Asianet Suvarna News Asianet Suvarna News

ಮಾನವರ ಮುಂದಿನ ವಾಸಸ್ಥಾನ ಮಂಗಳದ ಬದಲು ವುಲ್ಫ್ 1016ಸಿ ಎಂಬ ಗ್ರಹವೇ?

ಮುಂದಿನ ದಿನಗಳಲ್ಲಿ ಈ ಗ್ರಹದ ಮೇಲೆ ಹೆಚ್ಚೆಚ್ಚು ಸಂಶೋಧನೆಗಳಾದರೆ ಇನ್ನಷ್ಟು ಆಳವಾಗಿ ಅಭ್ಯಸಿಸಬಹುದು ಎಂದು ವಿಜ್ಞಾನಿ ಸ್ಟೀಫನ್ ಕೇನ್ ಹೇಳುತ್ತಾರೆ.

wolf 1016c may become home to humans in future

ವಾಷಿಂಗ್ಟನ್(ಜ. 23): ಅನ್ಯಗ್ರಹ ಜೀವಿಗಳ ಶೋಧಕ್ಕಿಂತ ಹೆಚ್ಚಾಗಿ ಮಾನವರು ಈಗ ಜೀವಿಸಲು ಸಾಧ್ಯವಿರುವ ಅನ್ಯ ಗ್ರಹಗಳ ಹುಡುಕಾಟಕ್ಕೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಮಂಗಳ ಗ್ರಹದಲ್ಲಿ ಮಾನವರ ವಸಹಾತು ಸ್ಥಾಪಿಸುವ ಬಗ್ಗೆ ಗಂಭೀರ ಪ್ರಯತ್ನ ನಡೆಯುತ್ತಿರುವ ಸಂದರ್ಭದಲ್ಲೇ ವುಲ್ಫ್ 1061 ಎಂಬ ಸೌರಮಂಡಲವು ವಿಜ್ಞಾನಿಗಳ ಗಮನ ಸೆಳೆದಿದೆ. 14 ಜ್ಯೋತಿರ್ವರ್ಷದ ಆಚೆ ಇರುವ ವುಲ್ಫ್ 1061ನಲ್ಲಿನ ಒಂದು ಗ್ರಹವು ಭೂಮಿಯಂತಹ ವಾತಾವರಣ ಹೊಂದಿರುವ ಸಾಧ್ಯತೆ ದಟ್ಟವಾಗಿದೆಯಂತೆ. ಸ್ಯಾನ್ ಫ್ರಾನ್ಸಿಸ್ಕೋ ಯೂನಿವರ್ಸಿಟಿಯ ಸ್ಟೀಫನ್ ಕೇನ್ ಎಂಬ ಖಗೋಳಶಾಸ್ತ್ರಜ್ಞರು ಈ ಹೊಸ ವಿಚಾರವನ್ನು ಪತ್ತೆಹಚ್ಚಿದ್ದಾರೆ.

