ಪಣಜಿ[ಮಾ.18]: ಮನೋಹರ ಪರ‌್ರಿಕರ್ ಎಂದರೆ ಗೋವಾ. ಗೋವಾ ಎಂದರೆ ಮನೋಹರ್ ಪರ‌್ರಿಕರ್. ಅಷ್ಟರ ಮಟ್ಟಿಗೆ ಗೋವಾಗೂ ಮನೋಹರ್ ಪರ‌್ರಿಕರ್ ಅವರಿಗೂ ಬೆಸೆದಿತ್ತು ಸಂಬಂಧ. ಇತ್ತೀಚಿನ ವರ್ಷಗಳಲ್ಲಿ ಯಾವಾಗ ರಾಜ್ಯವು ಕಷ್ಟಕರ ಸಂದರ್ಭ ಎದುರಿಸುತ್ತಿತ್ತೋ ಆಗ ಪರ‌್ರಿಕರ್ ಅವರು ನೆರವಿಗೆ ಧಾವಿಸುತ್ತಿದ್ದರು. ದೇಶದ ರಕ್ಷಣಾ ಮಂತ್ರಿಯಾಗಿಯೂ ಅವರು ಮಾಡಿದ ಕೆಲಸವು ಪ್ರಶಂಸಾರ್ಹ

ಐಐಟಿ ಪದವೀಧರರಾದ ಪರ‌್ರಿಕರ್ ಅವರು ಸಂಘ ಪರಿವಾರದ ಮೂಲದಿಂದ ಬಂದವರು. ರಾಜ್ಯದಲ್ಲಿ ಹಿಂದುತ್ವವಾದ ಪ್ರತಿಪಾದಿಸುತ್ತಿದ್ದ ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷವು (ಎಂಜಿಪಿ) ಪ್ರಬಲಗೊಳ್ಳುತ್ತಿದ್ದಂತೆಯೇ ಬಿಜೆಪಿ ಪರವಾಗಿ ರಾಜಕೀಯಕ್ಕೆ ಧುಮುಕಿದವರು ಪರ‌್ರಿಕರ್. ಎಂಜಿಪಿಯನ್ನು ಎದುರಿಸುವ ಛಾತಿ ಪರ‌್ರಿಕರ್ ಅವರಿಗೆ ಇದ್ದ ಕಾರಣ ಅವರ ಮುಂದಾಳತ್ವವನ್ನೇ ಬಿಜೆಪಿ ನಾಯಕತ್ವವು ಬಯಸಿ, ಅಖಾಡಕ್ಕಿಳಿಸಿತು.

ಇದರ ನಡುವೆಯೇ 1994ರಲ್ಲಿ ಮೊದಲ ಬಾರಿ ಪಣಜಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಮನೋಹರ್ ಜಯಶಾಲಿಯಾದರು. ಅಲ್ಲಿಂದ ಈವರೆಗೆ ಅವರು ಅನೇಕ ರಾಜಕೀಯ ಏಳುಬೀಳುಗಳನ್ನು ಕಂಡರೂ, ಗೋವಾ ಪಾಲಿಗೆ ಸದಾ ‘ಟ್ರಬಲ್ ಶೂಟರ್’ ಎನ್ನಿಸಿಕೊಂಡರು.

1999ರಲ್ಲಿ ಗೋವಾ ಪ್ರತಿಪಕ್ಷ ನಾಯಕರಾಗಿದ್ದ ಪರ‌್ರಿಕರ್ 2000ನೇ ಅ.24ರಂದು ಮೊದಲ ಬಾರಿ ಗೋವಾ ಮುಖ್ಯಮಂತ್ರಿಯಾದರು. 2002ರ ಫೆ.27ರಂದು ಅರ್ಧಕ್ಕೇ ಅಧಿಕಾರ ಕಳೆದುಕೊಂಡರು. ಆದರೆ 2002ರ ಜೂನ್ 5ರಂದು ಮತ್ತೆ ಸಿಎಂ ಆದರು. 2004ರ ಜನವರಿಯಲ್ಲಿ ಮುಖ್ಯಮಂತ್ರಿಯಾದ ಅವರು, ಕೆಲ ಸಮಯದ ಬಳಿಕ ಅಲ್ಪಮತದ ಕಾರಣ ಕೆಳಗಿಳಿದರು. ಈ ನಡುವೆ ಪ್ರತಾಪಸಿಂಹ ರಾಣೆ ಸಿಎಂ ಆದರು. ಬಳಿಕ 2007ರಲ್ಲಿ ಪರ‌್ರಿಕರ್ ನೇತೃತ್ವದಲ್ಲಿ ಬಿಜೆಪಿ ಸೋತಿತು.

