ಕೆಪಿಸಿಸಿ ಅಧ್ಯಕ್ಷ ಹುದ್ದೆಯೂ ಸೇರಿದಂತೆ ಆರು ಪ್ರಮುಖ ಹುದ್ದೆಗಳಿಗೆ ವಿವಿಧ ಸಮುದಾಯಗಳ ನಾಯಕರನ್ನು ನೇಮಕ ಮಾಡಿರುವುದು ಎಲ್ಲರನ್ನೂ ಸಮಾಧಾನಪಡಿಸಲು ಪ್ರಯತ್ನಿಸಿದಂತಿದೆ. ಈ ನೇಮಕದಿಂದ ಜಿ.ಪರಮೇಶ್ವರ್‌ ಹಾಗೂ ಸಿಎಂ ಸಿದ್ದರಾಮಯ್ಯ ಅವರಿಗೆ ನೇರ ಲಾಭವಾದಂತೆ ಕಾಣುತ್ತಿದ್ದು, ಕೆಪಿಸಿಸಿ ಅಧ್ಯಕ್ಷ ಹುದ್ದೆಯ ಆಕಾಂಕ್ಷಿಯಾಗಿದ್ದ ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರಿಗೆ ಕೆಲಮಟ್ಟಿನ ಹಿನ್ನಡೆಯಾದಂತೆ ಮೇಲ್ನೋಟಕ್ಕೆ ಕಂಡುಬರುತ್ತಿದೆ.

ಮುಂಬರುವ 2018ರ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ರಾಜ್ಯ ಕಾಂಗ್ರೆಸ್‌ನ ಎಲ್ಲ ಪ್ರಮುಖ ಸಮುದಾಯಗಳ ನಾಯಕರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಒಗ್ಗೂಡಿಸಿಕೊಂಡು ಹೋಗಲು ಕಾಂಗ್ರೆಸ್‌ ಹೈಕಮಾಂಡ್‌ ಚಾಣಾಕ್ಷ ‘ಪ್ಯಾಕೇಜ್‌ ಡೀಲ್‌' ಘೋಷಿಸಿದೆ. ಬುಧವಾರ ಕೆಪಿಸಿಸಿ ಅಧ್ಯಕ್ಷ ಹುದ್ದೆಯೂ ಸೇರಿದಂತೆ ಆರು ಪ್ರಮುಖ ಹುದ್ದೆಗಳಿಗೆ ವಿವಿಧ ಸಮುದಾಯಗಳ ನಾಯಕರನ್ನು ನೇಮಕ ಮಾಡಿರುವುದು ಎಲ್ಲರನ್ನೂ ಸಮಾಧಾನಪಡಿಸಲು ಪ್ರಯತ್ನಿಸಿದಂತಿದೆ. ಈ ನೇಮಕದಿಂದ ಜಿ.ಪರಮೇಶ್ವರ್‌ ಹಾಗೂ ಸಿಎಂ ಸಿದ್ದರಾಮಯ್ಯ ಅವರಿಗೆ ನೇರ ಲಾಭವಾದಂತೆ ಕಾಣುತ್ತಿದ್ದು, ಕೆಪಿಸಿಸಿ ಅಧ್ಯಕ್ಷ ಹುದ್ದೆಯ ಆಕಾಂಕ್ಷಿಯಾಗಿದ್ದ ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರಿಗೆ ಕೆಲಮಟ್ಟಿನ ಹಿನ್ನಡೆಯಾದಂತೆ ಮೇಲ್ನೋಟಕ್ಕೆ ಕಂಡುಬರುತ್ತಿದೆ.

