ನವದೆಹಲಿ(ಅ. 28): ನ್ಯಾಯಾಧೀಶರ ನೇಮಕಾತಿ ವಿಚಾರದಲ್ಲಿ ವಿಳಂಬ ಮಾಡುತ್ತಿರುವ ಕೇಂದ್ರ ಸರಕಾರದ ವಿರುದ್ಧ ಸರ್ವೋಚ್ಚ ನ್ಯಾಯಾಲಯ ಹರಿಹಾಯ್ದಿದೆ. ನ್ಯಾಯಮೂರ್ತಿಗಳ ನೇಮಕಾತಿ ನಡೆಯದೇ ಇರುವುದರಿಂದ ಅನೇಕ ಕೋರ್ಟ್ ರೂಮ್'ಗಳು ಬಾಗಿಲು ಹಾಕಬೇಕಾದ ಪರಿಸ್ಥಿತಿ ಬಂದಿದೆ. ಚುನಾವಣೆ ವೇಳೆ ನ್ಯಾಯಾಧೀಶರ ನೇಮಕಾತಿಗೆ ಆದ್ಯತೆ ನೀಡಲಾಗುವುದು ಎಂದು ಸರಕಾರ ಮಾಡಿದ ಭರವಸೆ ಏನಾಯಿತು? ಎಂದು ಮುಖ್ಯನ್ಯಾಯಮೂರ್ತಿ ಟಿಎಸ್ ಠಾಕೂರ್ ಪ್ರಶ್ನಿಸಿದರು.

ಶುಕ್ರವಾರ ನಡೆದ ಓಪನ್ ಕೋರ್ಟ್ ವಿಚಾರಣೆ ವೇಳೆ ಮುಖ್ಯನ್ಯಾಯಮೂರ್ತಿ ಟಿಎಸ್ ಠಾಕೂರ್ ನೇತೃತ್ವದ ತ್ರಿಸದಸ್ಯ ಸುಪ್ರೀಂಪೀಠವು ಕೇಂದ್ರ ಸರಕಾರದ ಧೋರಣೆಯನ್ನು ತರಾಟೆಗೆ ತೆಗೆದುಕೊಂಡಿತು. ಕೇಂದ್ರ ಸರಕಾರವು ದೇಶದ ನ್ಯಾಯವ್ಯವಸ್ಥೆಯನ್ನೇ ನಾಶಮಾಡಲು ಹೊರಟಿದೆ ಎಂದು ಸುಪ್ರೀಂ ಆಪಾದಿಸಿತು.

"ಕರ್ನಾಟಕದ ಹೈಕೋರ್ಟ್'ನಲ್ಲಿ ನ್ಯಾಯಮೂರ್ತಿಗಳ ಕೊರೆತೆಯಿಂದಾಗಿ ಒಂದು ಮಹಡಿಯ ಇಡೀ ಕೋರ್ಟ್ ರೂಂಗಳನ್ನು ಲಾಕ್ ಮಾಡಲಾಗಿದೆ. ಹಿಂದೆ, ಜಡ್ಜ್'ಗಳಿದ್ದರೂ ಕೋರ್ಟ್ ರೂಮ್'ಗಳಿರದಿದ್ದ ಪರಿಸ್ಥಿತಿ ಇತ್ತು. ಈಗ ಕೋರ್ಟ್ ರೂಮ್'ಗಳಿದ್ದರೂ ಜಡ್ಜ್'ಗಳು ಇಲ್ಲದಿರುವ ಪರಿಸ್ಥಿತಿಗೆ ತಲುಪಿದ್ದೇವೆ. ನೀವು ಎಲ್ಲಾ ಕೋರ್ಟ್ ರೂಮ್'ಗಳನ್ನು ಮುಚ್ಚಿಬಿಟ್ಟು ನ್ಯಾಯವನ್ನೇ ಲಾಕ್ ಮಾಡಿಬಿಡಿ ಎಂದು ನ್ಯಾ| ಟಿಎಸ್ ಠಾಕೂರ್ ವ್ಯಗ್ರರಾಗಿ ನುಡಿದರು..

"ನ್ಯಾಯಾಧೀಶರ ನೇಮಕಕ್ಕೆ ಕೊಲಿಜಿಯಂ ಹೆಸರುಗಳನ್ನು ಸೂಚಿಸಿದ್ದರೂ ಕಳೆದ 9 ತಿಂಗಳಿನಿಂದ ಏನೂ ಆಗಿಲ್ಲ. ಆ ಹೆಸರುಗಳ ಪಟ್ಟಿಯನ್ನು ಸುಮ್ಮನೆ ಇಟ್ಟುಕೊಂಡು ಕೂತಿದ್ದೀರಿ. ಯಾವುದಕ್ಕೆ ಕಾಯುತ್ತಿದ್ದೀರಿ? ವ್ಯವಸ್ಥೆಯಲ್ಲಿ ಏನಾದರೂ ಬದಲಾವಣೆ ತರಲು ಕಾಯುತ್ತಿದ್ದೀರಾ? ವ್ಯವಸ್ಥೆಯಲ್ಲಿ ಕ್ರಾಂತಿ ಮಾಡಬೇಕೆಂದುಕೊಂಡಿದ್ದೀರಾ? ಎಂದು ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಅವರನ್ನು ಸುಪ್ರೀಂ ಪೀಠ ಪ್ರಶ್ನಿಸಿತು.