ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಿದೆ. ಕಾಂಗ್ರೆಸ್ ಹೆಚ್ಚು ಕಡೆ ಗೆಲುವು ಪಡೆದಿದ್ದು ಈ ಬಗ್ಗೆ ನಿಖರವಾದ ಕಾರಣವೇನು ಎನ್ನುವ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಪ್ರಶ್ನೆ ಮಾಡಿದ್ದಾರೆ. 

ಬೆಂಗಳೂರು :  ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಿರೀಕ್ಷಿತ ಮಟ್ಟದ ಫಲಿತಾಂಶ ಬರದೇ ಇದ್ದುದರ ಹಿನ್ನೆಲೆಯಲ್ಲಿ ಹಿನ್ನಡೆಗೆ ಕಾರಣವೇನು ಎಂಬುದರ ಬಗ್ಗೆ ನಿಖರವಾದ ಮಾಹಿತಿಯನ್ನು ಒಳಗೊಂಡ ವರದಿ ನೀಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ತಮ್ಮ ಪಕ್ಷದ ಹಾಲಿ ಶಾಸಕರು ಹಾಗೂ ಮಾಜಿ ಶಾಸಕರೂ ಸೇರಿದಂತೆ ಜಿಲ್ಲಾ ಮುಖಂಡರಿಗೆ ಸೂಚನೆ ನೀಡಿದ್ದಾರೆ.

ಒಟ್ಟು 105 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದಿದ್ದು, ಫಲಿತಾಂಶದ ಬಗ್ಗೆ ಸಮಾಧಾನವಿದ್ದರೂ ಇನ್ನಷ್ಟುಸ್ಥಾನ ಗಳಿಸಬಹುದಿತ್ತು ಎಂಬ ಅಭಿಪ್ರಾಯವನ್ನು ಯಡಿಯೂರಪ್ಪ ಸೇರಿದಂತೆ ಇತರ ಹಿರಿಯ ನಾಯಕರು ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪಕ್ಷದ ಹಿರಿಯ ನಾಯಕರೊಂದಿಗೆ ದೂರವಾಣಿ ಮೂಲಕ ಸಮಾಲೋಚನೆ ನಡೆಸಿದ ನಂತರ ಯಡಿಯೂರಪ್ಪ ಅವರು ವಿವರವಾದ ಮಾಹಿತಿ ನೀಡುವಂತೆ ನಿರ್ದೇಶನ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಸಾಮಾನ್ಯವಾಗಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಆಯಾ ಶಾಸಕರು ಅಥವಾ ಹಾಲಿ ಶಾಸಕರ ಪಾತ್ರವೇ ಪ್ರಮುಖವಾಗಿರುತ್ತದೆ. ಹಾವೇರಿ ಜಿಲ್ಲೆ, ವಿಜಯಪುರದ ಮುದ್ದೇಬಿಹಾಳ ಸೇರಿದಂತೆ ಹಲವೆಡೆ ಪಕ್ಷದ ಶಾಸಕರಿದ್ದರೂ ಬಿಜೆಪಿಗೆ ಹೆಚ್ಚಿನ ಸ್ಥಾನ ಗಳಿಸಲು ಸಾಧ್ಯವಾಗಿಲ್ಲ. ಆಂತರಿಕ ಭಿನ್ನಾಭಿಪ್ರಾಯವೂ ಇದಕ್ಕೆ ಪ್ರಮುಖ ಕಾರಣವಾಗಿದೆ. ಸ್ಥಳೀಯ ಶಾಸಕರು ಹಾಗೂ ಪಕ್ಷದ ಮುಖಂಡರ ನಡುವಿನ ತಿಕ್ಕಾಟದ ಪರಿಣಾಮ ಬಂಡಾಯ ನಿರ್ಮಾಣವಾದ ನಿದರ್ಶನಗಳೂ ಸಾಕಷ್ಟಿವೆ. ಆದರೆ, ಪಕ್ಷದ ಹಾಲಿ ಶಾಸಕರಿದ್ದರೂ ಹೆಚ್ಚಿನ ಸ್ಥಾನ ಗಳಿಸದೆ ಸೋಲು ಅನುಭವಿಸಿದ್ದರ ಬಗ್ಗೆ ಯಡಿಯೂರಪ್ಪ ಬೇಸರಗೊಂಡಿದ್ದಾರೆ ಎನ್ನಲಾಗಿದೆ.

