ತುಮಕೂರು[ಮೇ.27]: ರಾಜ್ಯದಲ್ಲಿ ಕಾಂಗ್ರೆಸ್‌ ಜೊತೆ ಮೈತ್ರಿ ಬೇಡ ಎಂಬ ಕೂಗು ಇದೀಗ ಜೆಡಿಎಸ್‌ ಪಕ್ಷದೊಳಗೆ ಕೇಳಿಬಂದಿದೆ. ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಸೋಲಿಗೆ ಕಾಂಗ್ರೆಸ್‌ ಜೊತೆ ಮೈತ್ರಿ ಮಾಡಿಕೊಂಡಿದ್ದು ಕಾರಣ. ಮೈತ್ರಿ ಇಲ್ಲದಿದ್ದರೆ ನಮ್ಮ ದೇವೇಗೌಡರು 2 ಲಕ್ಷ ವೋಟ್‌ನಿಂದ ಗೆಲ್ಲುತ್ತಿದ್ದರು ಎಂದು ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮಗೆ ಈ ಮೈತ್ರಿ ಸಹವಾಸವೇ ಬೇಡ. ಕುಮಾರಣ್ಣ, ದೇವೇಗೌಡರು ನನ್ನನ್ನು ಪಕ್ಷದಿಂದ ಆಚೆ ಹಾಕಿದರೂ ಪರವಾಗಿಲ್ಲ ಎಂದು ಹೇಳಿದ್ದಾರೆ.

ನಗರದ ಜಿಲ್ಲಾ ಜೆಡಿಎಸ್‌ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದ ಅವರು, ಈ ಮೈತ್ರಿ ಸಹವಾಸ ನಮಗೆ ಬೇಡ. ಅಲ್ಲಿ ಆಪರೇಷನ್‌ ಅಂತೆ. ಆತ ಬಾಂಬೆಗೆ ಓಡೋದು, ಡೆಲ್ಲಿಗೆ ಓಡೋದು, ಸರ್ಕಾರ ಬಿದ್ದೋಯ್ತು... ಇದೇ ಆಗೋಯ್ತು. ಇದರಿಂದ ಜನರು ಬೇಸತ್ತು ಹೋಗಿದ್ದು ಇದೇ ಸೋಲಿಗೆ ಕಾರಣ ಎಂದು ವ್ಯಾಖ್ಯಾನಿಸಿದರು.

ಇದೇ ವೇಳೆ ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿಗೆ ಲೀಡ್‌ ಬರಲು ಮಾಜಿ ಶಾಸಕರಾದ ಕೆ.ಎನ್‌.ರಾಜಣ್ಣ, ಸುರೇಶ್‌ ಗೌಡ, ಮಾಜಿ ಸಂಸದ ಮುದ್ದಹನುಮೇಗೌಡ ಹಾಗೂ ಶಿವಣ್ಣ ಕಾರಣ ಎಂದು ಆರೋಪಿಸಿದ ಗೌರಿಶಂಕರ್‌ ಅವರು ರಾಜಣ್ಣ ವಿರುದ್ಧ ಕಿಡಿಕಾರಿದರು. ತಾಕತ್ತಿದ್ದರೆ ಬಹಿರಂಗವಾಗಿ ಯುದ್ಧ ಮಾಡೋಣ ಬಾ ರಾಜಣ್ಣ ಎಂದು ಏಕವಚನದಲ್ಲೇ ಪಂಥಾಹ್ವಾನ ನೀಡಿದರು.