ಬೆಂಗಳೂರು (ಸೆ. 28): ಕಾರ್ಯಕ್ರಮವೊಂದರಲ್ಲಿ ಮಹಿಳೆಯರು ‘ಮೋದಿ ಚೋರ್’(ಮೋದಿ ಕಳ್ಳ) ಎಂದು ಬರೆದಿರುವ ಫಲಕಗಳನ್ನು ಹಿಡಿದಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮೊದಲಿಗೆ ‘ಹೆಡ್ ಲೈನ್’ ಎಂಬ ಫೇಸ್‌ಬುಕ್ ಪೇಜ್ ಇದನ್ನು ಶೇರ್ ಮಾಡಿದೆ.

ಇದು 8.2 ಲಕ್ಷ ಫಾಲೋವರ್ಸ್‌ಗಳನ್ನು ಹೊಂದಿದೆ. ಬಳಿಕ ‘ಅಜಮ್‌ಗರ ಎಕ್ಸ್‌ಪ್ರೆಸ್’ ಎಂಬ ಫೇಸ್‌ಬುಕ್ ಪೇಜ್ ಕೂಡ ಶೇರ್ ಮಾಡಿದೆ. ಅನಂತರದಲ್ಲಿ ಈ ಫೋಟೋ 6500 ಬಾರಿ ಶೇರ್ ಆಗಿದೆ. ಅಲ್ಲದೆ ಟ್ವೀಟರ್‌ನಲ್ಲಿಯೂ ‘ರಾಹುಲ್ ಗಾಂಧಿ ಫ್ಯಾನ್’ ಎಂಬ ಹೆಸರಿನ ಖಾತೆಯು ಇದೇ ಫೋಟೋವನ್ನು ಶೇರ್ ಮಾಡಿದೆ. ಆದರೆ ನಿಜಕ್ಕೂ ಕಾರ್ಯಕ್ರಮವೊಂದರಲ್ಲಿ ಮಹಿಳೆಯರು ‘ಮೋದಿ ಚೋರ್’ ಎಂಬ ಫಲಕ ಹಿಡಿದು ಕುಳಿತಿದ್ದರೇ ಎಂದು ಪರಿಶೀಲಿಸಿದಾಗ ಇದೊಂದು ಸುಳ್ಳುಸುದ್ದಿ ಎಂಬುದು ಪತ್ತೆಯಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕೃತ ಟ್ವೀಟರ್ ಖಾತೆ ಇದೇ ಸೆ. 23 ರಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಚಿತ್ರದ ಮೂಲ ಚಿತ್ರವನ್ನು ಪೋಸ್ಟ್ ಮಾಡಿತ್ತು. ಈ ಫೋಟೋಗಳು ಜಾರ್ಖಂಡ್‌ನ ರಾಂಚಿಯಲ್ಲಿ ‘ಪ್ರಧಾನಮಂತ್ರಿ ಜನ್ ಆರೋಗ್ಯ ಯೋಜನಾ’ ಕಾರ್ಯಕ್ರಮ ಉದ್ಘಾಟನೆ ವೇಳೆ ತೆಗೆದ ಫೋಟೋವಾಗಿದೆ.

ಇದರ ಉದ್ಘಾಟನೆಗೆ ಪ್ರಧಾನಿ ಮೋದಿ ಕೂಡ ತೆರಳಿದ್ದರು. ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಹಿಳೆಯರು ಪ್ರಧಾನಂತ್ರಿ ಜನ ಆರೋಗ್ಯ ಯೋಜನೆಯ ಲೋಗೋ ಹೊಂದಿರುವ ಫಲಕಗಳನ್ನು ಹಿಡಿದು ಕುಳಿತಿದ್ದರು. ಅದೇ ಫೋಟೋವನ್ನು ಬಳಸಿಕೊಂಡು ‘ಮೋದಿ ಚೋರ್’ ಎಂದು ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. 

-ವೈರಲ್ ಚೆಕ್