ತೊಟ್ಟಿಯಲ್ಲಿ ಎಸೆದ ಹಸುಳೆಗೆ ಎದೆ ಹಾಲುಣಿಸಿ ಮಾನವೀಯತೆ ಮೆರೆದ ಮಹಿಳಾ ಪೇದೆ
ಕರ್ತವ್ಯದಲ್ಲಿದ್ದ ಮಹಿಳಾ ಪೇದೆಯೊಬ್ಬರು ಕಸದ ತೊಟ್ಟಿಯಲ್ಲಿ ಸಿಕ್ಕ ನವಜಾತ ಶಿಶುವಿಗೆ ತಮ್ಮ ಎದೆ ಹಾಲುಣಿಸಿ, ಮಾನವೀಯ ಮೌಲ್ಯವನ್ನು ಎತ್ತಿ ಹಿಡಿದಿದ್ದಾರೆ. ದರ್ಪ ತೋರಿದ ಪೊಲೀಸರ ಮಧ್ಯೆ ಈ ಪೇದೆಯ ಕೆಲಸ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಬೆಂಗಳೂರು: ಮಾನವೀಯತೆ ಎಂಬ ಪದಕ್ಕೆ ಅರ್ಥವಿಲ್ಲದಂತಾಗಿರುವ ಈ ಕಾಲದಲ್ಲಿ, ಪೊಲೀಸರಂತೂ ದರ್ಪ ತೋರುವುದು ಆಗಾಗ ವರದಿಯಾಗುತ್ತಿರುತ್ತದೆ. ಇವೆಲ್ಲವಕ್ಕೂ ಅಪವಾದವೆಂಬಂತೆ ಮಹಿಳಾ ಪೇದೆಯೊಬ್ಬರು ಎಲ್ಲಿಯೋ ತೊಟ್ಟಿಯಲ್ಲಿ ಸಿಕ್ಕ ಮಗುವಿಗೆ ಎದೆ ಹಾಲುಣಿಸಿ ಮಾನವೀಯತೆ ಮೆರೆದಿದ್ದಾರೆ.
ನಗರದ ಎಲೆಕ್ರ್ಟಾನಿಕ್ ಸಿಟಿ ಠಾಣಾ ವ್ಯಾಪ್ತಿಯ ದೊಡ್ಡತಗೂರಿನಲ್ಲಿ ಕಸದ ತೊಟ್ಟಿಯಲ್ಲಿ ಯಾರೋ ಮಗುವನ್ನು ಎಸೆದು ಹೋಗಿದ್ದರು. ಪುಟ್ಟ ಕಂದನ ಆರ್ತನಾದ ಕೇಳಿಸಿಕೊಂಡ ಸ್ಥಳೀಯರು ಸುದ್ದಿಯನ್ನು ಪೊಲೀಸರಿಗೆ ಮುಟ್ಟಿಸಿದ್ದರು. ಸ್ಥಳಕ್ಕೆ ತೆರಳಿದ ಹೊಯ್ಸಳದಲ್ಲಿ ಪೇದೆ ಅರ್ಚನಾ ಕರ್ತವ್ಯದಲ್ಲಿದ್ದರು. ತಕ್ಷಣವೇ ಮಗುವಿಗೆ ಎದೆ ಹಾಲುಣಿಸಿದ ಅರ್ಚನಾ, ತಾಯ್ತನ ಮೌಲ್ಯ ಮೆರೆದರು. ಅರ್ಚನಾ ಗಂಡು ಮಗುವಿನ ತಾಯಿಯಾಗಿದ್ದು, ಇತ್ತೀಚೆಗಷ್ಟೆ ಹೆರಿಗೆ ರಜೆ ಮುಗಿಸಿ,ಕರ್ತವ್ಯಕ್ಕೆ ಮರಳಿದ್ದಾರೆ.
ನಂತರ ಶಿಶು ಮಂದಿರಕ್ಕೆ ಮಗುವನ್ನು ಹ್ಯಾಂಡ್ ಮಾಡಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.