Asianet Suvarna News Asianet Suvarna News

14 ತಿಂಗಳು ಕಾಂಗ್ರೆಸ್‌ ಗುಲಾಮನಾಗಿದ್ದೆ: ಮಾಜಿ ಸಿಎಂ ಕುಮಾರಸ್ವಾಮಿ!

14 ತಿಂಗಳು ಕಾಂಗ್ರೆಸ್‌ ಗುಲಾಮನಾಗಿದ್ದೆ: ಎಚ್‌ಡಿಕೆ| ಶಾಸಕರಿಗೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದೆ, ಆದರೂ ನಿಂದಿಸುತ್ತಿರುವುದು ಏಕೋ ಗೊತ್ತಿಲ್ಲ| ಕಾಂಗ್ರೆಸ್‌ ವರಿಷ್ಠರಿಗೆ ಮೈತ್ರಿ ಇಷ್ಟವಿತ್ತು, ಸ್ಥಳೀಯ ನಾಯಕರಿಗೆ ಬೇಡವಿತ್ತು: ಸುದ್ದಿಸಂಸ್ಥೆ ಜತೆ ಬೇಸರ

Worked Like A Slave For Congress For 14 Months Says Former Minister HD Kumaraswamy
Author
Bangalore, First Published Aug 7, 2019, 8:30 AM IST

ಬೆಂಗಳೂರು[ಆ.07]: ‘ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ 14 ತಿಂಗಳ ಅವಧಿಯಲ್ಲಿ ಕಾಂಗ್ರೆಸ್‌ ಪಕ್ಷ ಮತ್ತು ಶಾಸಕರ ಗುಲಾಮನಂತೆ ಕೆಲಸ ಮಾಡಿದ್ದೇನೆ. ಆದರೂ ಯಾವ ಕಾರಣಕ್ಕಾಗಿ ನನ್ನನ್ನು ನಿಂದಿಸಲಾಗುತ್ತಿದೆ ಎಂಬುದು ಗೊತ್ತಿಲ್ಲ.’

ಸಮ್ಮಿಶ್ರ ಸರ್ಕಾರ ಪತನಗೊಂಡ ಬಳಿಕ ಕಾಂಗ್ರೆಸ್‌ನೊಂದಿಗಿನ ಅಸಮಾಧಾನದ ಕುರಿತು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಮ್ಮ ಮನದಾಳದ ನೋವನ್ನು ಹೇಳಿಕೊಂಡ ಪರಿ ಇದು.

ನನ್ನ ಆಡಳಿತಾವಧಿಯಲ್ಲಿ ದೋಸ್ತಿ ಪಕ್ಷಗಳ ಶಾಸಕರಿಗೆ ಹಾಗೂ ನಿಗಮ-ಮಂಡಳಿಗಳ ಅಧ್ಯಕ್ಷರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿತ್ತು. ಆದರೂ ಅವರು ಯಾಕೆ ನನ್ನನ್ನು ನಿಂದಿಸುತ್ತಿದ್ದಾರೋ ಗೊತ್ತಿಲ್ಲ. ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಈ ಎಲ್ಲಾ ಶಾಸಕರು ಮತ್ತು ದೋಸ್ತಿ ಪಕ್ಷವಾದ ಕಾಂಗ್ರೆಸ್‌ನ ಗುಲಾಮನ ರೀತಿಯಲ್ಲಿ ಕೆಲಸ ಮಾಡಿದ್ದೇನೆ ಎಂದು ಖಾಸಗಿ ಸುದ್ದಿ ಸಂಸ್ಥೆಯೊಂದರ ಜತೆ ಮಾತನಾಡಿ ಬೇಸರ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ನಾಯಕರಿಗೆ ಮೈತ್ರಿಯಲ್ಲಿ ಆಸಕ್ತಿ ಇರಲಿಲ್ಲ. ರಾಜ್ಯದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾದ ಮೇಲೆ ಕಾಂಗ್ರೆಸ್‌ನ ಕೇಂದ್ರದ ವರಿಷ್ಠರು ಪೂರ್ಣ ಮನಸ್ಸಿನಿಂದ ಜೆಡಿಎಸ್‌ ಜತೆಗೆ ಕೈ ಜೋಡಿಸಲು ಮುಂದಾದರು. ಆದರೆ ನನಗಿರುವ ಮೂಲಗಳ ಪ್ರಕಾರ, ಕಾಂಗ್ರೆಸ್‌ನ ಕೆಲ ಸ್ಥಳೀಯ ನಾಯಕರಿಗೆ ಮೈತ್ರಿಯಲ್ಲಿ ಆಸಕ್ತಿ ಇರಲಿಲ್ಲ. ಮೈತ್ರಿ ಸರ್ಕಾರದ ಮೊದಲನೇ ದಿನದಿಂದ ಕಾಂಗ್ರೆಸ್‌ನ ಒಂದು ವರ್ಗದವರ ನಡವಳಿಕೆ ಮತ್ತು ಸಾರ್ವಜನಿಕವಾಗಿ ಅವರ ಪ್ರತಿಕ್ರಿಯೆ ಎಲ್ಲರಿಗೂ ಗೊತ್ತಿದೆ ಎಂದು ದೂರಿದರು.