ವಿಧಾನ ಪರಿಷತ್‌ ಸದಸ್ಯ ಎಸ್‌.ಆರ್‌.ಪಾಟೀಲ್‌ ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಪ್ರಯತ್ನ ಮಾಡಿದ್ದರಾದರೂ ಕಾರ್ಯಾಧ್ಯಕ್ಷ ಹುದ್ದೆ ಗಿಟ್ಟಿಸಿಕೊಳ್ಳುವ ಮೂಲಕ ಕನಿಷ್ಠ ಉತ್ತರ ಕರ್ನಾಟಕದಲ್ಲಿ ಪಕ್ಷದ ಜವಾಬ್ದಾರಿಗೆ ಸಮಾಧಾನಪಟ್ಟುಕೊಳ್ಳುವಂತಾಗಿದೆ. ವಿಧಾನಸಭಾ ಚುನಾವಣೆ ಹತ್ತಿರ ಇರುವುದರಿಂದ ಉತ್ತರ ಕರ್ನಾಟಕದಲ್ಲಿ ಲಿಂಗಾಯತ ಸಮುದಾಯದ ಮತಗಳ ಮೇಲೆ ಕಣ್ಣಿಟ್ಟು, ಪಕ್ಷ ಈ ಜವಾಬ್ದಾರಿ ವಹಿಸಿರುವುದು ಎಸ್‌.ಆರ್‌.ಪಾಟೀಲ್‌ ಅವ ರಿಗೂ ಒಳಗೊಳಗೆ ಖುಷಿ ನೀಡಿದಂತಿದೆ.
ಇನ್ನು ಬಲಿಷ್ಠ ನಾಯಕ ಜನಾಂಗಕ್ಕೆ ಸೇರಿದ ಮಾಜಿ ಸಚಿವ ಸತೀಶ್‌ ಜಾರಕಿಹೊಳಿ ಅವರಿಗೆ ಎಐಸಿಸಿ ಕಾರ್ಯದರ್ಶಿ ಹುದ್ದೆ ಕೊಟ್ಟಿರುವುದು ಈ ಸಮುದಾಯದ ಬಗೆಗೆ ಹೈಕಮಾಂಡ್‌ ಹೊಂದಿರುವ ಆಸ್ಥೆಯನ್ನು ಸಾಬೀತುಪಡಿಸಿದೆ. ಒಂದೆಡೆ ಸತೀಶ್‌ರಿಗೆ ದೆಹಲಿ ಮಟ್ಟದಲ್ಲಿ ಜವಾಬ್ದಾರಿ ಪಡೆದ ಸಮಾಧಾನವಾಗಿದ್ದರೆ, ಹೈಕಮಾಂಡ್‌ಗೆ ಪ್ರಮುಖ ಸಮುದಾಯದಿಂದ ಮುಂಬರುವ ಚುನಾವಣೆಯಲ್ಲಿ ಅನುಕೂಲ ವಾಗುತ್ತದೆ ಎಂಬ ಆಶಾಭಾವನೆ ಇದೆ. ಹೀಗಾಗಿ ಜಾರಕಿಹೊಳಿ ಸೋದರರ ಸಮಸ್ಯೆಯೂ ಇತ್ಯರ್ಥಗೊಂಡಂತಾಗಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಶತಾಯಗತಾಯ ಪ್ರಯತ್ನ ನಡೆಸಿದ್ದ ಸಂಸದ ಕೆ.ಎಚ್‌.ಮುನಿಯಪ್ಪ ಅವರನ್ನು ಸಿಡಬ್ಲ್ಯೂಸಿ ವಿಶೇಷ ಆಹ್ವಾನಿತರನ್ನಾಗಿ ನೇಮಕ ಮಾಡಲಾಗಿದ್ದು, ಅವರನ್ನೂ ಸಮಾಧಾನಿಸಿ ಪರಿಶಿಷ್ಟಜಾತಿಯ ಎಡಗೈ ಸಮುದಾಯ ಕೂಡ ಗಣನೆಗೆ ತೆಗೆದುಕೊಳ್ಳಲಾಗಿದೆ ಎಂಬ ಸಂದೇಶ ರವಾನಿಸಿದೆ.

