Asianet Suvarna News Asianet Suvarna News

ಸರ್ಕಾರದ ಭವಿಷ್ಯದ ಬಗ್ಗೆ ಹೊಸ ಬಾಂಬ್ ಸಿಡಿಸಿದ ಪ್ರಭಾವಿ ಮುಖಂಡ

ಪ್ರಭಾವಿ ಮುಖಂಡ ಇದೀಗ ಸರ್ಕಾರ ಭವಿಷ್ಯದ ಬಗ್ಗರ ಹೊಸ ಬಾಂಬ್ ಒಂದನ್ನು ಸಿಡಿಸಿದ್ದಾರೆ. ಜಾರಕಿಹೊಳಿ - ಲಕ್ಷ್ಮೀ ಹೆಬ್ಬಾಳ್ಕರ್ ಜಗಳ ಇದೀಗ ಸರ್ಕಾರದ ಬುಡವನ್ನೇ ಅಲುಗಾಡಿಸುವಷ್ಟರ ಮಟ್ಟಿಗೆ ತಾರಕಕ್ಕೆ ಏರಿದೆ. 

Worsening Jarkiholi Hebbalkar Fight Poses Threat To Coalition GOvt
Author
Bengaluru, First Published Sep 6, 2018, 7:31 AM IST

ಬೆಳಗಾವಿ/ಧಾರವಾಡ :  ಬೆಳಗಾವಿ ಜಿಲ್ಲಾ ರಾಜಕಾರಣದ ಮೇಲಿನ ನಿಯಂತ್ರಣದ ವಿಚಾರವಾಗಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ ಹಾಗೂ ಜಾರಕಿಹೊಳಿ ಸಹೋದರರ ನಡುವೆ ಶುರುವಾಗಿರುವ ತಿಕ್ಕಾಟ ಈಗ ರಾಜ್ಯ ಸರ್ಕಾರದ ಬುಡವನ್ನೇ ಅಲುಗಾಡಿಸುವಷ್ಟುಪರಾಕಾಷ್ಠೆಗೆ ತಲುಪಿದೆ. ಸೆ.7ರ ವರೆಗೆ ಕಾದು ನೋಡಿ ಆ ಬಳಿಕ ರಾಜ್ಯ ಸಮ್ಮಿಶ್ರ ಸರ್ಕಾರದ ಅಳಿವು, ಉಳಿವಿನ ಕುರಿತು ಹೇಳುತ್ತೇನೆ ಎಂದು ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್‌ನ ಪ್ರಭಾವಿ ಶಾಸಕರಾಗಿರುವ ಸತೀಶ್‌ ಜಾರಕಿಹೊಳಿ ಹೊಸ ಬಾಂಬ್‌ ಸಿಡಿಸಿದ್ದಾರೆ. ಈ ಮೂಲಕ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಉಳಿಯುತ್ತೋ, ಉರುಳುತ್ತೋ ಎನ್ನುವ ಕುತೂಹಲ ಇದೀಗ ಗರಿಗೆದರಿದೆ.

"

