ಇನ್ನುಮುಂದೆ ಸಾಮೂಹಿಕ ವಿವಾಹದಲ್ಲಿ ಮದುವೆಯಾಗಲು ಬಯಸುವ ವಧು-ವರರು ತಮ್ಮ ದಾಖಲಾತಿಗಳನ್ನು ನೀಡುವ ಜತೆಗೆ ಸರ್ಕಾರಿ ಆಸ್ಪತ್ರೆಯಲ್ಲಿ ವಯಸ್ಸಿನ ದೃಢೀಕರಣಕ್ಕಾಗಿ ಎಕ್ಸ್‌-ರೇ ಪರೀಕ್ಷೆ ನಡೆಸಿ ವಯಸ್ಸಿನ ದೃಢೀಕರಣ ಪತ್ರವನ್ನೂ ಸಲ್ಲಿಸುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಬೆಂಗಳೂರು(ಜೂ.07): ಇನ್ನುಮುಂದೆ ಸಾಮೂಹಿಕ ವಿವಾಹದಲ್ಲಿ ಮದುವೆಯಾಗಲು ಬಯಸುವ ವಧು-ವರರು ತಮ್ಮ ದಾಖಲಾತಿಗಳನ್ನು ನೀಡುವ ಜತೆಗೆ ಸರ್ಕಾರಿ ಆಸ್ಪತ್ರೆಯಲ್ಲಿ ವಯಸ್ಸಿನ ದೃಢೀಕರಣಕ್ಕಾಗಿ ಎಕ್ಸ್‌-ರೇ ಪರೀಕ್ಷೆ ನಡೆಸಿ ವಯಸ್ಸಿನ ದೃಢೀಕರಣ ಪತ್ರವನ್ನೂ ಸಲ್ಲಿಸುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಸಾಮಾಜಿಕ ಪಿಡುಗಾದ ಬಾಲ್ಯ ವಿವಾಹವನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ನ್ಯಾಯಮೂರ್ತಿ ಶಿವರಾಜ್‌ ಪಾಟೀಲ್‌ ಅಧ್ಯಕ್ಷತೆಯಲ್ಲಿ ರಚಿಸಿದ್ದ ಸಮಿತಿಯ ಶಿಫಾರಸು ಆಧರಿಸಿ ಆರೋಗ್ಯ ಇಲಾಖೆ ಈ ಆದೇಶ ಹೊರಡಿಸಿದೆ.

ಸಾಮೂಹಿಕ ವಿವಾಹದ ವೇಳೆ ವಧು-ವರರು ಜನನ ಪ್ರಮಾಣಪತ್ರ ಇಲ್ಲವೇ ವಯಸ್ಸಿನ ದೃಢೀಕರಣ ಪತ್ರ ನೀಡುವುದು ಕಡ್ಡಾಯವಾಗಿದೆ. ಸಾಮೂಹಿಕ ವಿವಾಹ ಆಯೋಜಿಸುವವರಿಗೆ ಈ ದಾಖಲೆ ನೀಡಬೇಕಾಗುತ್ತದೆ. ಆಯೋಜಕರು ಅವುಗಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ನೀಡಿ ಸಾಮೂಹಿಕ ವಿವಾಹಕ್ಕೆ ಪೂರ್ವಾನುಮತಿ ಪಡೆಯುತ್ತಾರೆ. ನಂತರ ಮದುವೆ ನಡೆಸುತ್ತಾರೆ. ಜನನ ಪ್ರಮಾಣಪತ್ರ ಅಥವಾ ವಯಸ್ಸಿನ ಪ್ರಮಾಣಪತ್ರ ಇಲ್ಲದಿದ್ದಲ್ಲಿ ವೈದ್ಯಾಧಿಕಾರಿಗಳ ದೃಢೀಕರಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕಿತ್ತು. ಆದರೆ ಕೆಲವೆಡೆ ವೈದ್ಯಾಧಿಕಾರಿಗಳ ಪ್ರಮಾಣಪತ್ರ ನಕಲಿ ಇರುವುದು ಕಂಡುಬಂದಿದೆ. ಹೀಗಾಗಿ ಬಾಲ್ಯವಿವಾಹ ನಿಷೇಧ ಕಾಯ್ದೆ ನಿಯಮ 6 (2) ಅನ್ವಯ ನಮೂನೆ 2ರಲ್ಲಿ ಸರ್ಕಾರಿ ಜನರಲ್‌ ಆಸ್ಪತ್ರೆಯ ರೇಡಿಯಾಲಜಿ ವಿಭಾಗದಿಂದ ಎಕ್ಸ್‌-ರೇ ಪರೀಕ್ಷೆ ನಡೆಸಿ, ವೈದ್ಯರ ಪ್ರಮಾಣಪತ್ರ ಪಡೆಯುವುದನ್ನು ಇನ್ನು ಮುಂದೆ ಕಡ್ಡಾಯಗೊಳಿಸಲಾಗಿದೆ ಎಂದು ಆದೇಶ ತಿಳಿಸಿದೆ. ವಯಸ್ಸಿನ ದೃಢೀಕರಣ ಪತ್ರ ನೀಡುವಾಗ ಸರ್ಕಾರಿ ವೈದ್ಯರು ಇನ್ನು ಮುಂದೆ ಎಕ್ಸ್‌-ರೇ ನಡೆಸಿ, ಪ್ರಮಾಣಪತ್ರ ನೀಡುವಂತೆ ಸೂಚಿಸಲಾಗಿದೆ.

ವ್ಯಕ್ತಿಯ ಎಕ್ಸ್‌-ರೇ ನಡೆಸಿದಾಗ ಮೂಳೆಯ ಬೆಳವಣಿಗೆಯನ್ನು ಗಮನಿಸಿದರೆ ವಯಸ್ಸು ಎಷ್ಟಾಗಿದೆ ಎಂಬುದು ತಿಳಿಯುತ್ತದೆ.