ಮಹಿಳಾ ಸಂಸದೆಗೆ ಕಾರು ನೀಡಲು ಕೇರಳ ಕಾಂಗ್ರೆಸ್‌ ಕ್ರೌಡ್‌ಫಂಡಿಂಗ್‌!| ದಲಿತ ಸಂಸದೆ ರಮ್ಯಾಗಾಗಿ ಈ ಸಾಹಸ

ತಿರುವನಂತಪುರ[ಜು.21]: ಶಾಸನ ಸಭೆಗಳಿಗೆ ಆಯ್ಕೆಯಾದ ಜನಪ್ರತಿನಿಧಿಗಳೆಂದರೆ ಸಾಮಾನ್ಯವಾಗಿ ಆಳು-ಕಾಳುಗಳಿರುವ ಶ್ರೀಮಂತರು ಎಂಬ ಭಾವವಿರುತ್ತೆ. ಆದರೆ, ಕೇರಳದ ಅಲಥೂರ್‌ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿರುವ ಕಾಂಗ್ರೆಸ್‌ನ ರಮ್ಯಾ ಹರಿದಾಸ್‌ ಬಳಿ ಓಡಾಡಲು ಕಾರು ಸಹ ಇಲ್ಲ. ಈ ಹಿನ್ನೆಲೆಯಲ್ಲಿ ಸಂಸದೆ ರಮ್ಯಾಗೆ ಕಾರನ್ನು ಉಡುಗೊರೆಯಾಗಿ ನೀಡಲು ಅಲಥೂರ್‌ನ ಯುವ ಕಾಂಗ್ರೆಸ್‌ ಕಾರ್ಯಕರ್ತರು ಕ್ರೌಡ್‌ಫಂಡಿಂಗ್‌ ಮೊರೆ ಹೋಗಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್‌ನ ಅಲಥೂರ್‌ ಘಟಕದ ಅಧ್ಯಕ್ಷ ಪಳಯಂ ಪ್ರದೀಪ್‌, ‘ಸಂಸದೆ ರಮ್ಯಾ ಅವರಿಗೆ ಕಾರು ಖರೀದಿಸಿ ನೀಡುವ ಸಲುವಾಗಿ ಕ್ರೌಡ್‌ಫಂಡಿಂಗ್‌ ಆರಂಭಿಸಲಾಗಿದ್ದು, ಪಕ್ಷದ ಕಾರ್ಯಕರ್ತರು ಮಾತ್ರವೇ ಧನ ಸಹಾಯ ನೀಡಬಹುದಾಗಿದೆ. ಸಾರ್ವಜನಿಕರು ನೀಡುವಂತಿಲ್ಲ. ಆದಾಗ್ಯೂ, ಸಾರ್ವಜನಿಕರು ಸಹ ನೆರವಿನ ಹಸ್ತ ಚಾಚಬಹುದು’ ಎಂದು ಹೇಳಿದರು.

ದಿನಗೂಲಿ ಕೆಲಸ ಮಾಡುತ್ತಿದ್ದ ಕಾಂಗ್ರೆಸ್‌ ಮಹಿಳಾ ಘಟಕದ ಕಾರ್ಯಕರ್ತೆಯಾದ ದಲಿತ ವರ್ಗದ ರಾಧಾ ಎಂಬುವರ ಪುತ್ರಿಯಾದ ರಮ್ಯಾ ಅವರು ರಾಹುಲ್‌ ಗಾಂಧಿ ಅವರ ಒತ್ತಾಸೆಯ ಮೇರೆಗೆ 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಜಯ ಸಾಧಿಸಿದ್ದರು. ಈ ಮೂಲಕ ಕಳೆದ 28 ವರ್ಷಗಳಲ್ಲಿ ಲೋಕಸಭೆಗೆ ಆಯ್ಕೆಯಾದ ಮೊದಲ ಮಹಿಳೆ ಹಾಗೂ ಲೋಕಸಭೆಗೆ ಆಯ್ಕೆಯಾದ 2ನೇ ದಲಿತ ಮಹಿಳೆ ಎಂಬ ಇತಿಹಾಸವನ್ನು ನಿರ್ಮಿಸಿದ್ದರು.