ಮುಂಬೈ[ಜ.01]: 9 ಬಾರಿ ಗರ್ಭಧರಿಸಿ 7 ಹೆಣ್ಣು ಹೆತ್ತಿದ್ದ ಈಕೆ ಮೇಲೆ 10ನೇ ಬಾರಿಯಾದರೂ ಗಂಡಾಗಲಿ ಎಂಬ ಒತ್ತಡವಿತ್ತು. ಅದಕ್ಕೆಂದೇ ಆಕೆ 10ನೇ ಬಾರಿ ಗರ್ಭಧರಿಸಿದಳು. ಆದರೆ ತಾನೊಂದು ಬಗೆದರೆ ದೈವವು ಬೇರೆಯದನ್ನೇ ಬಗೆದಿತ್ತು. ತೀವ್ರ ರಕ್ತಸ್ರಾವದಿಂದ ಈಕೆ ನವಜಾತ ಶಿಶುವಿನೊಂದಿಗೇ ಅಸುನೀಗಿದಳು!

ಹೌದು. ಈ ಹೃದಹವಿದ್ರಾವಕ ಘಟನೆ ಮಹಾರಾಷ್ಟ್ರದ ಬೀಡ್‌ ಜಿಲ್ಲೆಯ ಮಾಜಲಗಾಂವ್‌ ಪಟ್ಟಣದಲ್ಲಿ ನಡೆದಿದೆ.

ಮೀನಾ ಏಖಂಡೆ (38) ಎಂಬ ಈಕೆ ಮಾಜಲಗಾಂವ್‌ನಲ್ಲಿ ಪಾನ್‌ ಶಾಪ್‌ ನಡೆಸುತ್ತಿದ್ದಳು. ಈಗಾಗಲೇ 9 ಬಾರಿ ಗರ್ಭ ಧರಿಸಿದ್ದ ಈಕೆ 7 ಹೆಣ್ಣು ಮಕ್ಕಳನ್ನು ಹೆತ್ತಿದ್ದಳು. 2 ಬಾರಿ ಗರ್ಭಪಾತ ಮಾಡಿಸಿಕೊಂಡಿದ್ದಳು.

ಆದರೆ ಗಂಡುಮಗಉ ಹೆರಲೇಬೇಕು ಎಂದು ಕುಟುಂಬವು ಈಕೆಯ ಮೇಲೆ ಒತ್ತಡ ಹೇರುತ್ತಿತ್ತು. ಈ ಕಾರಣ 10ನೇ ಬಾರಿ ಗರ್ಭಿಣಿಯಾಗಿದ್ದಳು. ಶನಿವಾರ ಮಾಜಲಗಾಂವ್‌ನ ಆಸ್ಪತ್ರೆಗೆ ಈಕೆಯನ್ನು ದಾಖಲಿಸಿದಾಗ ಅವಧಿಪೂರ್ವ ಮಗುವಿಗೆ ಜನ್ಮ ನೀಡಿ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾಳೆ. ಇದು ಆಕಸ್ಮಿಕ ಸಾವು ಎಂದು ಪರಿಗಣಿಸಿರುವ ಪೊಲೀಸರು ಮೃತಳ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ.

ಇನ್ನೊಂದು ಬೇಸರದ ಸಂಗತಿಯೆಂದರೆ ಮೀನಾ ಹೆತ್ತಿದ್ದ 7 ಹೆಣ್ಣುಮಕ್ಕಳ ಪೈಕಿ ಈಗಾಗಲೇ ಒಬ್ಬಾಕೆ ಸಾವನ್ನಪ್ಪಿದ್ದಾಳೆ.