ಬೆಂಗಳೂರು[ಜೂ.27]: ಲೋಕಸಭೆ ಚುನಾವಣೆ ಸೋಲಿನ ಹಿನ್ನೆಲೆಯಲ್ಲಿ ವಿಸರ್ಜಿಸಲಾಗಿದ್ದ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಗೆ (ಕೆಪಿಸಿಸಿ) ಹದಿನೈದು ದಿನದಲ್ಲಿ ನೂತನ ಪದಾಧಿಕಾರಿಗಳ ನೇಮಕ ಮಾಡಲು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ನೇತೃತ್ವದಲ್ಲಿ ನಡೆದ ಹಿರಿಯ ನಾಯಕರ ಸಭೆಯಲ್ಲಿ ನಿರ್ಧರಿಸಲಾಗಿದೆ.

ಇದೇ ವೇಳೆ ಪದಾಧಿಕಾರಿಗಳ ಸಂಖ್ಯೆ ಕಡಿಮೆ ಮಾಡಿ ಸಮರ್ಥ ಹಾಗೂ ಪಕ್ಷದ ಬಗ್ಗೆ ಬದ್ಧತೆ ಇರುವವರಿಗೆ ಮಾತ್ರ ಆದ್ಯತೆ ನೀಡುವುದು. ಪಕ್ಷಕ್ಕಾಗಿ ದೀರ್ಘಾವಧಿ ದುಡಿದವರಿಗೆ ಆದ್ಯತೆ ನೀಡಲು ತೀರ್ಮಾನಿಸಲಾಗಿದೆ. ಜತೆಗೆ ಪದಾಧಿಕಾರಿಗಳ ನೇಮಕದ ಬಳಿಕ ಅವರು ರಾಜ್ಯ ಮಟ್ಟದ ಪ್ರವಾಸ ಮಾಡಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು. ಜತೆಗೆ ಇವರಿಗೆ ಕಾಲ-ಕಾಲಕ್ಕೆ ಸಲಹೆ, ಮಾರ್ಗದರ್ಶನ ನೀಡಲು ಹಿರಿಯರ ಸಮಿತಿಯನ್ನು ನೇಮಿಸಲು ಸಹ ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ. ಇದಲ್ಲದೆ, ಕೆಪಿಸಿಸಿ ಪದಾಧಿಕಾರಿಗಳಿಗೆ ಮಾರ್ಗದರ್ಶನ ನೀಡಲು 10 ಮಂದಿ ಹಿರಿಯ ನಾಯಕರನ್ನು ಒಳಗೊಂಡಿರುವ ಮಾರ್ಗದರ್ಶಕರ ಸಮಿತಿಯೊಂದನ್ನು ರಚನೆ ಮಾಡಲಿದ್ದು, ಈ ಸಮಿತಿಯು ಪಕ್ಷದ ಪ್ರಮುಖ ನಿರ್ಧಾರಗಳ ವಿಚಾರದಲ್ಲಿ ಕೆಪಿಸಿಸಿಗೆ ಸಲಹೆ ಸೂಚನೆ ನೀಡಲಿದೆ.

3 ತಿಂಗಳಲ್ಲಿ ಸಮಿತಿಗಳ ನೇಮಕ:

ಮೂರು ತಿಂಗಳೊಳಗಾಗಿ ಜಿಲ್ಲಾ ಕಾಂಗ್ರೆಸ್‌ ಸಮಿತಿ, ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಹಾಗೂ ಗ್ರಾಮ ಪಂಚಾಯ್ತಿ ಸಮಿತಿಗಳಿಗೂ ಪದಾಧಿಕಾರಿಗಳ ನೇಮಕ ಮಾಡಲಾಗುವುದು. ಮೂರೂ ಮಾದರಿಯ ಸಮಿತಿಗಳಲ್ಲೂ ಪದಾಧಿಕಾರಿಗಳ ಸಂಖ್ಯೆ ಸೀಮಿತಗೊಳಿಸಲಾಗುವುದು. ಪ್ರತಿ ಪಂಚಾಯ್ತಿ ಸಮಿತಿಗೆ 5-6 ಮಂದಿ ಪದಾಧಿಕಾರಿಗಳನ್ನು ಮಾತ್ರ ನೇಮಿಸಲಾಗುವುದು. ಈ ಸಮಿತಿಗಳು ಪ್ರತಿ ತಿಂಗಳು ಸಭೆ ನಡೆಸಿ ತಮ್ಮ ವ್ಯಾಪ್ತಿಯಲ್ಲಿನ ಜನರ ಕುಂದು-ಕೊರತೆ ಬಗ್ಗೆ ಸಭೆ ನಡೆಸಬೇಕು. ಈ ಸಮಸ್ಯೆಗಳನ್ನು ಸ್ಥಳೀಯ ತಾಲೂಕು, ಜಿಲ್ಲಾ ಪಂಚಾಯ್ತಿ ಸದಸ್ಯರು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದು ಪರಿಹರಿಸಿಕೊಡಬೇಕು ಎಂದು ಸೂಚಿಸಿದ್ದಾರೆ ಎನ್ನಲಾಗಿದೆ.

ಮೂರು ದಿನಗಳ ಚಿಂತನ-ಮಂಥನ ಸಭೆ:

ಪಕ್ಷದ ಸ್ಥಿತಿಗತಿ, ಸಂಘಟನೆ ಬಗ್ಗೆ ಚರ್ಚಿಸಲು ಹಿರಿಯ ನಾಯಕರ ರಾಜ್ಯ ಮಟ್ಟದ ಚಿಂತನ-ಮಂಥನ ಸಭೆ ನಡೆಸಲಾಗುವುದು. ಜತೆಗೆ ಅಕ್ಟೋಬರ್‌ 2ರಂದು ಗಾಂಧಿ ಜಯಂತಿ ಪ್ರಯುಕ್ತ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಒಂದು ದಿನ ಕಾರ್ಯಾಗಾರ ಮಾಡುವುದು. ಈ ವೇಳೆ ಮಹಾತ್ಮ ಗಾಂಧೀಜಿ ಹಾಗೂ ಅವರ ಸಾಧನೆಗಳ ಬಗ್ಗೆ ಜನತೆಗೆ ಅರಿವು ಮೂಡಿಸಲು ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೆಪಿಸಿಸಿ ಪುನರ್‌ರಚನೆಗೆ ಈಗಾಗಲೇ ಆದೇಶಿಸಲಾಗಿದೆ. ಮೂರು ವಾರದಲ್ಲಿ ಸಮಿತಿ ಪುನರ್‌ರಚಿಸಿ ನೂತನ ಪದಾಧಿಕಾರಿಗಳ ನೇಮಕ ಮಾಡಲಾಗುವುದು. ಬಳಿಕ ಜಿಲ್ಲಾ ಸಮಿತಿ ಹಾಗೂ ಬೂತ್‌ ಸಮಿತಿ ಪುನರ್‌ರಚನೆಯಾಗಲಿದೆ.

- ಕೆ.ಸಿ. ವೇಣುಗೋಪಾಲ್‌, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