ಆದರೆ ಒಟ್ಟಾರೆ ಬೆಳವಣಿಗೆ ಗಮನಿಸಿದರೆ ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಅವರಿಗೆ ವೈಯಕ್ತಿಕವಾಗಿ ಹಿನ್ನಡೆಯಾಗಿದೆ. ಶಿವಕುಮಾರ್‌ ಅವರಿಗೆ ಹೈಕಮಾಂಡ್‌ನಲ್ಲಿ ಒಳ್ಳೆಯ ಇಮೇಜ್‌ ಇತ್ತಾದರೂ ಕೆಪಿಸಿಸಿ ಆಯ್ಕೆ ವೇಳೆ ಶಿವಕುಮಾರ್‌ ಬಗೆಗೆ ರಾಜ್ಯ ಕಾಂಗ್ರೆಸ್‌ನ ಬಹುತೇಕ ನಾಯಕರು ಹೊಂದಿರುವ ಅಭಿಪ್ರಾಯ ಸ್ವತಃ ಹೈಕಮಾಂಡ್‌ಗೆ ಅಚ್ಚರಿ ತಂದಿದೆ. ದೆಹಲಿ ಮಟ್ಟದಲ್ಲಿ ಪ್ರಭಾವಿಯಾಗಿದ್ದ ಶಿವಕುಮಾರ್‌ ಅವರ ಇಮೇಜ್‌ಗೆ ಕೆಪಿಸಿಸಿ ಆಯ್ಕೆ ವೇಳೆ ನಡೆದ ಬೆಳವಣಿಗೆಯಿಂದ ಕೊಂಚ ಹಾನಿಯಾದಂತಿದೆ. ಇದರಿಂದ ಡಿ.ಕೆ.ಶಿವಕುಮಾರ್‌ ವೇಗಕ್ಕೆ ಇದೀಗ ಸ್ವತಃ ಹೈಕಮಾಂಡ್‌ ಬ್ರೇಕ್‌ ಹಾಕುವಂತಾಗಿದೆ. ಇದರಿಂದ ಸಹಜವಾಗಿಯೇ ಸಚಿವ ಶಿವಕುಮಾರ್‌ಗೆ ಬೇಸರವಾಗಿದೆ. ಪರಿಸ್ಥಿತಿ ಹೇಗಿದೆ ಎಂದರೆ, ಶಿವಕುಮಾರ್‌ ತಮ್ಮ ನೋವನ್ನು ಹಂಚಿಕೊಳ್ಳಲು ಒಬ್ಬರೂ ಸಮಾನ ಮನಸ್ಕ ನಾಯಕರಿಲ್ಲದಂತಾಗಿದೆ.

ಇನ್ನು ಈವರೆಗೆ ಏಕೈಕ ಕಾರ್ಯಾಧ್ಯಕ್ಷ ರಾಗಿದ್ದ ದಿನೇಶ್‌ ಗುಂಡೂರಾವ್‌ ಸಿದ್ದರಾ ಮಯ್ಯ ಪರವಾಗಿಯೇ ಇದ್ದರು. ಆದರೆ ಇದೀಗ ಸ್ವತಃ ಸಿದ್ದರಾಮಯ್ಯ ಎಸ್‌.ಆರ್‌. ಪಾಟೀಲ್‌ ಬಗೆಗೆ ತೋರಿದ ಕಾಳಜಿಯಿಂದ ದಿನೇಶ್‌ರಿಗೆ ಅಧಿಕಾರದ ಕತ್ತರಿ ಪ್ರಯೋಗವಾಗಿದೆ. ಇದರ ಜತೆಗೆ ಅನ್ನಭಾಗ್ಯ ಯೋಜನೆಯಲ್ಲಿ ನಡೆದಿದೆ ಎನ್ನಲಾದ ಹಗರಣ ಮತ್ತು ಐಎಎಸ್‌ ಅಧಿಕಾರಿ ಅನುರಾಗ್‌ ತಿವಾರಿ ಸಾವಿನ ಕುರಿತ ಆರೋಪಗಳೂ ದಿನೇಶ್‌ ಹಿನ್ನಡೆಗೆ ಕಾರಣವಾಯಿತು ಎನ್ನಲಾಗುತ್ತಿದೆ.