ಹೀಗೆ ಸಮ್ಮಿಶ್ರ ಸರ್ಕಾರದ ಅಸ್ವಿತ್ವವನ್ನೇ ಅಲುಗಾಡಿಸುವಷ್ಟರ ಮಟ್ಟಿಗಿನ ರಾಜಕೀಯ ಸಂಘರ್ಷ ಹುಟ್ಟು ಹಾಕಿದ್ದು ಬೆಳಗಾವಿಯ ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕ್‌(ಪಿಎಲ್‌ಡಿ)ನ ಚುನಾವಣೆ. ಈ ಬ್ಯಾಂಕ್‌ನ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ  ಆ.28ರಂದು ಚುನಾವಣೆ ನಡೆಯಬೇಕಿತ್ತು. ಆದರೆ, ಲಕ್ಷ್ಮೀ ಹೆಬ್ಬಾಳ್ಕರ್‌ ಬಣ ಮೇಲುಗೈ ಸಾಧಿಸುವ ಸ್ಪಷ್ಟಸೂಚನೆ ಇದ್ದ ಹಿನ್ನೆಲೆಯಲ್ಲಿ ಬ್ಯಾಂಕ್‌ನ ನಿರ್ದೇಶಕರೊಬ್ಬರು ಕಾಣೆಯಾಗಿದ್ದಾರೆ ಎಂಬ ಕಾರಣ ನೀಡಿ ರಾತ್ರೋರಾತ್ರಿ ಚುನಾವಣೆ ಮುಂದೂಡಲಾಗಿತ್ತು. ಜಾರಕಿಹೊಳಿ ಸಹೋದರರ ಅಣತಿಯಂತೆಯೇ ನಡೆದಿದೆ ಎನ್ನಲಾದ ಈ ಬೆಳವಣಿಗೆ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಲಕ್ಷ್ಮೇ ಹೆಬ್ಬಾಳ್ಕರ್‌ ಅವರು ಮರುದಿನ ಅಪಹರಿಸಲ್ಪಟ್ಟಿದ್ದಾರೆನ್ನಲಾದ ನಿರ್ದೇಶಕನನ್ನು ಪಕ್ಕದಲ್ಲೇ ಕೂರಿಸಿ ಸುದ್ದಿಗೋಷ್ಠಿಯನ್ನೂ ನಡೆಸಿದ್ದರು. ನಂತರ ಹೆಬ್ಬಾಳ್ಕರ್‌ ಬೆಂಬಲಿತ ನಿರ್ದೇಶಕರು ಹೈಕೋರ್ಟ್‌ನ ಧಾರವಾಡ ಪೀಠಕ್ಕೂ ಅರ್ಜಿ ಸಲ್ಲಿಸಿದ್ದರು. ಅದರಂತೆ ಹೈಕೋರ್ಟ್‌ ಪೀಠ ಬುಧವಾರ ಚುನಾವಣೆ ನಡೆಸುವಂತೆ ಆದೇಶಿಸಿದ್ದು, ಈಗ ಚುನಾವಣೆಗೆ ಸೆ.7ರ ದಿನ ನಿಗದಿಯಾಗಿದೆ.

ಸೆ.7ರ ನಂತರ ಹೇಳುವೆ:  ನ್ಯಾಯಾಲಯದಿಂದ ಆದೇಶ ಹೊರಬೀಳುತ್ತಿದ್ದಂತೆ ಶಾಸಕ ಸತೀಶ್‌ ಜಾರಕಿಹೊಳಿ ಅವರು ಹೆಬ್ಬಾಳ್ಕರ್‌ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಬೆಳಗಾವಿಯಲ್ಲಿ ಬುಧವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಪಿಎಲ್‌ಡಿ ಬ್ಯಾಂಕಿನ ಚುನಾವಣೆಯನ್ನು ನಾವು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದೇವೆ. ಇಂದಲ್ಲ, ನಾಳೆ ಚುನಾವಣೆ ನಡೆಯಲೇಬೇಕಿತ್ತು. ಚುನಾವಣೆ ನಡೆಸುವಂತೆ ನ್ಯಾಯಾಲಯ ಆದೇಶ ಹೊರಡಿಸಿದ ಮಾತ್ರಕ್ಕೆ ಲಕ್ಷ್ಮಿ ಹೆಬ್ಬಾಳ್ಕರ್‌ ಮೇಲುಗೈ ಸಾಧಿಸಿದ್ದಾರೆ ಎಂದರ್ಥವಲ್ಲ ಎಂದರು.

ಈ ವೇಳೆ ಪಿಎಲ್‌ಡಿ ಬ್ಯಾಂಕಿನ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ರಾಜ್ಯ ಸರ್ಕಾರದ ಮೇಲೆ ಪರಿಣಾಮ ಬೀರುತ್ತದೆಯೋ, ಇಲ್ಲವೋ ಎನ್ನುವ ಪತ್ರಕರ್ತರ ಪ್ರಶ್ನೆಗೆ, ಚುನಾವಣಾ ಪ್ರಕ್ರಿಯೆ ಮುಗಿದ ಬಳಿಕವಷ್ಟೇ ಸರ್ಕಾರ ಉಳಿಯುತ್ತದೆಯೋ, ಉರುಳುತ್ತದೆಯೋ ಎಂಬುದನ್ನು ಹೇಳುತ್ತೇನೆ. ಸೆ.7ರವರೆಗೂ ಕಾದು ನೋಡಿ ಎಂದಷ್ಟೇ ಪ್ರತಿಕ್ರಿಯಿಸಿದರು.

