ಭೋಪಾಲ್[ಜೂ.23]: ಜನರಿಗೆ ಅದರಲ್ಲೂ ಭಾರತೀಯರಿಗೆ ದೇವರ ಮೇಲೆ ವಿಶೇಷ ನಂಬಿಕೆ ಇದೆ. ಹೀಗಾಗೇ ಹಲವರು ತಮ್ಮ ಬೇಡಿಕೆ ಈಡೇರಿಸಿಕೊಳ್ಳಲು ಹರಕೆ ಹೊತ್ತುಕೊಳ್ಳುತ್ತಾರೆ. ತಾವು ಬೇಡಿಕೊಂದನ್ನು ಪಡೆದ ಬಳಿಕ  ಧಾರ್ಮಿಕ ಕಾರ್ಯಕ್ರಮಗಳ ಅನುಷ್ಠಾನ, ಬಡವರಿಗೆ ಆಹಾರ ವಿತರಣೆ, ದೇವರಿಗೆ ಪ್ರಸಾದ, ಬರಿಗಾಲಿನಲ್ಲಿ ಮನೆಯಿಂದ ದೇವಸ್ಥಾನಕ್ಕೆ ತೆರಳುವುದು ಹೀಗೆ ನಾನಾ ರೀತಿಯಲ್ಲಿ ಹರಕೆ ಈಡೇರಿಸುತ್ತಾರೆ. ಇನ್ನು ಕೆಲವರು ಹರಕೆ ಈಡೇರಿಸಲು ಜೀವವನ್ನೇ ಪಣಕ್ಕಿಡಬೇಕಾದ ಪರಿಸ್ಥಿತಿಯೂ ಬಂದೊದಗುತ್ತದೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೋ ಕೂಡಾ ಇದ್ಕಕೆ ಸಾಕ್ಷಿ ಎಂಬಂತಿದೆ.

ವೈರಲ್ ಆದ ಈ ವಿಡಿಯೋ ಮಧ್ಯ ಪ್ರದೇಶದ ನರ್ಮದಾ ನದಿ ತಟದಲ್ಲಿರುವ ಅಮರಕಂಟಕದ ಒಂದು ದೇವಸ್ಥಾನದ್ದು ಎನ್ನಲಾಗಿದೆ. ವಿಡಿಯೋದಲ್ಲಿ ಓರ್ವ ಮಹಿಳೆ ದೇವಸ್ಥಾನದಲ್ಲಿ ಹರಕೆ ಈಡೇರಿಸಲು ಆನೆಯ ಮೂರ್ತಿಯೊಂದರ ಕೆಳ ಭಾಗದಿಂದ ಹಾದು ಹೋಗಬೇಕಿತ್ತು. ಇದರಂತೆ ಆನೆ ಮೂರ್ತಿ ಕೆಳಭಾಗದಿಂದ ನುಸುಳಲಾರಂಭಿಸಿದ್ದಾರೆ. ಆರಂಭದಲ್ಲಿ ಎಲ್ಲವೂ ಸರಿಯಾಗಿದೆ, ಸುಲಭವಾಗಿ ಹೋಗಬಹುದು ಎಂದು ಭಾವಿಸಿದ್ದಾರೆ. 

ಆದರೆ ಕೆಲ ಕ್ಷಣಗಳಲ್ಲೇ ಿದು ತಾನಂದುಕೊಂಡಷ್ಟು ಸುಲಭವಿಲ್ಲ ಎಂದು ಮಹಿಳೆಗೆ ತಿಳಿದಿದೆ. ಆದರೆ ಅಷ್ಟರಲ್ಲಾಗಲೇ ಆಕೆ ಆ ಮೂರ್ತಿಯ ನಡುವೆ ಸಿಲುಕಿಕೊಂಡಿದ್ದಳು. ಅತ್ತ ಮುಂದೆ ಹೋಗಲು ಆಗದೆ, ಇತ್ತ ಹಿಂದೆ ಬರಲಾಗದೆ ಒದ್ದಾಡಲಾರಂಭಿಸಿದ್ದಾಳೆ. ಮಹಿಳೆಯ ಒದ್ದಾಟ ಗಮನಿಸಿದ ಸಾರ್ವಜನಿಕರು ಆಕೆಯ ಸಹಾಯಕ್ಕೆ ಧಾವಿದ್ದಾರೆ. ಕೆಲವರು ಹಿಂಬದಿಯಿಂದ ದೂಡಿದರೆ, ಮತ್ತೆ ಕೆಲವರು ಮುಂದಿನ ಬದಿಯಲ್ಲಿ ನಿಂತು ಆಕೆಯ ಕೈಗಳನ್ನು ಹಿಡಿದು ಹೊರಗೆ ಎಳೆಯಲು ಯತ್ನಿಸಿದ್ದಾರೆ. 

ಕೊನೆಗೂ ಈ ಎಲ್ಲಾ ಪ್ರಯತ್ನದ ಫಲ ಎಂಬಂತೆ ಮೂರ್ತಿಯ ನಡುವೆ ಸಿಲುಕಿದ್ದ ಮಹಿಳೆಯನ್ನು ಹೊರಗೆಳೆಯಲು ಅಲ್ಲಿದ್ದ ಜನರು ಯಶಸ್ವಿಯಾಗಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.