ನವದೆಹಲಿ(ಜು.04): ಏರ್‌ ಇಂಡಿಯಾ ಸಿಬ್ಬಂದಿ ವಿರುದ್ಧ ಜನಾಂಗೀಯ ನಿಂದನೆ ಮಾಡಿದ್ದ ಐರಿಷ್ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮುಂಬೈನಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದ ಸಿಬ್ಬಂದಿಗೆ ಈ ಮಹಿಳೆ ಜನಾಂಗೀಯ ನಿಂದನೆ ಮಾಡಿದ್ದಳು ಎನ್ನಲಾಗಿದೆ.

ಹೆಚ್ಚಿನ ವೈನ್ ನೀಡದ ಕಾರಣ ಏರ್ ಇಂಡಿಯಾ ಸಿಬ್ಬಂದಿ ಮೇಲೆ ಹರಿಹಾಯ್ದಿದ್ದ ಸಿಮೋನ್ ಬರ್ನ್ಸ್, ಸಿಬ್ಬಂದಿ ವಿರುದ್ಧ ಕೀಳು ಪದ ಬಳಸಿದ್ದಲ್ಲದೇ ಮುಖಕ್ಕೆ ಉಗಿದಿದ್ದಳು.

ಈ ಕುರಿತು ಸಿಮೋನ್'ಗೆ ಸ್ಥಳೀಯ ನ್ಯಾಯಾಲಯ 6 ತಿಂಗಳ ಜೈಲುಶಿಕ್ಷೆ ಮತ್ತು 300 ಪೌಂಡ್ ದಂಡ ವಿಧಿಸಿತ್ತು. ಕಳೆದ ಎರಡು ವಾರಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಗೊಂಡಿದ್ದ ಸಿಮೋನ್, ಇಂಗ್ಲೆಂಡ್‌ನ ಈಸ್ಟ್ ಸಸೆಕ್ಸ್'ನಲ್ಲಿರುವ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಏರ್ ಇಂಡಿಯಾ ಬ್ಯುಸಿನೆಸ್ ಕ್ಲಾಸ್‌ನಲ್ಲಿ ಲಂಡನ್‌ಗೆ ಪ್ರಯಾಣಿಸಿದ್ದ ಸಿಮೋನ್ ಬರ್ನ್ಸ್, ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ವೈನ್ ಸೇವಿಸಿದ್ದಲ್ಲದೇ ಹೆಚ್ಚಿನ ವೈನ್‌ಗಾಘಿ ಬೇಡಿಕೆ ಇಟ್ಟಿದ್ದಳು. ಆದರೆ ವೈನ್ ಕೊಡಲು ನಿರಾಕರಿಸಿದ ಏರ್ ಇಂಡಿಯಾ ಸಿಬ್ಬಂದಿ ವಿರುದ್ಧ ಜನಾಂಗೀಯ ನಿಂದನೆ ಪದ ಬಳಸಿದ್ದಳು.