ಏನಿದು ವಿವಾದ?: ಬೆಳಗಾವಿ ರಾಜಕಾರಣದ ಮೇಲೆ ದಶಕಗಳಿಂದ ತಮ್ಮದೇ ಆದ ಪ್ರಭಾವ ಹೊಂದಿರುವ ಜಾರಕಿಹೊಳಿ ಕುಟುಂಬ ಪಿಎಲ್‌ಡಿ ಬ್ಯಾಂಕ್‌ ಅನ್ನೂ ಹಲವು ವರ್ಷಗಳಿಂದ ತಮ್ಮ ನಿಯಂತ್ರಣದಲ್ಲೇ ಇರುವಂತೆ ನೋಡಿಕೊಂಡಿದೆ. ಅದರಂತೆ ಬ್ಯಾಂಕ್‌ನ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ 20 ವರ್ಷಗಳಿಂದ ಅವಿರೋಧವಾಗಿ ಆಯ್ಕೆ ನಡೆಯುತ್ತಿದೆ. ಈ ಬಾರಿಯೂ ಬ್ಯಾಂಕ್‌ಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆಯಬೇಕು ಎಂದು ಸತೀಶ್‌ ಜಾರಕಿಹೊಳಿ ಬಯಸಿದ್ದರು. ಆದರೆ, ಬ್ಯಾಂಕ್‌ನ 12 ಮಂದಿ ನಿರ್ದೇಶಕರಲ್ಲಿ 9 ಮಂದಿ ನಿರ್ದೇಶಕರ ಮೇಲೆ ನಿಯಂತ್ರಣ ಹೊಂದಿದ್ದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ ಚುನಾವಣೆ ನಡೆಸುವಂತೆ ಪಟ್ಟು ಹಿಡಿದಿದ್ದರು.

ಚುನಾವಣೆ ನಡೆದರೆ ಹೆಬ್ಬಾಳ್ಕರ್‌ ಬೆಂಬಲಿಗರು ಗೆಲ್ಲುವುದು ಖಚಿತವಾಗಿತ್ತು. ಈ ಹಿನ್ನೆಲೆಯಲ್ಲಿ ಚುನಾವಣೆಯನ್ನು ಏಕಾಏಕಿ ನಿರ್ದೇಶಕರೊಬ್ಬರ ಅಪಹರಣವಾಗಿದೆ ಎಂಬ ಕಾರಣ ನೀಡಿ ಮುಂದೂಡಲಾಗಿತ್ತು. ಇದರ ವಿರುದ್ಧ ರಾತ್ರೋ ರಾತ್ರಿ ಪ್ರತಿಭಟನೆಯನ್ನೂ ನಡೆಸಿದ್ದ ಹೆಬ್ಬಾಳ್ಕರ್‌ ಅಪಹರಣವಾಗಿದೆ ಎನ್ನುವುದು ನಾಟಕ ಎಂದು ವಾದಿಸಿದ್ದರು. ಈ ನಡುವೆ, ಹೆಬ್ಬಾಳ್ಕರ್‌ ಬೆಂಬಲಿತ 9 ಮಂದಿ ನಿರ್ದೇಶಕರು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅದರಂತೆ ವಿಚಾರಣೆ ನಡೆಸಿದ ಧಾರವಾಡ ಹೈಕೋರ್ಟ್‌ ಪೀಠ ಬ್ಯಾಂಕ್‌ನ ಅಧ್ಯ​ಕ್ಷರ ಅವಧಿ ಮುಗಿ​ಯು​ವು​ದ​ರೊ​ಳಗೆ ಚುನಾ​ವಣೆ ನಡೆಸುವಂತೆ ಆದೇಶ ನೀಡಿದೆ. ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಸೆ.7ರಂದು ಚುನಾವಣೆ ನಡೆಸುವುದಾಗಿ ಘೋಷಿಸಿದ್ದಾರೆ.

ಹೈಕಮಾಂಡ್‌ಗೂ ತಲುಪಿದ ದೂರು: ಪಿಎಲ್‌ಡಿ ಬ್ಯಾಂಕ್‌ ತಿಕ್ಕಾಟ ಕಾಂಗ್ರೆಸ್‌ ಹೈಕಮಾಂಡ್‌ಗೂ ತಲೆನೋವಾಗಿದೆ. ಈ ಕುರಿತು ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ವೇಣುಗೋಪಾಲ್‌ ಅವರಿಗೂ ಲಕ್ಷ್ಮೀ ಹೆಬ್ಬಾಳ್ಕರ್‌ ದೂರು ಸಲ್ಲಿಸಿದ್ದರು. ಏತನ್ಮಧ್ಯೆ, ಜಾರಕಿಹೊಳಿ ಸಹೋದರರು ಲಕ್ಷ್ಮೀ ಹೆಬ್ಬಾಳ್ಕರ್‌ ಅವರನ್ನು ಕಾಂಗ್ರೆಸ್‌ನ ರಾಜ್ಯಮಹಿಳಾ ಘಟಕದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಿದ್ದಾರೆ ಎನ್ನುವ ಸುದ್ದಿಯೂ ಹರಿದಾಡಿತ್ತು.

