Asianet Suvarna News Asianet Suvarna News

ರಿವರ್ಸ್‌ ಆಪರೇಷನ್‌ ಮಾಡಿ: ಕಾಂಗ್ರೆಸ್‌ಗೆ ಬಿಎಸ್‌ವೈ ಸವಾಲು

ರಿವರ್ಸ್‌ ಆಪರೇಷನ್‌ ಮಾಡಿ: ಕಾಂಗ್ರೆಸ್‌ಗೆ ಬಿಎಸ್‌ವೈ ಸವಾಲು| ಬಿಜೆಪಿಯ ಎಷ್ಟುಶಾಸಕರು ಮೈತ್ರಿ ಪಕ್ಷಕ್ಕೆ ಹೋಗಿದ್ದಾರೆ: ಲೇವಡಿ| ಕುಮಾರಸ್ವಾಮಿ ವಿದೇಶದಿಂದ ಬರಲಿ, ಅಮೆರಿಕ ಬಹಳ ದೂರ ಇಲ್ಲ

You Can Do Reverse Operation Challenge From BS Yeddyurappa To Congress
Author
Bangalore, First Published Jul 3, 2019, 8:14 AM IST
  • Facebook
  • Twitter
  • Whatsapp

ಬೆಂಗಳೂರು[ಜು.03]: ರಿವರ್ಸ್‌ ಆಪರೇಷನ್‌ ಮಾಡುವುದಾದರೆ ಮಾಡಿಕೊಳ್ಳಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಆಡಳಿತಾರೂಢ ಪಕ್ಷಗಳಿಗೆ ಸವಾಲಿನ ಧಾಟಿಯಲ್ಲಿ ಹೇಳಿದ್ದಾರೆ. ಮಂಗಳವಾರ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಮತ್ತಿತರ ಕಾಂಗ್ರೆಸ್‌ ನಾಯಕರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದರು.

ಕಳೆದ ಮೂರು ತಿಂಗಳಿಂದಲೂ ಬಿಜೆಪಿ ಶಾಸಕರು ತಮ್ಮ ಪಕ್ಷಗಳಿಗೆ ವಲಸೆ ಬರುತ್ತಾರೆ ಎಂಬ ಮಾತನ್ನು ಮುಖ್ಯಮಂತ್ರಿ ಸೇರಿದಂತೆ ಸಮ್ಮಿಶ್ರ ಸರ್ಕಾರದ ಮಿತ್ರ ಪಕ್ಷಗಳ ನಾಯಕರು ಹೇಳುತ್ತಲೇ ಇದ್ದಾರೆ. ಆದರೆ, ಇದುವರೆಗೆ ಎಷ್ಟುಮಂದಿ ಬಿಜೆಪಿ ಶಾಸಕರು ಪಕ್ಷ ಬಿಟ್ಟು ಹೋಗಿದ್ದಾರೆ ಹೇಳಲಿ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್‌ ಒಂದು ಮುಳುಗುತ್ತಿರುವ ಹಡಗಿದ್ದಂತೆ. ಯಾರಾದರೂ ರಾತ್ರಿ ಕಂಡ ಬಾವಿಗೆ ಹಗಲು ಬೀಳುತ್ತಾರೆಯೇ? ನಮ್ಮ ಯಾವುದೇ ಶಾಸಕರೂ ಪಕ್ಷ ತೊರೆದು ಹೋಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಖಡಕ್ಕಾಗಿ ಹೇಳಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಯಡಿಯೂರಪ್ಪ, ಕಾಂಗ್ರೆಸ್‌ ಶಾಸಕರಿಬ್ಬರ ರಾಜಿನಾಮೆಗೂ ಮತ್ತು ನಮಗೂ ಯಾವುದೇ ಸಂಬಂಧವಿಲ್ಲ. ಪ್ರತಿಪಕ್ಷವಾಗಿ ನಾವು ಕೆಲಸ ಮಾಡುತ್ತಿದ್ದೇವೆ. ಮುಂದಿನ ವಾರಾಂತ್ಯದಲ್ಲಿ ಆರಂಭಗೊಳ್ಳುವ ವಿಧಾನಮಂಡಲದ ಉಭಯ ಸದನಗಳ ಅಧಿವೇಶನದಲ್ಲಿ ಸರ್ಕಾರದ ವೈಫಲ್ಯಗಳ ವಿರುದ್ಧ ಯಾವ ರೀತಿ ಹೋರಾಟ ಹಮ್ಮಿಕೊಳ್ಳಬೇಕು ಎಂಬುದರ ಕುರಿತು ನಮ್ಮ ಶಾಸಕರೊಂದಿಗೆ ಸಮಾಲೋಚನೆ ನಡೆಸುತ್ತೇನೆ ಎಂದರು.

ಮತ್ತೊಂದು ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮೊದಲು ಅಮೆರಿಕ ಪ್ರವಾಸದಿಂದ ವಾಪಸ್‌ ಬರಲಿ. ಅಮೆರಿಕವೇನು ಬಹಳ ದೂರವಿಲ್ಲ. ಅವರು ವಾಪಸ್‌ ಬಂದ ನಂತರ ಮುಂದಿನ ಬೆಳವಣಿಗೆಗಳ ಬಗ್ಗೆ ಕಾದು ನೋಡೋಣ ಎಂದು ಮಾರ್ಮಿಕವಾಗಿ ಹೇಳಿದರು.

Follow Us:
Download App:
  • android
  • ios