Asianet Suvarna News Asianet Suvarna News

ಗುಡುಗಿದ ಶಾ: ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆ ವಿಸ್ತರಣೆಗೆ ರಾಜ್ಯಸಭೆ ಅನುಮೋದನೆ!

ಪ್ರತ್ಯೇಕತಾವಾದ, ಉಗ್ರವಾದ ಒಪ್ಪಲ್ಲ: ಮತ್ತೆ ಶಾ ಗುಡುಗು|  ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆ ವಿಸ್ತರಣೆಗೆ ರಾಜ್ಯಸಭೆ ಅನುಮೋದನೆ

Will not tolerate separatist movement terrorism in Jammu Kashmir Amit Shah in Rajya Sabha
Author
Bangalore, First Published Jul 2, 2019, 11:07 AM IST
  • Facebook
  • Twitter
  • Whatsapp

ನವದೆಹಲಿ[ಜು.02]: ದೇಶ ವಿಭಜಿಸುವ ಶಕ್ತಿಗಳಿಗೆ ತಕ್ಕ ಪಾಠ ಕಲಿಸುವುದಾಗಿ ಮತ್ತೊಮ್ಮೆ ಎಚ್ಚರಿಕೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಚಳವಳಿ ಮತ್ತು ಉಗ್ರವಾದವನ್ನು ಯಾವುದೇ ಕಾರಣಕ್ಕೂ ನಾವು ಸಹಿಸುವುದಿಲ್ಲ. ನಾವು ಶಾಂತಿಯುನ್ನು ಬಯಸುತ್ತೇವೆಯಾದರೂ, ಅದು ನಮ್ಮ ಗಡಿಯನ್ನು ಒಪ್ಪದವರ ಜೊತೆಯಲ್ಲ ಎಂದು ರಾಜ್ಯದಲ್ಲಿ ಹಿಂಸೆಗೆ ನೇರವಾಗಿ ಮತ್ತು ಪರೋಕ್ಷವಾಗಿ ಕಾರಣವಾಗುತ್ತಿರುವವರಿಗೆ ಎಚ್ಚರಿಕೆ ನೀಡಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತವನ್ನು ಆರು ತಿಂಗಳು ವಿಸ್ತರಿಸುವ ಶಾಸನ ಬದ್ಧ ಗೊತ್ತುವಳಿಯ ಚರ್ಚೆಗೆ ಉತ್ತರಿಸಿದ ಅಮಿತ್‌ ಶಾ, ಜಮ್ಮು- ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಯಾರೂ ಅದನ್ನು ದೇಶದಿಂದ ಬೇರ್ಪಡಿಸಲು ಸಾಧ್ಯವಿಲ್ಲ. ಭಯೋತ್ಪಾದನೆ ವಿಷಯದಲ್ಲಿ ಸರ್ಕಾರ ಶೂನ್ಯ ಸಹಿಷ್ಣುತೆ ಹೊಂದಿದೆ. ಎನ್‌ಐಎ ಮತ್ತು ತೆರಿಗೆ ಇಲಾಖೆಗಳು ರಾಜ್ಯದಲ್ಲಿನ ಪ್ರತ್ಯೇಕತಾವಾದಿಗಳ ಹಣಕಾಸಿನ ಹರಿವಿಗೆ ಬ್ರೇಕ್‌ ಹಾಕಿದ್ದಾರೆ ಎಂದು ಹೇಳಿದರು.

ರಾಜ್ಯದಲ್ಲಿ ಶಾಂತಿ ಸ್ಥಾಪನೆಗೆ ಕಳೆದ 70 ವರ್ಷಗಳಿಂದ ಕೈಗೊಂಡ ಯೋಜನೆಗಳು ಫಲ ಕೊಟ್ಟಿಲ್ಲ. ಹೀಗಾಗಿ ನಾವು ಹೊಸ ದಾರಿ ತುಳಿಯಲಿದ್ದೇವೆ. ನಾವು ಕಾಶ್ಮೀರದಲ್ಲಿ ಅಭಿವೃದ್ಧಿ ಬಯಸುತ್ತೇವೆ. ಆದರೆ ನಾವು ರಾಜ್ಯದಲ್ಲಿ ಪ್ರತ್ಯೇಕತಾವಾದ ಮತ್ತು ಉಗ್ರವಾದ ಒಪ್ಪಲ್ಲ. ಇಂಥವರು ಮುಂದಿನ ದಿನಗಳಲ್ಲಿ ಕಠಿಣ ದಿನ ಎದುರಿಸಬೇಕಾಗಿ ಬರಲಿದೆ ಎಂದು ಶಾ ಎಚ್ಚರಿಸಿದರು.

ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ವೇಳೆ ಶಾಲೆಗಳನ್ನು ಪುನಾರಂಭ ಮಾಡಲಾಗಿದೆ, ಅಡುಗೆ ಅನಿಲ ಒದಗಿಸಲಾಗಿದೆ. ಶೌಚಾಲಯಗಳನ್ನು ನಿರ್ಮಿಸಲಾಗಿದೆ ಮತ್ತು ವಿದ್ಯುತ್‌ ಸಂಪರ್ಕ ಒದಗಿಸಲಾಗಿದೆ. ಈ ಎಲ್ಲಾ ಕಾರ್ಯಕ್ರಮಗಳ ಮೂಲ ಕ ನಾವು ಕಾಶ್ಮೀರಿಗಳ ಹೃದಯವನ್ನು ನಾವು ಗೆಲ್ಲುತ್ತೇವೆ ಎಂದು ಶಾ ಹೇಳಿದರು.

ಇದೇ ವೇಳೆ ರಾಜ್ಯದಲ್ಲಿನ ಇಂದಿನ ರಾಜಕೀಯ ಅಸ್ಥಿರತೆ ಮತ್ತು ಉಗ್ರವಾದಕ್ಕೆ, ದೇಶದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಅವರೇ ಕಾರಣ. ಅವರಿಂದಾಗಿಯೇ ಜಮ್ಮು ಮತ್ತು ಕಾಶ್ಮೀರದ ಮೂರನೇ ಒಂದು ಭಾಗ ಇಂದು ನಮ್ಮ ಬಳಿ ಇಲ್ಲ. ಕಾಶ್ಮೀರದ ಭಾರತದ ಸೇರಲು ಬಯಸಿದ ಹೊರತಾಗಿಯೂ ನೆಹರೂ ಸರ್ಕಾರ ವಿಶ್ವಸಂಸ್ಥೆಗೆ ಹೋಗಿ ಕಾಶ್ಮೀರದಲ್ಲಿ ಜನಮತಗಣನೆ ನಡೆಸುವುದಾಗಿ ಒಪ್ಪಿಕೊಂಡಿದ್ದಾದರೂ ಏಕೆ? ಇದು ಐತಿಹಾಸಿಕ ದುರಂತ ಎಂದು ಶಾ ಕಿಡಿಕಾರಿದರು.

ಇದೇ ವೇಳೆ ಅಧಿಕಾರದ ಲಾಲಸೆಗಾಗಿ ಕೇಂದ್ರ ಸರ್ಕಾರ, ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ಹೊರಟಿದೆ ಎಂಬ ವಿಪಕ್ಷಗಳ ಟೀಕೆಗೆ ತಿರುಗೇಟು ನೀಡಿದ ಶಾ, ನಮಗೆ ಯಾವುದೇ ಅಧಿಕಾರದ ಬರ ಇಲ್ಲ. ನಾವಿಂದು ದೇಶದ 29 ರಾಜ್ಯಗಳ ಪೈಕಿ 16ರಲ್ಲಿ ಅಧಿಕಾರ ನಡೆಸುತ್ತಿದ್ದೇವೆ ಎಂದು ಹೇಳಿದರು.

ಅಂತಿಮವಾಗಿ ರಾಜ್ಯಸಭೆ ಕೂಡಾ ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಮತ್ತೆ 6 ತಿಂಗಳು ವಿಸ್ತರಣೆ ಮಾಡಲು ತನ್ನ ಅನುಮೋದನೆ ನೀಡಿತು.

Follow Us:
Download App:
  • android
  • ios