ಸಭಾಪತಿ ಸ್ಥಾನಕ್ಕೂ ಕಾರ‍್ಯತಂತ್ರ

ಈಗಾಗಲೇ ವಿಧಾನ ಪರಿಷತ್‌ ಸಭಾಪತಿ ಡಿ.ಎಚ್‌.ಶಂಕರ ಮೂರ್ತಿ ಪದಚ್ಯುತಿಗೆ ಕಾಂಗ್ರೆಸ್‌ನಲ್ಲಿ ವೇದಿಕೆ ಸಿದ್ಧಗೊಳ್ಳುತ್ತಿದೆ. ಈ ಮಧ್ಯೆ ಎಸ್‌.ಆರ್‌.ಪಾಟೀಲ್‌ ಕೆಪಿಸಿಸಿ ಕಾರ್ಯಾಧ್ಯಕ್ಷ (ಉತ್ತರ) ಹುದ್ದೆಗೆ ನೇಮಕಗೊಂಡಿರುವು ದರಿಂದ ಅವರು ಸಭಾಪತಿಯಾಗುವ ಪ್ರಶ್ನಯೇ ಉದ್ಭವಿಸುವುದಿಲ್ಲ. ಹೀಗಾಗಿ ವಿ.ಎಸ್‌.ಉಗ್ರಪ್ಪ ಮತ್ತು ಎಚ್‌.ಎಂ.ರೇವಣ್ಣ ಹೆಸರುಗಳು ಸಭಾಪತಿ ಹುದ್ದೆಗೆ ಪ್ರಬಲವಾಗಿ ಕೇಳಿಬರುತ್ತಿವೆ.

ಸಂಪುಟಕ್ಕೆ ಯಾರ್ಯಾರು?

ಗೃಹ ಸಚಿವ ಸ್ಥಾನಕ್ಕೆ ಪರಮೇಶ್ವರ್‌ ರಾಜಿನಾಮೆ ಸನ್ನಿಹಿತವಾಗಿದೆ. ಹೀಗಾಗಿ ಪರಮೇಶ್ವರ್‌ ಮತ್ತು ಎಚ್‌.ವೈ.ಮೇಟಿ ರಾಜಿನಾಮೆಯಿಂದ ತೆರವಾದ ಎರಡು ಸ್ಥಾನಗಳೂ ಸೇರಿ ಒಟ್ಟು ಮೂರು ಸಚಿವ ಸ್ಥಾನಗಳು ಖಾಲಿಯಾಗಲಿವೆ. ಜೂ.5ರಿಂದ ಆರಂಭವಾಗಲಿರುವ ಅಧಿವೇಶನದ ಬಳಿಕ ಸಚಿವ ಸಂಪುಟ ವಿಸ್ತರಣೆ ನಡೆಯುವುದು ಬಹುತೇಕ ಖಚಿತ. ಖಾಲಿ ಇರುವ ಮೂರು ಸ್ಥಾನಗಳ ಪೈಕಿ ತಲಾ ಒಂದು ಸ್ಥಾನ ಲಿಂಗಾಯತ, ದಲಿತ ಮತ್ತು ಹಿಂದುಳಿದ ವರ್ಗಕ್ಕೆ ನೀಡುವ ಚಿಂತನೆ ಸಿಎಂ ಸಿದ್ದರಾಮಯ್ಯ ಅವರದ್ದು. ಹೀಗಾಗಿ ಗೀತಾ ಮಹದೇವ ಪ್ರಸಾದ್‌ ಲಿಂಗಾಯತ ಕೋಟಾದಲ್ಲಿ ಸ್ಥಾನ ಪಡೆಯುವುದು ಬಹುತೇಕ ನಿಶ್ಚಿತ. ಇನ್ನು ಹಿಂದುಳಿದ ವರ್ಗಕ್ಕೆ ಮೀಸಲಿರುವ ಕೋಟಾದಲ್ಲಿ ಕುರುಬ ಸಮುದಾಯಕ್ಕೆ ಅವಕಾಶ ಸಿಗಬಹುದು. ಆ ಸ್ಥಾನಕ್ಕೆ ಎಚ್‌.ಎಂ.ರೇವಣ್ಣ ಮತ್ತು ಸಿ.ಎಸ್‌.ಶಿವಳ್ಳಿ ಭಾರಿ ಯತ್ನ ನಡೆಸಿದ್ದರೂ, ಮೇಟಿ ಸೇರಿದರೂ ಅಚ್ಚರಿ ಇಲ್ಲ.