ದಿಗಂಬರ ಕಾಮತ್ ಮುಖ್ಯಮಂತ್ರಿಯಾದರು. ಈ ನಡುವೆ, 2012ರಲ್ಲಿ ಬಿಜೆಪಿಗೆ 21 ಸ್ಥಾನ ಲಭಿಸಿದ ಕಾರಣ ಪೂರ್ಣ ಬಹುಮತದೊಂದಿಗೆ ಪರ‌್ರಿಕರ್ ಸಿಎಂ ಆದರು. ಆದರೆ 2014ರಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ರಕ್ಷಣಾ ಸಚಿವರಾಗಿ ದಿಲ್ಲಿಗೆ ವರ್ಗಾವಣೆಗೊಂಡರು. ಲಕ್ಷ್ಮೀಕಾಂತ್ ಪಾರ್ಸೇಕರ್ ಅವರಿಗೆ ಅಧಿಕಾರ ಬಿಟ್ಟುಕೊಟ್ಟರು. ಆದರೂ ಅವರ ಮನಸ್ಸು ಗೋವಾ ಮೇಲೇ ಕೇಂದ್ರೀಕೃತವಾಗಿರುತ್ತಿತ್ತು.

2017ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋತು ಕಾಂಗ್ರೆಸ್ ಪಕ್ಷ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಆದರೆ ಕಾಂಗ್ರೆಸ್‌ಗೆ ಬಹುಮತ ಬರಲಿಲ್ಲ. ಈ ವೇಳೆ, ಗೋವಾ ಫಾರ್ವರ್ಡ್ , ಕೆಲವು ಪಕ್ಷೇತರರು ಹಾಗೂ ಎಂಜಿಪಿ, ‘ಪರ‌್ರಿಕರ್ ಸಿಎಂ ಆದರೆ ನಾವು ಬಿಜೆಪಿ ಬೆಂಬಲಿಸುತ್ತೇವೆ’ ಎಂಬ ಷರತ್ತು ಒಡ್ಡಿದವು. ಹೀಗಾಗಿ ಗೋವಾದಲ್ಲಿ ಶತಾಯ ಗತಾಯ ಬಿಜೆಪಿ ಸರ್ಕಾರ ಪುನಃ ಅಧಿಕಾರಕ್ಕೆ ಬರುವಂತಾಗಲು ಪರ‌್ರಿಕರ್ ಅನಿವಾರ್ಯವಾದರು. ರಕ್ಷಣಾ ಸಚಿವ ಹುದ್ದೆ ಬಿಟ್ಟು, ಪುನಃ ಗೋವಾ ಸಿಎಂ ಆದರು.

ಈ ನಡುವೆ, 2018ರಲ್ಲಿ ಅವರಿಗೆ ಕ್ಯಾನ್ಸರ್ ತಗುಲಿತು. ಅಮೆರಿಕದಲ್ಲಿ ಚಿಕಿತ್ಸೆ ಪಡೆದು ಬಂದು ಛಲದಂಕಮಲ್ಲನಂತೆ ಕ್ಯಾನ್ಸರ್ ಜತೆ ಸಣೆಸಿ ಕೊನೆಯವರೆಗೂ ಸಿಎಂ ಹುದ್ದೆ ಅಲಂಕರಿಸಿದರು. ಮಿತ್ರಪಕ್ಷಗಳು ‘ನಮ್ಮ ಬೆಂಬಲ ಪರ‌್ರಿಕರ್ ಸಿಎಂ ಆಗಿರುವವರೆಗೆ’ ಎಂದು ಹೇಳುತ್ತಿದ್ದರಿಂದ ರಾಜ್ಯದ ಹಿತದೃಷ್ಟಿ ಗಮನದಲ್ಲಿ ಇರಿಸಿಕೊಂಡು ಮಾರಕ ರೋಗದ ನಡುವೆಯೂ ರಾಜ್ಯಕ್ಕೆ ಉತ್ತಮ ಆಡಳಿತ ನೀಡಲು ಯತ್ನಿಸಿ ಅಧಿಕಾರದಲ್ಲಿಯೇ ಕೊನೆಯುಸಿರೆಳೆದರು.

ಕೊನೆಯುಸಿರು ಇರುವವರೆಗೆ ಗೋವಾ ಸೇವೆ ಮಾಡುವೆ ಪಣಜಿ:

ಇತ್ತೀಚಿನ ಬಜೆಟ್ ಮಂಡನೆ ವೇಳೆ ಮನೋಹರ ಪರ‌್ರಿಕರ್ ಅವರು, ‘ಕೊನೆಯ ಉಸಿರು ಇರುವವರೆಗೆ ಗೋವಾ ಜನರ ಸೇವೆ ಮಾಡುವೆ’ ಎಂದಿದ್ದರು. ಅವರ ಈ ಭಾವನಾತ್ಮಕ ಹೇಳಿಕೆ ಅನೇಕರಲ್ಲಿ ಕಣ್ಣೀರು ಬರುವಂತೆ ಮಾಡಿತ್ತು. ಆ ಪ್ರಕಾರವಾಗಿಯೇ ಅವರು ಗೋವಾ ಜನರ ಸೇವೆ ಮಾಡುತ್ತಲೇ ಕೊನೆಯುಸಿರು ಎಳೆದಿದ್ದಾರೆ.