ಬೆಂಗಳೂರು (ಮಾ. 10):  ಪ್ರೌಢಶಿಕ್ಷಣ ಮಂಡಳಿಯ (ಸಿಬಿಎಸ್‌ಇ) 10ನೇ ತರಗತಿಯ ಕನ್ನಡ ಪರೀಕ್ಷೆಯಲ್ಲಿ ಪಠ್ಯಕ್ರಮ ಹೊರತಾದ ಪ್ರಶ್ನೆ ಕೇಳುವ ಮೂಲಕ ಎಡವಟ್ಟು ಮಾಡಿದ್ದು, ಸುಮಾರು 23 ಅಂಕಗಳಿಗೆ ಹಳೆಯ ಪಠ್ಯಕ್ರಮದ ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.

ಸಿಬಿಎಸ್‌ಇ 10ನೇ ತರಗತಿಯು ಈಗಾಗಲೇ ಆರಂಭವಾಗಿದ್ದು, ಶನಿವಾರ ಕನ್ನಡ ಭಾಷೆ ಪರೀಕ್ಷೆ ನಡೆಯಿತು. ಎರಡು ವರ್ಷಗಳ ಹಿಂದೆ ಪಠ್ಯಕ್ರಮ ಬದಲಾಗಿದ್ದರೂ, ಹಳೆಯ ಪಠ್ಯಕ್ರಮದ ಪ್ರಶ್ನೆಗಳನ್ನು ಕೇಳಿದ ಪರಿಣಾಮ ವಿದ್ಯಾರ್ಥಿಗಳು ಉತ್ತರ ತಿಳಿಯದೆ ಪರದಾಡಿದ್ದಾರೆ.

2017-18ನೇ ಸಾಲಿನಲ್ಲಿ ಸಿಬಿಎಸ್‌ಇ ಹತ್ತನೇ ತರಗತಿಯ ಸಿರಿ ಕನ್ನಡ ಪುಸ್ತಕ ಪರಿಷ್ಕರಣೆ ಮಾಡಿ, ಕೆಲವು ಗದ್ಯ, ಪದ್ಯ ಹಾಗೂ ಪೂರಕ ಪಾಠಗಳನ್ನು ಬದಲಾವಣೆ ಮಾಡಲಾಗಿದೆ. ಪಠ್ಯ ಬದಲಾವಣೆಯಾಗಿ ಎರಡು ವರ್ಷ ಕಳೆದರೂ 2015-16ನೇ ಸಾಲಿನ ಪರಿಷ್ಕರಣೆಯಾಗದ ಪಠ್ಯಕ್ಕೆ ಸಂಬಂಧಿಸಿದ 23 ಅಂಕಗಳ ಪ್ರಶ್ನೆ ಕೇಳಲಾಗಿದೆ.

ವಿದ್ಯಾರ್ಥಿಗಳು ಮತ್ತು ಪಾಲಕರು ಸಿಬಿಎಸ್‌ಇ ಎಡವಟ್ಟಿಗೆ ಶಾಪ ಹಾಕಿದ್ದಾರೆ. ಪ್ರಶ್ನೆ ಪತ್ರಿಕೆ ರೂಪಿಸುವವರು ಕನ್ನಡದ ವಿದ್ವಾಂಸರೇ ಆಗಿರುತ್ತಾರೆ. ಅವರು ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಾವ ಪ್ರಶ್ನೆಗಳು ಔಟ್‌ ಆಫ್‌ ಸಿಲೆಬಸ್‌:

ಪ್ರಶ್ನೆ ಪತ್ರಿಕೆಯ ‘ಡಿ’ ವಿಭಾಗದ ಪ್ರಶ್ನೆ ನಂ.5ರಲ್ಲಿ ಬಹು ಆಯ್ಕೆಯ ಪ್ರಶ್ನೆಗಳಲ್ಲಿ ಉಪಪ್ರಶ್ನೆಗಳ ಸಂಖ್ಯೆ 1, 2, 3, 4, 8, 9, 10 ಒಂದು ಅಂಕದ ಏಳು ಪ್ರಶ್ನೆಗಳು, ಪ್ರಶ್ನೆ ಸಂಖ್ಯೆ 8ರಲ್ಲಿ ಉಪಪ್ರಶ್ನೆ ಸಂಖ್ಯೆಗಳಾದ 1, 2, 3, 4 ಮೂರು ಅಂಕದ ನಾಲ್ಕು ಪ್ರಶ್ನೆಗಳ 12 ಅಂಕಗಳು, 9ನೇ ಪ್ರಶ್ನೆಯ ಉಪಪ್ರಶ್ನೆಗಳ ಸಂಖ್ಯೆ 1, 2, 3, 4, 5 ಒಂದು ಅಂಕದ 5 ಪ್ರಶ್ನೆಗಳ 5 ಅಂಕಗಳು ಸೇರಿ 23 ಅಂಕಗಳ ಹಳೆಯ ಪಠ್ಯದ ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.