ಯುವತಿ ನೀಡಿರುವ ದೂರಿನ ಪ್ರಕಾರ ಸ್ವಾಮೀಜಿಯು ಆಕೆಯ ಮೇಲಷ್ಟೇ ಅಲ್ಲ, ಆಕೆಯ ತಾಯಿಯ ಮೇಲೂ ಲೈಂಗಿಕ ದೌರ್ಜನ್ಯ ಎಸಗಿಕೊಂಡು ಬಂದಿದ್ದ. ಯುವತಿಯ ತಂದೆಗೆ ಪಾರ್ಶ್ವವಾಯು ಹೊಡೆತವಾಗಿದ್ದನ್ನು ದುರುಪಯೋಗಿಸಿಕೊಂಡು ಸ್ವಾಮೀಜಿಯು ಅಮ್ಮ ಮತ್ತು ಮಗಳನ್ನು ನಿರಂತರವಾಗಿ ಲೈಂಗಿಕವಾಗಿ ಶೋಷಿಸಿಕೊಂಡು ಬಂದಿರುತ್ತಾನೆ.

ತಿರುವನಂತಪುರಂ(ಮೇ 20): ಕಾನೂನು ವಿದ್ಯಾರ್ಥಿನಿಯೊಬ್ಬಳು ತನ್ನ ಮೇಲೆ ಅತ್ಯಾಚಾರ ಎಸಗಲು ಬಂದ ಸ್ವಘೋಷಿತ ಸ್ವಾಮೀಜಿಯ ಮರ್ಮಾಂಗವನ್ನೇ ಕತ್ತರಿಸಿರುವ ಘಟನೆ ಕೇರಳದಲ್ಲಿ ಶುಕ್ರವಾರ ರಾತ್ರಿ ನಡೆದಿದೆ. 23 ವರ್ಷದ ಕಾನೂನು ವಿದ್ಯಾರ್ಥಿನಿ ಈ ಕೃತ್ಯ ಎಸಗಿರುವ ಯುವತಿ. ಕೊಲ್ಲಂ ಮೂಲದ ಪನ್ಮನ ಆಶ್ರಮಕ್ಕೆ ಸೇರಿದ 54 ವರ್ಷದ ಸ್ವಾಮಿ ಗಂಗೇಶಾನಂದ ಕಳೆದ 8 ವರ್ಷಗಳಿಂದ ತನ್ನ ಮೇಲೆ ಅತ್ಯಾಚಾರ ಎಸಗಿಕೊಂಡು ಬಂದಿದ್ದನೆಂದು ಯುವತಿ ಇದೇ ವೇಳೆ ದೂರಿದ್ದಾಳೆ.

ಈ ಯುವತಿ ನೀಡಿರುವ ದೂರಿನ ಪ್ರಕಾರ, ಆಕೆ 16 ವರ್ಷದವಳಿದ್ದಾಗ ಮೊದಲ ಬಾರಿಗೆ ಆ ಸ್ವಾಮೀಜಿ ರೇಪ್ ಮಾಡಿರುತ್ತಾನೆ. ಅದಾದ ಬಳಿಕ 8 ವರ್ಷಗಳ ಕಾಲ ಆಕೆಯ ಮನೆಗೇ ಹೋಗಿ ಈ ಸ್ವಾಮೀಜಿ ಅತ್ಯಾಚಾರ ಎಸಗುತ್ತಿದ್ದನಂತೆ. ನಿನ್ನೆ ರಾತ್ರಿ ಕೂಡ ಅದೇ ರೀತಿಯಲ್ಲಿ ಯುವತಿಯ ಮನೆಗೆ ಹೋಗಿ ಸ್ವಾಮೀಜಿ ರೇಪ್ ಮಾಡಲು ಯತ್ನಿಸುತ್ತಾನೆ. ಸ್ವಾಮಿಯ ಆಗಮನವನ್ನು ಮೊದಲೇ ತಿಳಿದಿದ್ದ ಯುವತಿಯು ಆತನಿಗೆ ಪಾಠ ಕಲಿಸಲು ನಿರ್ಧರಿಸಿರುತ್ತಾಳೆ. ಅದಕ್ಕಾಗಿ ಕತ್ತಿಯನ್ನು ಎತ್ತಿಟ್ಟುಕೊಂಡಿರುತ್ತಾಳೆ. ಮನೆಯಲ್ಲಿ ಸ್ವಾಮಿ ಅತ್ಯಾಚಾರ ಎಸಗಲು ಯತ್ನಿಸುವ ಸಂದರ್ಭದಲ್ಲಿ ಯುವತಿ ಚಾಕು ಬಳಸಿ ಸ್ವಾಮೀಜಿಯ ಮರ್ಮಾಂಗವನ್ನೇ ಕತ್ತರಿಸುತ್ತಾಳೆ.