ಸುಳ್ಳು ಸುದ್ದಿ-ರಮೇಶ: ಪಿಎಲ್‌ಡಿ ಬ್ಯಾಂಕ್‌ನ ಚುನಾವಣೆಗೆ ಸಂಬಂಧಿಸಿದ ಭಿನ್ನಮತ ಬಹಿರಂಗವಾದ ಬೆನ್ನಲ್ಲೇ ಸಚಿವ ರಮೇಶ್‌ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್‌ ನಡುವಿನ ಹಣಕಾಸು ವ್ಯವಹಾರದ ಬಗ್ಗೆಯೂ ಒಂದಷ್ಟುಸುದ್ದಿಗಳು ಬೆಳಕಿಗೆ ಬಂದಿದ್ದವು. ಆದರೆ, ಇದನ್ನು ರಮೇಶ್‌ ಜಾರಕಿಹೊಳಿ ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. ನಮ್ಮ ಹಾಗೂ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ ನಡುವೆ ಯಾವುದೇ ಹಣಕಾಸಿನ ವ್ಯವಹಾರ ಇಲ್ಲ. ಅದು ಸುಳ್ಳು ಸುದ್ದಿ ಎಂದು ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ.

ಬೆಳಗಾವಿಯ ಅಥಣಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಲಕ್ಷ್ಮಿ ಹೆಬ್ಬಾಳ್ಕರ್‌ ಅವರನ್ನು ರಾಜ್ಯಾಧ್ಯಕ್ಷೆ ಸ್ಥಾನದಿಂದ ಕೆಳಗಿಳಿಸುವ ಲಾಬಿ ಮಾಡಿಲ್ಲ. ಎಂದಿಗೂ ಅಂತಹ ಕೀಳುಮಟ್ಟದ ರಾಜಕಾರಣ ಮಾಡುವವರು ನಾವಲ್ಲ. ನಮ್ಮ, ಅವರ ನಡುವೆ ಯಾವುದೇ ಸಮರ ಇಲ್ಲ. ಅದು ಮುಗಿದುಹೋದ ಅಧ್ಯಾಯ ಎಂದು ಸ್ಪಷ್ಟನೆ ನೀಡಿದರು.

ಜತೆಗೆ, ಈಗಾಗಲೇ ಹೆಬ್ಬಾಳ್ಕರ್‌ ಅವರು ಸತೀಶ ಜಾರಕಿಹೊಳಿ ಮಾರ್ಗದರ್ಶದಲ್ಲಿ ಕೆಲಸ ಮಾಡುವ ಬಗ್ಗೆ ಹೇಳಿದ್ದಾರೆ. ಸಚಿವ ಡಿ.ಕೆ.ಶಿವಕುಮಾರ ಕೂಡ ಒಬ್ಬ ನಾಯಕರು. ಅವರು ಕೆಲವೊಂದು ಸಲಹೆಗಳನ್ನು ನೀಡಿರಬಹುದು. ಅಂದ ಮಾತ್ರಕ್ಕೆ ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದರು.

ಇದೇ ವೇಳೆ, ಜಾರಕಿಗೊಳಿ ಸಹೋದರರು ಬಿಜೆಪಿ ಸೇರುತ್ತಾರೆ. ಸರ್ಕಾರ ಉರುಳಿಸುತ್ತಾರೆ ಎನ್ನುವ ಸುದ್ದಿಯನ್ನು ತಳ್ಳಿಹಾಕಿದ ಸಚಿವ, ನಾವು ಕೆಳ ಹಂತದ ಕಾರ್ಯಕರ್ತರಾಗಿ ಕಾಂಗ್ರೆಸ್‌ ಪಕ್ಷ ಕಟ್ಟಿದ್ದೇವೆ. ಕಾಂಗ್ರೆಸ್‌ ಪಕ್ಷದಡಿ ಕೆಳಹಂತದಿಂದ ಮೇಲೆ ಬಂದಿದ್ದೇವೆ. ಬಿಜೆಪಿ ಸೇರುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟನೆ ನೀಡಿದರು.

