ಜ್ಯೋತಿ ಅವರು ಕಲಬುರಗಿಯಿಂದ ಸೇಡಂಗೆ ತೆರಳುತ್ತಿದ್ದ ಬಸ್‌ನಲ್ಲಿ ಹೆರಿಗೆಗೆಂದು ಚಿಂಚೋಳಿ ತಾಲೂಕಿನ ತಾಂಡೂರಿಗೆ ತೆರಳುತ್ತಿದ್ದರು.
ಕಲಬುರಗಿ(ಸೆ.16): ಈಶಾನ್ಯ ಸಾರಿಗೆ ಸಂಸ್ಥೆಯ ಬಸ್ನಲ್ಲೆ ಗರ್ಭಿಣಿಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣದ ಬಳಿ ಶನಿವಾರ ನಡೆದಿದೆ.
ಜಿಲ್ಲೆಯ ಚಿಂಚೋಳಿ ತಾಲೂಕಿನ ಛತ್ತರ್ಸಾಲಾ ಗ್ರಾಮದ ಜ್ಯೋತಿ(26) ಎಂಬುವವರೇ ಬಸ್ನಲ್ಲೇ ಮಗುವಿಗೆ ಜನ್ಮ ನೀಡಿದ ಗರ್ಭಿಣಿ. ಜ್ಯೋತಿ ಅವರು ಕಲಬುರಗಿಯಿಂದ ಸೇಡಂಗೆ ತೆರಳುತ್ತಿದ್ದ ಬಸ್ನಲ್ಲಿ ಹೆರಿಗೆಗೆಂದು ಚಿಂಚೋಳಿ ತಾಲೂಕಿನ ತಾಂಡೂರಿಗೆ ತೆರಳುತ್ತಿದ್ದರು. ಬಸ್ ಸೇಡಂ ಸಮೀಪದಲ್ಲಿರುವಾಗಲೇ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡು ಬಸ್ನಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ.
ಹೆರಿಗೆಗೆ ಬಸ್ನಲ್ಲಿದ್ದ ಮಹಿಳಾ ಪ್ರಯಾಣಿಕರು ಸಹಾಯ ಮಾಡಿದ್ದಾರೆ. ಈ ವೇಳೆ ಸಮಯಪ್ರಜ್ಞೆ ಮೆರೆದ ಬಸ್ ಚಾಲಕ ಶಿವಾಜಿ ಹಾಗೂ ನಿರ್ವಾಹಕ ಪ್ರಶಾಂತ್ ಅವರು ಬಸ್ ಅನ್ನು ತಕ್ಷಣ ಸೇಡಂ ಸರ್ಕಾರಿ ಆಸ್ಪತ್ರೆ ಕೊಂಡೊಯ್ದು ಜ್ಯೋತಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇವರ ಸಮಯಪ್ರಜ್ಞೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಸದ್ಯ ತಾಯಿ, ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.
