ನವದೆಹಲಿ[ಡಿ.29]: ದೆಹಲಿಯ ಬಾಲಿಕಾ ಗೃಹದಲ್ಲಿ ಕ್ರೂರತ್ವದ ಎಲ್ಲಾ ಮಜಲುಗಳನ್ನು ಮೀರಿದ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. ದೆಹಲಿಯ ಖಾಸಗಿ ಆಶ್ರಯ ಕೇಂದ್ರದಲ್ಲಿ ಆರಮಭದಲ್ಲಿ ಹೆಣ್ಮಕ್ಕಳಿಂದ ಕೆಲಸ ಮಾಡಿಸುತ್ತಿದ್ದು, ಮಾಡಲೊಪ್ಪದ ಮಕ್ಕಳಿಗೆ ಮೆಣಸು ತಿನ್ನಿಸುತ್ತಿದ್ದು, ಹೀಗಿದ್ದರೂ ಕೆಲಸ ಮಾಡಲು ಒಪ್ಪದ ಮಕ್ಕಳ ಗುಪ್ತಾಂಗಕ್ಕೆ ಖಾರದ ಪುಡಿ ಎರಚಿ ಚಿತ್ರಹಿಂಸೆ ನೀಡುತ್ತಿದ್ದ ಆರೋಪ ಕೇಳಿ ಬಂದಿದೆ. ಈ ಸಂಬಂಧ ದೆಹಲಿಯ ಮಹಿಳಾ ಆಯೋಗವು ಬಾಲಿಕಾ ಗೃಹದ ಸಿಬ್ಬಂದಿಗಳ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ.

ದೆಹಲಿ ಮಹಿಳಾ ಆಯೋಗವು ರಾಜಧಾನಿಯ ಸರ್ಕಾರಿ ಹಾಗೂ ಖಾಸಗಿ ಬಾಲಿಕಾ ಗೃಹಗಳ ತನಿಖೆ ನಡೆಸಲು ಸಮಿತಿಯೊಂದನ್ನು ರಚಿಸಿತ್ತು. ಸಮಿತಿ ಸದಸ್ಯರು ಗುರುವಾದಂದು ಇಲ್ಲಿನ ದ್ವಾರಕಾದಲ್ಲಿರುವ ಒಂದು ಖಾಸಗಿ ಆಶ್ರಯ ನಿವಾಸದ ಮೇಲೆ ದಾಳಿ ನಡೆಸಿದಾಗ ಅಲ್ಲಿ ಅನೇಕ ಅಪ್ರಾಪ್ತ ಹೆಣ್ಮಕ್ಕಳನ್ನು ಇರಿಸಿರುವುದು ಬೆಳಕಿಗೆ ಬಂದಿದೆ.

ಸಮಿತಿ ಸದಸ್ಯರು ಈ ಬಾಲಕಿಯರನ್ನು ಮಾತನಾಡಿಸಿದಾಗ ಹಲವಾರು ಬೆಚ್ಚಿ ಬೀಳಿಸುವ ವಿಚಾರಗಳು ಬೆಳಕಿಗೆ ಬಂದಿವೆ. ಇಲ್ಲಿ ಹಿರಿಯ ಬಾಲಕಿಯರಿಂದ ಕಿರಿಯ ಮಕ್ಕಳ ಕೆಲಸ ಮಾಡಿಸಲಾಗುತ್ತಿತ್ತು. ಅಲ್ಲದೇ ಪಾತ್ರೆ ತೊಳೆಯುವುದು, ಕೋಣೆ ಹಾಗೂ ಟಾಯ್ಲೆಟ್ ಗಳನ್ನು ಸ್ವಚ್ಛಗೊಳಿಸುವುದು ಕೂಡಾ ಮಾಡಿಸುತ್ತಿದ್ದರು ಎಂದಿದ್ದಾರೆ. 

ಕೆಲವೊಮ್ಮೆ ಈ ಕೆಲಸ ಮಾಡಲು ನಿರಾಕರಿಸಿದಾಗ ಇಲ್ಲಿನ ಸಿಬ್ಬಂದಿಗಳು ಮೆಣಸು ತಿನ್ನಿಸುತ್ತಿದ್ದರು. ಇದಾದ ಬಳಿಕವೂ ಕೆಲಸ ಮಾಡಲೊಪ್ಪದವರ  ಗುಪ್ತಾಂಗಕ್ಕೆ ಖಾರದ ಪುಡಿ ಎರಚುತ್ತಿದ್ದರೆಂದು ಬಾಲಕಿಯರು ಬಾಯ್ಬಿಟ್ಟಿದ್ದಾರೆ. 

ಸದ್ಯ ಆಶ್ರಯ ನಿವಾಸದ ಸಿಬ್ಬಂದಿಗಳ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದ್ದು, ಆಯೋಗವು ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಸಚಿವರಿಗೆ ಮಾಹಿತಿ ನೀಡಿದ್ದಾರೆ.