ನಾಳೆ ಯಾಕೆ?

- ಜಾರಕಿಹೊಳಿ ಬ್ರದರ್ಸ್‌ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್‌ ನಡುವೆ ಪ್ರತಿಷ್ಠೆಯ ಸಮರವಾಗಿರುವ ಬೆಳಗಾವಿ ಪಿಎಲ್‌ಡಿ ಬ್ಯಾಂಕ್‌ ಚುನಾವಣೆ

- ಹೆಬ್ಬಾಳ್ಕರ್‌ ಬೆಂಬಲಿಗರು ಗೆಲ್ಲುವ ಸಾಧ್ಯತೆ ಇದ್ದ ವರದಿಗಳ ನಡುವೆಯೇ ಆ.28ರಂದು ನಡೆಯಬೇಕಿದ್ದ ಚುನಾವಣೆ ಮುಂದೂಡಿಕೆ

- ಬ್ಯಾಂಕ್‌ ನಿರ್ದೇಶಕರೊಬ್ಬರು ಕಿಡ್ನಾಪ್‌ ಆಗಿದ್ದಾರೆ ಎಂಬ ಕಾರಣಕ್ಕೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಮುಂದೂಡಿದ್ದ ಚುನಾವಣಾಧಿಕಾರಿ

- ಆ ಬಳಿಕ ಹೈಡ್ರಾಮಾ: ಕಿಡ್ನಾಪ್‌ ಸುಳ್ಳು ಎಂದು ಹೆಬ್ಬಾಳ್ಕರ್‌ ಬಂಡಾಯ, ತಕ್ಷಣ ಚುನಾವಣೆ ನಡೆಸುವಂತೆ ರಾತ್ರೋರಾತ್ರಿ ಧರಣಿ

- ಅಲ್ಲದೆ, ಹೆಬ್ಬಾಳ್ಕರ್‌ ಬಣದಿಂದ ರಾಜ್ಯ ಹೈಕೋರ್ಟ್‌ನ ಧಾರವಾಡ ಪೀಠಕ್ಕೆ ಅರ್ಜಿ. ಜಾರಕಿಹೊಳಿ-ಹೆಬ್ಬಾಳ್ಕರ್‌ ಸಂಘರ್ಷ ತಾರಕಕ್ಕೆ

- ಹೆಬ್ಬಾಳ್ಕರ್‌ಗೆ ಆಪ್ತರಾಗಿರುವ ಸಚಿವ ಡಿ.ಕೆ.ಶಿವಕುಮಾರ್‌ರಿಂದ ಬೆಳಗಾವಿಯಲ್ಲಿ ಹಸ್ತಕ್ಷೇಪವೆಂದು ಜಾರಕಿಹೊಳಿ ಸೋದರರು ಕೆಂಡ

- ಕಾಂಗ್ರೆಸ್‌ನಲ್ಲಿ ಸುಮಾರು 15 ದಿನಗಳ ಕಾಲ ಭಾರೀ ಸಂಚಲನ. ತೆರೆಮರೆಯಲ್ಲಿ ನಾಯಕರ ಹಸ್ತಕ್ಷೇಪದ ಬಳಿಕ ಮೆತ್ತಗಾದ ಲಕ್ಷ್ಮೇ

- ಈ ಮಧ್ಯೆ, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಬಗ್ಗೆ ಹೈಕೋರ್ಟ್‌ ತೀರ್ಪು ಪ್ರಕಟ. ಸೆ.7ಕ್ಕೆ ಚುನಾವಣೆ ನಿಗದಿ

- ಇದು ಹೆಬ್ಬಾಳ್ಕರ್‌ ಮೇಲುಗೈ ಎಂದೇ ವಿಶ್ಲೇಷಣೆ, ಜಾರಕಿಹೊಳಿಗಳಿಗೆ ಕೋಪ. ಸರ್ಕಾರದ ಅಳಿವು-ಉಳಿವಿನ ಬಗ್ಗೆ ಗಂಭೀರ ಹೇಳಿಕೆ

Follow Us:
Download App:
  • android
  • ios