ನವದೆಹಲಿ[ಜ.11]: ಸಲಿಂಗಕಾಮವನ್ನು ಸಕ್ರಮಗೊಳಿಸಿ ಸರ್ವೋಚ್ಚ ನ್ಯಾಯಾಲಯ ತೀರ್ಪು ಪ್ರಕಟಿಸಿದ್ದರೂ, ಸೇನೆಯಲ್ಲಿ ಇದನ್ನು ಜಾರಿಗೊಳಿಸಲು ಆಗದು ಎಂದು ಸೇನಾ ಮುಖ್ಯಸ್ಥ ಜ| ಬಿಪಿನ್‌ ರಾವತ್‌ ಹೇಳಿದ್ದಾರೆ. ರಾವತ್‌ ಅವರ ಈ ಹೇಳಿಕೆ ಪರ-ವಿರೋಧ ಚರ್ಚೆಗೆ ನಾಂದಿ ಹಾಡಿದೆ.

ಗುರುವಾರ ಸೇನಾ ಮುಖ್ಯಾಲಯದಲ್ಲಿ ವಾರ್ಷಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜ| ರಾವತ್‌ ಅವರಿಗೆ ಪತ್ರಕರ್ತರು ‘ಸೆಕ್ಷನ್‌ 377ನ್ನು ಸುಪ್ರೀಂ ಕೋರ್ಟ್‌ ಸಕ್ರಮಗೊಳಿಸಿದ್ದು, ಸೇನೆಯಲ್ಲಿ ಸಲಿಂಗಿಗಳ ನಿಯೋಜನೆ ಸಾಧ್ಯವೇ?’ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಜ| ರಾವತ್‌, ಸೇನೆಯಲ್ಲಿ ಇದರ ಪಾಲನೆಗೆ ನಾವು ಬಿಡುವುದಿಲ್ಲ. ಹಾಗಂತ ನಾವೇನೂ ಕಾನೂನಿಗಿಂತ ಮಿಗಿಲಲ್ಲ. ಆದರೆ, ಬಾಹ್ಯ ಜಗತ್ತಿನಲ್ಲಿ ಅನುಭವಿಸುವ ಕೆಲವು ಸ್ವಾತಂತ್ರ್ಯಗಳು ಸೇನೆಯನ್ನು ಸೇರಿದಾಗ ಲಭಿಸುವುದಿಲ್ಲ. ಹೀಗಾಗಿ ಹೊರಜಗತ್ತಿನ ನಿಯಮಗಳಿಗೂ ಸೇನೆಯಲ್ಲಿನ ನಿಯಮಗಳಿಗೂ ವ್ಯತ್ಯಾಸವಿದೆ’ ಎಂದು ಸ್ಪಷ್ಟಪಡಿಸಿದರು.

‘ಸೇನೆಯು ಸಂಪ್ರದಾಯವಾದಿಯಾಗಿದೆ. ಅದನ್ನು (ಸಲಿಂಗಕಾಮವನ್ನು) ಸೇನೆಯಲ್ಲಿ ನಡೆಸಲು ಬಿಡುವುದಿಲ್ಲ. ಸೇನೆಗೆ ಸಲಿಂಗಕಾಮಕ್ಕೆ ಸಂಬಂಧಿಸಿದಂತೆ ತನ್ನದೇ ಆದ ಕಾನೂನುಗಳಿವೆ’ ಎಂದೂ ಅವರು ಹೇಳಿದರು.

ಕಳೆದ ವರ್ಷ ಮಹತ್ವದ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್‌ ಸಲಿಂಗಕಾಮ ಸಕ್ರಮ ಎಂದು ಹೇಳುತ್ತಿದ್ದ ಭಾರತೀಯ ಅಪರಾಧ ದಂಡಸಂಹಿತೆಯ 377ನೇ ಪರಿಚ್ಛೇದವನ್ನು ರದ್ದುಗೊಳಿಸಿತ್ತು.