ಮುಂಬರುವ ಲೋಕಸಭಾ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಆರಂಭಿಸಬೇಕಾಗಿದೆ. ಈ ಚುನಾವಣೆಯಲ್ಲಿನ ಪಕ್ಷದ ಲೋಪದೋಷಗಳು, ಆಂತರಿಕ ಭಿನ್ನಾಭಿಪ್ರಾಯಗಳನ್ನು ಈಗಲೇ ಸರಿಪಡಿಸಿಕೊಂಡಲ್ಲಿ ಲೋಕಸಭಾ ಚುನಾವಣೆಯನ್ನು ಸುಗಮವಾಗಿ ಎದುರಿಸಬಹುದು ಎಂಬ ನಿಲವಿಗೆ ಬಂದಿರುವ ಯಡಿಯೂರಪ್ಪ ಅವರು ನಗರ ಸ್ಥಳೀಯ ಸಂಸ್ಥೆಗಳ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಹಿನ್ನಡೆ ಕುರಿತು ಮಾಹಿತಿ ಕೋರಿದ್ದಾರೆ. ಈ ಎಲ್ಲ ಮಾಹಿತಿ ಬಂದ ನಂತರ ಪಕ್ಷದ ಕೋರ್‌ ಕಮಿಟಿ ಸಭೆ ನಡೆಸಿ ಚರ್ಚೆ ನಡೆಸಲು ಯಡಿಯೂರಪ್ಪ ಉದ್ದೇಶಿಸಿದ್ದಾರೆ. ಅಲ್ಲದೆ, ರಾಜ್ಯ ಪದಾಧಿಕಾರಿಗಳ ಅಥವಾ ಶಾಸಕಾಂಗ ಪಕ್ಷದ ಸಭೆಯನ್ನೂ ನಡೆಸುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಅಧಿಕಾರ ಹಿಡಿಯಲು ಬಿಜೆಪಿ ಯತ್ನ

ಅತಂತ್ರವಾಗಿರುವ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರ ಹಿಡಿಯಲು ಬೇಕಾದ ಸ್ಥಳೀಯ ಮಟ್ಟದ ಪ್ರಯತ್ನವನ್ನು ಗಂಭೀರವಾಗಿ ನಡೆಸುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಪಕ್ಷದ ಶಾಸಕರು ಹಾಗೂ ಸಂಸದರಿಗೆ ಸೂಚನೆ ನೀಡಿದ್ದಾರೆ.

ಒಟ್ಟು 105 ಸ್ಥಳೀಯ ಸಂಸ್ಥೆಗಳ ಪೈಕಿ 31ರಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟಬಹುಮತ ಬರದೆ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವೆಡೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಒಂದಾದರೆ ಅಧಿಕಾರ ಸುಲಭವಾಗಿ ಅವರ ಪಾಲಾಗುತ್ತದೆ. ಇನ್ನು ಕೆಲವು ಕಡೆ ಪಕ್ಷೇತರರ ಬೆಂಬಲ ಸಿಕ್ಕಲ್ಲಿ ಅಧಿಕಾರದ ಗದ್ದುಗೆ ಯಶಸ್ವಿಯಾಗಿ ಹಿಡಿಯಬಹುದಾಗಿದೆ.

ಹೀಗಾಗಿ, ಎಲ್ಲೆಲ್ಲಿ ಪಕ್ಷೇತರರನ್ನು ಸೆಳೆಯಲು ಸಾಧ್ಯವಾಗುತ್ತದೆಯೊ ಅಂಥಲ್ಲಿ ತೀವ್ರ ಪ್ರಯತ್ನ ನಡೆಸಬೇಕು. ಜೊತೆಗೆ ಸಾಧ್ಯವಾದರೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ನಲ್ಲಿನ ಅತೃಪ್ತರನ್ನು ಸೆಳೆಯುವುದಕ್ಕೂ ಹಿಂಜರಿಯಬೇಡಿ ಎಂಬ ಮಾತನ್ನು ಯಡಿಯೂರಪ್ಪ ಹೇಳಿದ್ದಾರೆ ಎನ್ನಲಾಗಿದೆ.

ಸೋಮವಾರ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ವಿವಿಧ ಜಿಲ್ಲೆಗಳ ಮುಖಂಡರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ ಯಡಿಯೂರಪ್ಪ ಅವರು, ಅತಂತ್ರ ನಿರ್ಮಾಣವಾಗಿರುವ ಸ್ಥಳೀಯ ಸಂಸ್ಥೆಗಳಲ್ಲಿ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾಗಿರುವ ಕಾಂಗ್ರೆಸ್‌ ಮತ್ತು ಜೆಡಿಎಸ್‌ಗಳಿಗೆ ಮಾತ್ರ ಅಧಿಕಾರ ಹಿಡಿಯಲು ಸಾಧ್ಯ ಎಂಬ ನಿರ್ಣಯಕ್ಕೆ ಬಂದು ಕೈಕಟ್ಟಿಕುಳಿತುಕೊಳ್ಳುವುದು ಬೇಡ. ಸಾಧ್ಯವಾದಷ್ಟುನಾವು ಅಧಿಕಾರ ಹಿಡಿಯಲು ಪ್ರಯತ್ನ ಮಾಡಬೇಕು ಎಂಬ ನಿರ್ದೇಶನ ನೀಡಿದರು ಎಂದು ತಿಳಿದು ಬಂದಿದೆ.