ಜೆಡಿಎಸ್‌ ಶಾಸಕರ ಕ್ಷೇತ್ರಗಳಿಗಿಂತ ಕಾಂಗ್ರೆಸ್‌ ಶಾಸಕರ ಕ್ಷೇತ್ರಗಳಿಗೆ ಹೆಚ್ಚು ಅನುದಾನ ನೀಡಲಾಗಿದೆ. ಕಾಂಗ್ರೆಸ್‌ ಶಾಸಕರ ಕ್ಷೇತ್ರಗಳಿಗೆ 19 ಸಾವಿರ ಕೋಟಿ ರು. ಅನುದಾನ ನೀಡಲಾಗಿದೆ. ಎಷ್ಟೋ ಸಲ ಪೂರ್ವ ನಿಗದಿಯಾಗದೆ ಭೇಟಿಗೆ ಬಂದ ಶಾಸಕರನ್ನು ಭೇಟಿ ಮಾಡಿ ಸಮಸ್ಯೆಗಳನ್ನು ಆಲಿಸಿದ್ದೇನೆ. ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಏನೆಲ್ಲ ಬೇಡಿಕೆಗಳ ಪ್ರಸ್ತಾಪ ತಂದರೂ ಆ ಬಗ್ಗೆ ತಕ್ಷಣ ತೀರ್ಮಾನ ಕೈಗೊಂಡಿದ್ದೇನೆ. ಕಾಂಗ್ರೆಸ್‌ ಸರ್ಕಾರ ಸಾಧಿಸಲು ಸಾಧ್ಯವಾಗದ್ದನ್ನು ಕೇವಲ 14 ತಿಂಗಳಲ್ಲಿ ಸಾಧನೆ ಮಾಡಿದ್ದೇನೆ ಎಂದು ಹೇಳಿದರು.

ಮೈತ್ರಿ ಸರ್ಕಾರದ ಬಗ್ಗೆ ಜೆಡಿಎಸ್‌ ನಾಯಕರಲ್ಲಿಯೂ ಅಸಮಾಧಾನ ಇತ್ತು. ಆದರೂ ಕಾಂಗ್ರೆಸ್‌ ನೆರವಿನೊಂದಿಗೆ ಸರ್ಕಾರ ರಚನೆ ಮಾಡಲಾಯಿತು. ಈ ವ್ಯವಸ್ಥೆ ಬಗ್ಗೆ ಕಾಂಗ್ರೆಸ್‌ನಲ್ಲಿಯೂ ಸಂತಸ ಇರಲಿಲ್ಲ. ಕಾಂಗ್ರೆಸ್‌ ಹೇಗೆ ಹಿಂದಿನಿಂದ ದ್ರೋಹ ಮಾಡಬಹುದು ಎಂಬುದು ನಮ್ಮ ನಾಯಕರಿಗೆ ಗೊತ್ತಿತ್ತು ಎಂದು ಕುಮಾರಸ್ವಾಮಿ ಇದೇ ವೇಳೆ ತಿಳಿಸಿದರು.

14 ತಿಂಗಳ ಕಾಲ ರಾಜ್ಯದ ಅಭಿವೃದ್ಧಿ ಪರ ಕೆಲಸ ಮಾಡಿದ್ದೇವೆ. ಆದರೆ ನನ್ನ ಕೆಲಸವನ್ನು ಯಾರೂ ಗುರುತಿಸಲಿಲ್ಲ ಎಂಬ ಸಣ್ಣ ನೋವು ಮನದಲ್ಲಿ ಇದೆ. ಪಕ್ಷದ ಬಹುತೇಕರಿಗೆ ಕಾಂಗ್ರೆಸ್‌ ಜತೆಗಿನ ಮೈತ್ರಿಯಲ್ಲಿ ಆಸಕ್ತಿ ಇರಲಿಲ್ಲ. ಕಾಂಗ್ರೆಸ್‌ ಹೈಕಮಾಂಡ್‌ ಈಗಲೂ ನಮಗೆ ಬಹಳ ಸಹಕಾರಿಯಾಗಿದೆ. ಮುಂದೆ ಏನಾಗುತ್ತದೋ ನೋಡೋಣ ಎಂದರು.

Follow Us:
Download App:
  • android
  • ios