ಮಂಜುನಾಥ ಗದಗಿನ

ಬೆಳಗಾವಿ[ಆ.19]: ಪ್ರವಾಹ ಬಂದಾಗ ಜಾತಿ, ಧರ್ಮಗಳನ್ನು ಬದಿಗಿರಿಸಿ ರಾಜ್ಯದ ಜನತೆ ಸಂತ್ರಸ್ತರ ಕಷ್ಟಗಳಿಗೆ ಸ್ಪಂದಿಸಿದ್ದು, ನಮ್ಮ ದೇಶದ ಭ್ರಾತೃತ್ವ ಭಾವನೆಗೆ ಹಿಡಿದ ಕೈಗನ್ನಡಿಯಾಗಿದೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಯುವ ಬ್ರಿಗೇಡ್‌ನ ಯುವಕ, ಯುವತಿಯರು ಸೇರಿಕೊಂಡು ಪ್ರವಾಹ ಪೀಡಿತ ಸುನ್ನಾಳ ಗ್ರಾಮದ ಮಸೀದಿಯಲ್ಲಿದ್ದ ರಾಡಿಯನ್ನು ತೆಗೆದು ನೀರು ಹಾಕಿ ಸ್ವಚ್ಛಗೊಳಿಸಿ ಐಕ್ಯತೆ ಸಾರಿದ್ದಾರೆ.

ತಾಲೂಕಿನ ಸುನ್ನಾಳ ಗ್ರಾಮ ಮಲಪ್ರಭೆ ಪ್ರವಾಹಕ್ಕೆ ಮುಳುಗಡೆಯಾಗಿತ್ತು. ಈ ವೇಳೆ ಊರ ತುಂಬೆಲ್ಲ ನೀರು ಆವರಿಸಿ ಜಲದಿಗ್ಬಂಧನವಾಗಿತ್ತು. ಈ ವೇಳೆ ಊರಿನ ಎಲ್ಲ ಮನೆಗಳು, ದೇವಾಲಯಗಳು, ಮಸೀದಿಗಳು ಮುಳುಗಡೆಯಾಗಿದ್ದವು. ಆದರೆ ಐದಾರು ದಿನಗಳು ಕಳೆದ ನಂತರ ಊರಲ್ಲಿ ನೀರು ಕಡಿಮೆಯಾಯಿತು. ಈ ವೇಳೆ ಮುಸ್ಲಿಂ ಸಮುದಾಯದವರು ನಮಾಜ್‌ ಮಾಡಲು ಮಸೀದಿಗೆ ಹೋದರೆ ಮಸೀದಿಯೆಲ್ಲ ರಾಡಿ ನೀರಿನಿಂದ ತುಂಬಿತ್ತು. ಈ ವೇಳೆ 22ರಿಂದ 25 ಸದಸ್ಯರಿರುವ ಯುವ ಬ್ರಿಗೇಡ್‌ಗೆ ತಿಳಿಸಿದಾಗ ರಾಮದುರ್ಗ ಸುತ್ತಲ ಗ್ರಾಮಗಳ ಕಾರ್ಯಕರ್ತರು ಸಲಿಕೆ, ಬುಟ್ಟಿಗಳ ಹಾಗೂ ಟ್ರ್ಯಾಕ್ಟರ್‌ ಸಮೇತವಾಗಿ ಬಂದು ಮಸೀದಿ ಹಾಗೂ ಮಸೀದಿ ಮುಂದಿದ್ದ ರಾಡಿಯನ್ನು ಸ್ವಚ್ಛಗೊಳಿಸಿದ್ದಾರೆ.

ಅದೇ ರೀತಿಯಲ್ಲಿ ಸುನ್ನಾಳ ಗ್ರಾಮದಲ್ಲಿ ಇರುವ ಪ್ರಸಿದ್ಧ ಹನುಮಾನ ಮಂದಿರ, ರಾಮದುರ್ಗ ಪಟ್ಟಣದ ಕಿಲಬನೂರು ಗ್ರಾಮದ ಪ್ರಾಥಮಿಕ ಶಾಲೆಗಳು ಪ್ರವಾಹಕ್ಕೆ ತುತ್ತಾಗಿತ್ತು. ಎಲ್ಲವನ್ನೂ ಯುವ ಬ್ರಿಗೇಡ್‌ ಸದಸ್ಯರು ಸ್ವಚ್ಛಗೊಳಿಸಿದರು. ಅಷ್ಟೇ ಅಲ್ಲದೇ ವಿದ್ಯಾರ್ಥಿಗಳ ರಿಜಿಸ್ಟರ್‌ ಕೂಡಾ ಹಾಳಾಗಿತ್ತು. ಈಗಾಗಲೇ ಯುವ ಬ್ರಿಗೇಡ್‌ ಯುವಕರು ಮತ್ತಷ್ಟುಶಾಲೆ, ದೇವಾಲಯ, ಮಸೀದಿ, ಮನೆಗಳನ್ನು ಸ್ವಚ್ಛ ಮಾಡಲು ಯೋಜನೆ ರೂಪಿಸಿಕೊಂಡಿದ್ದಾರೆ. ಈ ಯುವಕರ ಈ ಸೇವೆ ಎಲ್ಲರಿಗೂ ಮಾದರಿಯಾಗಿದೆ.