ಬೆಂಗಳೂರು :  ಹನಿಟ್ರ್ಯಾಪ್‌ ಮಾಡಿ ಉದ್ಯಮಿಯೊಬ್ಬರ ಬಳಿ ಸುಮಾರು .11.62 ಲಕ್ಷ ಕಸಿದಿದ್ದ ಯುವತಿಯನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ.

ನಾಗರಬಾವಿ ನಿವಾಸಿ ವಿನುತಾಗೌಡ (29) ಬಂಧಿತ ಮಹಿಳೆ. ಆಕೆಯ ಪ್ರಿಯಕರ ಸೀನು ಎಂಬಾತ ಪರಾರಿಯಾಗಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ಹೇಳಿದರು.

ಪಾಪರೆಡ್ಡಿಪಾಳ್ಯ ನಿವಾಸಿ ಲಿಂಗರಾಜು (49) (ಹೆಸರು ಬದಲಾಯಿಸಲಾಗಿದೆ) ರಿಯಲ್‌ ಎಸ್ಟೇಟ್‌ ಉದ್ಯಮಿಯಾಗಿದ್ದಾರೆ. ಕೆಲ ತಿಂಗಳ ಹಿಂದೆ ಮಂಜುಳಾ ಎಂಬುವರ ಮೂಲಕ ಆರೋಪಿ ವಿನುತಾ ಉದ್ಯಮಿಗೆ ಪರಿಚಯವಾಗಿದ್ದಳು. ಈ ವೇಳೆ ವಿನುತಾ ಉದ್ಯಮಿಯ ಮೊಬೈಲ್‌ ಸಂಖ್ಯೆ ಪಡೆದುಕೊಂಡಿದ್ದಳು. ಅವರ ಜತೆ ಮೊಬೈಲ್‌ನಲ್ಲಿ ಸಂಭಾಷಣೆ ನಡೆಸುತ್ತಿದ್ದ ಮಹಿಳೆ, ರಾಮನಗರದಲ್ಲಿ ನಮಗೆ ಸೇರಿದ ಜಮೀನು ಇದ್ದು, ಅದನ್ನು ಮಾರಾಟ ಮಾಡಿಸಬೇಕೆಂದು ಉದ್ಯಮಿಗೆ ಹೇಳಿದ್ದಳು.

ಅ.28ರಂದು ಉದ್ಯಮಿಯನ್ನು ರಾಮನಗರಕ್ಕೆ ಕರೆದೊಯ್ದು ಮಹಿಳೆ ಜಮೀನು ತೋರಿಸಿದ್ದರು. ಬಳಿಕ ಅಲ್ಲಿಂದ ನೇರವಾಗಿ ಮಹಿಳೆ ಉದ್ಯಮಿಯನ್ನು ನಾಗರಬಾವಿಯಲ್ಲಿರುವ ತನ್ನ ಮನೆಗೆ ಕರೆದುಕೊಂಡು ಹೋಗಿ ನಿಮ್ಮನ್ನು ಇಷ್ಟಪಟ್ಟಿರುವುದಾಗಿ ಉದ್ಯಮಿಗೆ ಹೇಳಿದ್ದಳು. ನಂತರ ಇಬ್ಬರು ಪರಸ್ಪರ ಒಪ್ಪಿಗೆ ಮೇರೆಗೆ ಖಾಸಗಿ ಕ್ಷಣಗಳನ್ನು ಕಳೆದಿದ್ದರು.

ನಂತರ ಶಾಲಾ ಶುಲ್ಕ ಕಟ್ಟ, ಸಾಲ ತೀರಿಸಬೇಕು, ಮಣಪ್ಪುರಂನಲ್ಲಿ ಇಡಲಾಗಿರುವ ಚಿನ್ನ ಬಿಡಿಸಬೇಕೆಂದು ಹೇಳಿ ಮಹಿಳೆ ಉದ್ಯಮಿಗೆ ಹಂತ-ಹಂತವಾಗಿ ಹಣ ಕೇಳು ಶುರು ಮಾಡಿದ್ದಳು. ಇತ್ತ ಉದ್ಯಮಿ ಮಹಿಳೆ ಮೇಲಿನ ಮೋಹ ಹಾಗೂ ರಾಮನಗರದಲ್ಲಿ ಜಮೀನನ್ನು ಆಕೆ ತನ್ನ ಹೆಸರಿಗೆ ಕ್ರಯ ಮಾಡಿಕೊಡುತ್ತಾಳೆ ಎಂಬ ಕಾರಣಕ್ಕೆ ಆಕೆ ಕೇಳಿದಂತೆ ಹಣ ಕೊಟ್ಟಿದ್ದರು. ಮಹಿಳೆ ಹಣಕ್ಕೆ ಬೇಡಿಕೆ ಹೆಚ್ಚಾಗುತ್ತಿದ್ದಂತೆ ತಾನು ನೀಡಿರುವ ಹಣವನ್ನೆಲ್ಲಾ ವಾಪಸ್‌ ನೀಡು ಎಂದು ಹೇಳಿದ್ದರು.

ಉದ್ಯಮಿ ಜತೆ ಇದ್ದ ಖಾಸಗಿ ಕ್ಷಣಗಳನ್ನು ರಹಸ್ಯ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದ ಮಹಿಳೆ, ‘ನಾನು ಕೇಳಿದಾಗಲೆಲ್ಲಾ ಹಣ ಕೊಡದಿದ್ದರೆ ನಿನ್ನ ಕುಟುಂಬಕ್ಕೆ ನಮ್ಮಿಬ್ಬರ ವಿಡಿಯೋ ತೋರಿಸಿ ನಿನ್ನ ಜೀವನ ಹಾಳು ಮಾಡುತ್ತೇನೆ’ ಎಂದು ಬೆದರಿಕೆ ಹಾಕಿದ್ದಳು. ಹೀಗೆ ಮಹಿಳೆ ಉದ್ಯಮಿ ಬಳಿ ಒಟ್ಟು .11.62 ಲಕ್ಷ ಕಸಿದುಕೊಂಡಿದ್ದಾಳೆ.

ವ್ಯಕ್ತಿಯಿಂದಲೂ ಬೆದರಿಕೆ

ಡಿ.12ರಂದು ವಿನುತಾ ಹೆಸರು ಹೇಳಿಕೊಂಡು ಉದ್ಯಮಿಗೆ ಸೀನು ಎಂಬಾತ ಕರೆ ಮಾಡಿ, ವಿನುತಾ ಅವರಿಗೆ ಕೇಳಿದಾಗ ಹಣ ನೀಡದಿದ್ದರೆ ನಿಮ್ಮ ಮನೆಗೆ ಬಂದು ನಿಮ್ಮ ಪತ್ನಿಗೆ ವಿಷಯ ತಿಳಿಸುವುದಾಗಿ ಬೆದರಿಸಿದ್ದ. ಇದರಿಂದ ಬೇಸತ್ತ ಉದ್ಯಮಿ ಲಿಂಗರಾಜು ಅನ್ನಪೂರ್ಣೇಶ್ವರಿ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಆರೋಪಿ ಮಹಿಳೆಯನ್ನು ಬಂಧಿಸಿದ್ದಾರೆ.

ವಿನುತಾಗೆ ಪರಿಚಯವಿರುವ ಸೀನು ಎಂಬಾತ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಕ್ರಮಕೈಗೊಳ್ಳಲಾಗಿದೆ. ಪ್ರಿಯಕರನೊಂದಿಗೆ ಸೇರಿ ಮಹಿಳೆ ಕೃತ್ಯ ಎಸಗಿರುವ ಶಂಕೆ ಇದೆ, ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.