ವುಲ್ಫ್'ನಲ್ಲಿ ಜೀವ ಸಾಧ್ಯವಾ?
ನಮ್ಮ ಸೌರಮಂಡಲದಲ್ಲಿ ಭೂಮಿಯಲ್ಲಿ ಮಾತ್ರವೇ ಜೀವಿಗಳಿರುವುದು. ಸೂರ್ಯನಿಂದ ದೂರವೂ ಅಲ್ಲದ, ತೀರಾ ಹತ್ತಿರವೂ ಅಲ್ಲದ ಸ್ಥಿತಿಯಲ್ಲಿ ಭೂಮಿ ಇದೆ. ಸೂರ್ಯನಿಂದ ಭೂಮಿಗಿಂತ ತುಸು ಹತ್ತಿರವಿರುವ ಶುಕ್ರ ಗ್ರಹ ತೀರಾ ಬಿಸಿಯಾಗಿದ್ದು, ಇಲ್ಲಿ ಜೀವಿಗಳು ವಾಸ ಮಾಡಲು ಸಾಧ್ಯವಿಲ್ಲದಂಥ ವಾತಾವರಣವಿದೆ. ಅಂತೆಯೇ, ಮಂಗಳ ಗ್ರಹವು ಸೂರ್ಯನಿಂದ ಭೂಮಿಗಿಂತ ಹೆಚ್ಚು ದೂರವಿದ್ದು, ಅಲ್ಲಿ ಬಿಸಿಲು ಹೆಚ್ಚು ಬೀಳದೇ ತಣ್ಣಗಿನ ವಾತಾವರಣವಿದೆ. ಅಲ್ಲಿ ನೀರಿದ್ದರೂ ಮಂಜಿನ ರೂಪದಲ್ಲಿರಲಷ್ಟೇ ಸಾಧ್ಯ. ಸೌರಮಂಡಲದಲ್ಲಿ ಭೂಮಿ ಇರವ ಅಂತರವನ್ನು ಆಧರಿಸಿ ಅನ್ಯ ಸೌರಮಂಡಲಗಳನ್ನು ಜಾಲಾಡುತ್ತಿರುವ ವಿಜ್ಞಾನಿಗಳ ಕಣ್ಣಿಗೆ ಬಿದ್ದದ್ದು ವುಲ್ಫ್ 1061. ಇದರಲ್ಲಿರುವ 1061ಸಿ ಎಂಬ ಗ್ರಹವು ತನ್ನ ಸೂರ್ಯನಿಂದ ಹೆಚ್ಚು ದೂರವೂ ಅಲ್ಲ, ಹತ್ತಿರವೂ ಅಲ್ಲದ ಅಂತರದಲ್ಲಿದೆ. ಇಲ್ಲಿ ಜೀವಿಗಳು ವಾಸಿಸುವ ವಾತಾವರಣ ಇರಬಹುದು ಎಂಬ ಲೆಕ್ಕಾಚಾರ ಸ್ಟೀಫನ್ ಕೇನ್ ಅವರದ್ದು.

ಪ್ರಕ್ಷುಬ್ದ ವಾತಾವರಣ?
ಭೂಮಿ ಗ್ರಹವು ಸೂರ್ಯನನ್ನು ಸುತ್ತುವಾಗ ತನ್ನ ಕಕ್ಷೆಯನ್ನು ಬದಲಿಸುವ ಪ್ರಮಾಣ ತೀರಾ ಕಡಿಮೆ. ಹೀಗಾಗಿ, ಇಲ್ಲಿ ಹವಾಮಾನ ವೈಪರೀತ್ಯ ಸ್ವಲ್ಪ ಕಡಿಮೆಯೇ. ಇದರಿಂದ ಜೀವ ಸಂಕುಲಗಳು ಬೇಗ ಹೊಂದಿಕೊಳ್ಳಲು ಸಾಧ್ಯ. ಆದರೆ, ವುಲ್ಫ್ 1061C ಗ್ರಹವು ಬಹಳ ಬೇಗ ತನ್ನ ಕಕ್ಷೆಯನ್ನು ಬದಲಾಯಿಸುತ್ತದೆ. ಇದರಿಂದ ಇಲ್ಲಿಯ ವಾತಾವರಣದಲ್ಲಿ ಭಾರೀ ವೈಪರೀತ್ಯವಿರಬಹುದು ಎಂಬ ಶಂಕೆ ಸಂಶೋಧಕರದ್ದು. ಮುಂದಿನ ದಿನಗಳಲ್ಲಿ ಈ ಗ್ರಹದ ಮೇಲೆ ಹೆಚ್ಚೆಚ್ಚು ಸಂಶೋಧನೆಗಳಾದರೆ ಇನ್ನಷ್ಟು ಆಳವಾಗಿ ಅಭ್ಯಸಿಸಬಹುದು ಎಂದು ವಿಜ್ಞಾನಿ ಸ್ಟೀಫನ್ ಕೇನ್ ಹೇಳುತ್ತಾರೆ.

Follow Us:
Download App:
  • android
  • ios