ಗೋವಾದಲ್ಲಿ ಆಳ್ವಿಕೆ ನಡೆಸುತ್ತಿರುವ ಬಿಜೆಪಿ ನೇತೃತ್ವದ ಮೈತ್ರಿ ಸರ್ಕಾರದಲ್ಲಿ ಬಿರುಕು ಕಾಣಿಸಿಕೊಳ್ಳಲು ಆರಂಭವಾಗಿದೆ. ಗೋವಾದಲ್ಲಿ ಗಣಿಗಾರಿಕೆ ಏನಾದರೂ ಆರಂಭವಾಗದೇ ಇದ್ದರೆ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವುದಿಲ್ಲ ಎಂದು ಗೋವಾ ಫಾರ್ವರ್ಡ್‌ ಪಾರ್ಟಿ (ಜಿಪಿಎಫ್‌) ಎಚ್ಚರಿಕೆ ನೀಡಿದೆ.

ಪಣಜಿ: ಗೋವಾದಲ್ಲಿ ಆಳ್ವಿಕೆ ನಡೆಸುತ್ತಿರುವ ಬಿಜೆಪಿ ನೇತೃತ್ವದ ಮೈತ್ರಿ ಸರ್ಕಾರದಲ್ಲಿ ಬಿರುಕು ಕಾಣಿಸಿಕೊಳ್ಳಲು ಆರಂಭವಾಗಿದೆ. ಗೋವಾದಲ್ಲಿ ಗಣಿಗಾರಿಕೆ ಏನಾದರೂ ಆರಂಭವಾಗದೇ ಇದ್ದರೆ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವುದಿಲ್ಲ. ಬಿಜೆಪಿ ತೊಂದರೆಗೆ ಸಿಲುಕಬೇಕಾಗುತ್ತದೆ ಎಂದು ಮನೋಹರ ಪರ್ರಿಕರ್‌ ಸಾರಥ್ಯದ ಸರ್ಕಾರದ ಅಳಿವು- ಉಳಿವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ಗೋವಾ ಫಾರ್ವರ್ಡ್‌ ಪಾರ್ಟಿ (ಜಿಪಿಎಫ್‌) ಎಚ್ಚರಿಕೆ ನೀಡಿದೆ.

ಗಣಿಗಾರಿಕೆ ಸ್ಥಗಿತದಿಂದಾಗಿ ಆ ಉದ್ದಿಮೆ ಮೇಲೆ ಅವಲಂಬಿತರಾಗಿರುವ ಜನರಿಗೆ ಹೊಡೆತ ಬಿದ್ದಿದೆ. ಹೀಗಾಗಿ ಸರ್ಕಾರ ಕೂಡಲೇ ಗಣಿ ಬಿಕ್ಕಟ್ಟಿಗೆ ಪರಿಹಾರ ಹುಡುಕಬೇಕು ಎಂದು ಪಕ್ಷದ ವಿಜಯ್‌ ಸರದೇಸಾಯಿ ಅವರು ತಿಳಿಸಿದ್ದಾರೆ.

88 ಕಂಪನಿಗಳ ಕಬ್ಬಿಣದ ಅದಿರು ಗಣಿಗಾರಿಕೆ ಲೈಸೆನ್ಸ್‌ ನವೀಕರಣವನ್ನು ಮಾ.16ರಂದು ಸುಪ್ರೀಂಕೋರ್ಟ್‌ ರದ್ದುಗೊಳಿಸಿತ್ತು. ಅಂದಿನಿಂದ ಗೋವಾದಲ್ಲಿ ಗಣಿಗಾರಿಕೆ ಸ್ತಬ್ಧವಾಗಿದೆ. 40 ಸದಸ್ಯ ಬಲದ ಗೋವಾ ವಿಧಾನಸಭೆಯಲ್ಲಿ ಬಹುಮತಕ್ಕೆ 21 ಸ್ಥಾನಗಳು ಬೇಕು. 13 ಸ್ಥಾನಗಳನ್ನು ಹೊಂದಿರುವ ಬಿಜೆಪಿಯು ಗೋವಾ ಫಾರ್ವರ್ಡ್‌ ಪಾರ್ಟಿಯಂತಹ ಪಕ್ಷಗಳನ್ನು ನೆಚ್ಚಿಕೊಂಡು ಆಡಳಿತ ನಡೆಸುತ್ತಿದೆ.