎಂದರೆ ಹೇಗೆ? ನನಗೆ ಜನ ಬೆಂಬಲ ಇಲ್ಲ ಎಂದು ಅವರೇ ಹೇಳಿದ್ದಾರೆ, ಇನ್ನು ಮೈಸೂರಿಗೆ ಹೋಗಿ ನನ್ನಂಥವನು ಅವರನ್ನು ಸೋಲಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.

ತನ್ವೀರ್‌ ಸೇಠ್‌ ಅವರು ಸಚಿವರಾಗಿದ್ದಾಗ ಮೈಸೂರು ಬಿಟ್ಟು ಹೋಗಿಲ್ಲ. ಅವರಿಗಿಂತ ನನಗೆ ಜನ ಬೆಂಬಲ ಇದೆ. ನಾನು ಸುಖಾಸುಮ್ಮನೆ ಸವಾಲು ಹಾಕಲ್ಲ. ನನಗೆ ಸವಾಲು ಹಾಕಿದರೆ ಜವಾಬು ಕೊಡಬೇಕಲ್ಲ. ಹೀಗಾಗಿ ಸವಾಲು ಹಾಕುತ್ತಿದ್ದೇನೆ. ಮುಸ್ಲಿಂ ನಾಯಕ ಯಾರು ಅನ್ನೋದನ್ನ ಜನ ಗುರುತಿಸುತ್ತಾರೆ ಎಂದರು.

ರೋಷನ್‌ ಬೇಗ್‌ ಅಸಮಾಧಾನ ಸಹಜ:

ಮಂತ್ರಿ ಸ್ಥಾನ ಕೈತಪ್ಪಿದ್ದರಿಂದ ರೋಷನ್‌ ಬೇಗ್‌ ಅಸಮಾಧಾನಗೊಂಡಿರುವುದು ಸಹಜ. ಅವರಿಗೂ ಮಂತ್ರಿಯಾಗಬೇಕೆಂಬ ಆಸೆ ಇತ್ತು. ಹಿಂದೆ ಅವರು ಐದು ವರ್ಷ ಸಚಿವರಾಗಿದ್ದವರು. ಈ ಅವಧಿಯಲ್ಲೂ ಮಂತ್ರಿಯಾಗಬೇಕೆಂದು ಅವರು ಬಯಸಿದ್ದಲ್ಲಿ ತಪ್ಪಿಲ್ಲ. ಪಕ್ಷದ ಸೇವೆ, ಅನುಭವ ನೋಡಿ ನನಗೆ ಮಂತ್ರಿ ಸ್ಥಾನ ಕೊಟ್ಟಿದ್ದಾರೆ ಎಂದು ಸ್ಪಷ್ಟಪಡಿಸಿದರು.