ಬಳಿಕ ಸ್ವಾಮಿ ಗಂಗೇಶಾನಂದರನ್ನು ಆಸ್ಪತ್ರೆಗೆ ಸೇರಿಸಿ ಮರ್ಮಾಂಗಕ್ಕೆ ಶಸ್ತ್ರಚಿಕಿತ್ಸೆ ನೀಡಲು ಯತ್ನಿಸಲಾಗುತ್ತದೆ. ಶೇ.90 ಭಾಗ ಕತ್ತರಿಸಲ್ಪಟ್ಟಿದ್ದರಿಂದ ಮರ್ಮಾಂಗವನ್ನು ಕೂಡಿಸಲು ವೈದ್ಯರಿಗೆ ಸಾಧ್ಯವಾಗುವುದಿಲ್ಲ. ಆದರೆ, ಮೀಸೆ ಬಿದ್ದರೂ ಮಣ್ಣಾಗಲಿಲ್ಲ ಎಂಬಂತೆ ಸ್ವಾಮೀಜಿಯು ತಾನೇ ಕೈಯ್ಯಾರೆ ತನ್ನ ಮರ್ಮಾಂಗವನ್ನು ಕತ್ತರಿಸಿಕೊಂಡೆ ಎಂದು ಹೇಳಿಕೊಂಡಿರುವುದು ವರದಿಯಾಗಿದೆ.

ಇದೇ ವೇಳೆ, ಯುವತಿ ನೀಡಿರುವ ದೂರಿನ ಪ್ರಕಾರ ಸ್ವಾಮೀಜಿಯು ಆಕೆಯ ಮೇಲಷ್ಟೇ ಅಲ್ಲ, ಆಕೆಯ ತಾಯಿಯ ಮೇಲೂ ಲೈಂಗಿಕ ದೌರ್ಜನ್ಯ ಎಸಗಿಕೊಂಡು ಬಂದಿದ್ದ. ಯುವತಿಯ ತಂದೆಗೆ ಪಾರ್ಶ್ವವಾಯು ಹೊಡೆತವಾಗಿದ್ದನ್ನು ದುರುಪಯೋಗಿಸಿಕೊಂಡು ಸ್ವಾಮೀಜಿಯು ಅಮ್ಮ ಮತ್ತು ಮಗಳನ್ನು ನಿರಂತರವಾಗಿ ಲೈಂಗಿಕವಾಗಿ ಶೋಷಿಸಿಕೊಂಡು ಬಂದಿರುತ್ತಾನೆ.

ಪೊಲೀಸ್ ಠಾಣೆಯಲ್ಲಿ ಗಣೇಶಾನಂದನ ಮೇಲೆ ಐಪಿಸಿ ಸೆಕ್ಷನ್ 376 ಮತ್ತು ಪೋಕ್ಸೋ ಕಾಯ್ದೆಗಳಡಿ ಪ್ರಕರಣ ದಾಖಲಾಗಿದೆ.