ಇಂದೋರ್‌[ಮಾ.31]: ಕಾಂಗ್ರೆಸ್‌ ಭರವಸೆ ನೀಡಿರುವ ಕನಿಷ್ಠ ಆದಾಯ ಭರವಸೆ ಯೋಜನೆ (ನ್ಯಾಯ್‌) ಜಾರಿಯಾದ ಬಳಿಕ ತನ್ನ ಪರಿತ್ಯಕ್ತ ಮಡದಿ ಮತ್ತು ಮಗಳಿಗೆ ನಿರ್ವಹನಾ ವೆಚ್ಚವನ್ನು ನೀಡುವುದಾಗಿ ಟೀವಿ ನಟನೊಬ್ಬ ಇಲ್ಲಿನ ಸ್ಥಳೀಯ ಕೌಟುಂಬಿಕ ಕೋರ್ಟ್‌ವೊಂದರ ಮುಂದೆ ಹೇಳಿಕೆ ನೀಡಿದ್ದಾನೆ.

ಟೀವಿ ನಟ ಆನಂದ್‌ ಶರ್ಮಾ ಎಂಬಾತನಿಗೆ ಕೌಟುಂಬಿಕ ಕೋರ್ಟ್‌ ಮಾ.12ರಂದು, ಪತ್ನಿ ಮತ್ತು ಮಗಳಿಗೆ ಮಾಸಿಕ 4500 ರು. ನಿರ್ವಹಣಾ ವೆಚ್ಚ ನೀಡುವಂತೆ ಸೂಚಿಸಿತ್ತು. ಆದರೆ, ತನ್ನ ಹಣಕಾಸು ಸ್ಥಿತಿ ಚೆನ್ನಾಗಿಲ್ಲದೇ ಇರುವುದರಿಂದ ಹಣ ಪಾವತಿಸಲು ಸಾಧ್ಯವಾಗುತ್ತಿಲ್ಲ. ತಾನು ಟೀವಿಯಲ್ಲಿ ಸಣ್ಣ ಪಾತ್ರ ಮಾಡುವುದರಿಂದ ತಿಂಗಳಿಗೆ 5ರಿಂದ 6 ಸಾವಿರವನ್ನಷ್ಟೇ ಸಂಪಾದಿಸುತ್ತೇನೆ.

ಒಂದು ವೇಳೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಪ್ರತಿ ತಿಂಗಳು ನೀಡುವ 6 ಸಾವಿರ ರು.ನಲ್ಲಿ ಪತ್ನಿಗೆ 4,500 ರು. ನೀಡುವುದಾಗಿ ಕೋರ್ಟ್‌ಗೆ ಖಾತರಿ ಪತ್ರ ನೀಡಿದ್ದಾನೆ. ಕೋರ್ಟ್‌ ಮುಂದಿನ ವಿಚಾರಣೆಯನ್ನು ಏ.29ಕ್ಕೆ ನಿಗದಿಪಡಿಸಿದೆ.