ಅಂತರ್ ಧರ್ಮೀಯ ವಿವಾಹವಾದಲ್ಲಿ, ಮಹಿಳೆಯ ಧಾರ್ಮಿಕ ಸ್ಥಾನಮಾನ ಪತಿಯ ಧರ್ಮದೊಂದಿಗೆ ವಿಲೀನವಾಗುತ್ತದೆ ಎಂಬ ಪರಿಕಲ್ಪನೆಗೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನವದೆಹಲಿ(ಡಿ.9): ಅಂತರ್ ಧರ್ಮೀಯ ವಿವಾಹವಾದಲ್ಲಿ, ಮಹಿಳೆಯ ಧಾರ್ಮಿಕ ಸ್ಥಾನಮಾನ ಪತಿಯ ಧರ್ಮದೊಂದಿಗೆ ವಿಲೀನವಾಗುತ್ತದೆ ಎಂಬ ಪರಿಕಲ್ಪನೆಗೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಭಿನ್ನ ಧರ್ಮದ ವ್ಯಕ್ತಿಯನ್ನು ವಿವಾಹವಾಗಿದ್ದ ಪಾರ್ಸಿ ಮಹಿಳೆ ತಮ್ಮ ಧಾರ್ಮಿಕ ಅಸ್ಮಿತೆ ಕಳೆದುಕೊಳ್ಳುತ್ತಾಳೆಯೇ? ಎಂಬ ಕಾನೂನು ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಸಿಜೆಐ ದೀಪಕ್ ಮಿಶ್ರಾ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ ರಚನೆಯಾಗಿತ್ತು.
ತಮ್ಮ ಹೆತ್ತವರ ಅಂತ್ಯ ಸಂಸ್ಕಾರಕ್ಕೆ ಅವಕಾಶ ನೀಡದ್ದನ್ನು ಪ್ರಶ್ನಿಸಿ, ಹಿಂದೂ ವ್ಯಕ್ತಿಯನ್ನು ವಿವಾಹವಾಗಿದ್ದ ಪಾರ್ಸಿ ಮಹಿಳೆ ಗೂಲ್ರೊಖ್ ಎಂ. ಗುಪ್ತಾ ಕೋರ್ಟ್ ಮೆಟ್ಟಿಲೇರಿದ್ದರು.
`ಇನ್ನೊಂದು ಧರ್ಮದ ವ್ಯಕ್ತಿಯನ್ನು ವಿವಾಹವಾದರೆ, ಮಹಿಳೆ ತನ್ನ ಧಾರ್ಮಿಕ ಅಸ್ಮಿತೆ ಕಳೆದುಕೊಳ್ಳುತ್ತಾಳೆ ಎಂಬ ಯಾವುದೇ ಕಾನೂನಿಲ್ಲ. ಅದಕ್ಕೂ ಮಿಗಿಲಾಗಿ, ವಿಶೇಷ ವಿವಾಹ ಕಾಯ್ದೆಯಿದ್ದು, ಇಬ್ಬರು ಭಿನ್ನ ಧರ್ಮೀಯರು ವಿವಾಹವಾಗಲು ಮತ್ತು ತಮ್ಮ ಮೂಲ ಧಾರ್ಮಿಕ ಅಸ್ಮಿತೆಗಳನ್ನು ಉಳಿಸಿಕೊಳ್ಳುವ ಅವಕಾಶವಿದೆ' ಎಂದಿದೆ ಪೀಠ.
