ನವದೆಹಲಿ: ನಿರ್ಮಾಣ ಹಂತದ ಮನೆ ಹಾಗೂ ಫ್ಲ್ಯಾಟ್‌ಗಳನ್ನು ಖರೀದಿಸಲು ಉದ್ದೇಶಿಸಿರುವವರಿಗೊಂದು ಸಿಹಿ ಸುದ್ದಿ. ಮನೆ ಖರೀದಿ ಮೇಲೆ ವಿಧಿಸಲಾಗುತ್ತಿರುವ ಶೇ.12ರಷ್ಟುಜಿಎಸ್‌ಟಿ ಅನ್ನು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿ ಶೇ.5ಕ್ಕೆ ಇಳಿಸುವ ಸಾಧ್ಯತೆ ಇದೆ. ಮುಂದಿನ ತಿಂಗಳು ನಡೆಯುವ ಸಭೆಯಲ್ಲಿ ಈ ಕುರಿತು ನಿರ್ಧಾರ ಹೊರಬೀಳುವ ನಿರೀಕ್ಷೆ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಿರ್ಮಾಣ ಹಂತದಲ್ಲಿರುವ ಹಾಗೂ ನಿರ್ಮಾಣ ಪೂರ್ಣಗೊಂಡು ಕಾಮಗಾರಿ ಮುಗಿದ (ಸಿಸಿ) ಪ್ರಮಾಣಪತ್ರ ಹೊಂದಿಲ್ಲದ ಮನೆಗಳನ್ನು ಖರೀದಿಸುವವರಿಗೆ ಶೇ.12ರಷ್ಟುಜಿಎಸ್‌ಟಿ ವಿಧಿಸಲಾಗುತ್ತಿದೆ. 

ಕಾಮಗಾರಿ ಪೂರ್ಣಗೊಂಡ ಪ್ರಮಾಣಪತ್ರ ಹೊಂದಿರುವ ರೆಡಿ-ಟು- ಮೂವ್‌-ಇನ್‌ ಮನೆಗಳಿಗೆ ಜಿಎಸ್‌ಟಿ ವಿನಾಯಿತಿ ಇದೆ. ಬಿಲ್ಡರ್‌ಗಳು ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ ತೋರಿಸಿದರೆ, ಗ್ರಾಹಕರು ಪಾವತಿಸುವ ನೈಜ ಜಿಎಸ್‌ಟಿ ಶೇ.5ರಿಂದ 6ರಷ್ಟಿರುತ್ತದೆ. ಆದರೆ ಬಿಲ್ಡರ್‌ಗಳು ಇದನ್ನು ಗ್ರಾಹಕರಿಗೆ ವರ್ಗಾಯಿಸುತ್ತಿಲ್ಲ. ಏಕೆಂದರೆ, ಬಿಲ್ಡರ್‌ಗಳು ಕಚ್ಚಾ ಸಾಮಗ್ರಿಗಳನ್ನು ನಗದು ರೂಪದಲ್ಲಿ ಖರೀದಿಸುತ್ತಿದ್ದಾರೆ. ಹೀಗಾಗಿ ಗ್ರಾಹಕರ ಅನುಕೂಲಕ್ಕಾಗಿ ಮನೆಗಳ ಮೇಲಿನ ಜಿಎಸ್‌ಟಿ ದರವನ್ನೇ ಶೇ.5ಕ್ಕೆ ಇಳಿಸಲು ಮಂಡಳಿ ಚಿಂತಿಸುತ್ತಿದೆ ಎಂದು ವಿವರಿಸಿದ್ದಾರೆ.