ನವದೆಹಲಿ[ಜೂ.18]: ಬಿಜೆಪಿಯಲ್ಲಿ ಬಂಡಾಯ ಇಲ್ಲದೆ ಸುಸೂತ್ರವಾಗಿ ವ್ಯವಹಾರಗಳು ನಡೆಯಲು ಆರ್‌ಎಸ್‌ಎಸ್‌ ಮಧ್ಯಪ್ರವೇಶ ಅನಿವಾರ್ಯ ಹೇಗೋ ಹಾಗೇ ಕಾಂಗ್ರೆಸ್‌ ಪಕ್ಷವನ್ನು ವಿಘಟನೆಯಿಂದ ತಡೆಯಬಲ್ಲ ಶಕ್ತಿ ಇರುವುದು ನೆಹರು-ಗಾಂಧಿ ಪರಿವಾರಕ್ಕೆ ಮಾತ್ರ. ವಂಶವಾದದ ಬಗ್ಗೆ ಟೀಕೆ ಮಾಡಬಹುದಾದರೂ ಠಾಕ್ರೆ ಕುಟುಂಬ ಇಲ್ಲದೆ ಶಿವಸೇನೆ, ಕರುಣಾನಿಧಿ ಕುಟುಂಬ ಇಲ್ಲದ ಡಿಎಂಕೆ, ಅಬ್ದುಲ್ಲಾ ಕುಟುಂಬ ಇಲ್ಲದ ನ್ಯಾಷನಲ್‌ ಕಾನ್ಫರೆಸ್ಸ್‌, ನಾಯ್ಡು ಇಲ್ಲದ ತೆಲಗು ದೇಶಂ ಪ್ರಾಕ್ಟಿಕಲ್‌ ಆಗಿ ನಡೆಸೋದು ಕಷ್ಟ. ಜಯಲಲಿತಾ ಇಲ್ಲದೆ ಅಣ್ಣಾ ದ್ರಾವಿಡ ಪಕ್ಷ ಸರ್ಕಾರ ಅಧಿಕಾರ ಇದೆ ಎಂದು ನಡೆಸುತ್ತಿದೆ. 

ನಾಳೆ ಅಧಿಕಾರ ಹೋದಾಗ ಆ ಪಕ್ಷ ಹೋಳಾಗುವುದು ನಿಶ್ಚಿತ. ಯಾವುದೇ ಒಂದು ಸಂಘಟನೆಗೆ ಸಿದ್ಧಾಂತ, ವ್ಯಕ್ತಿ, ಕುಟುಂಬ, ಅಧಿಕಾರ ಹೀಗೆ ಏನಾದರೂ ಒಂದು ಹಿಡಿದಿಡುವ ಶಕ್ತಿ ಬೇಕು. ಒಂದು ವೇಳೆ ಕಾಂಗ್ರೆಸ್‌ ಗಾಂಧಿ ಕುಟುಂಬದ ನೆರಳಿನಿಂದ ಹೊರಬಂದರೆ ರಾಜ್ಯದಲ್ಲಿರುವ ನಾಯಕರು ದಿಲ್ಲಿಗೆ ಸಡ್ಡು ಹೊಡೆಯತೊಡಗುತ್ತಾರೆ. ಸೀತಾರಾಮ್‌ ಕೇಸರಿ ಅಧ್ಯಕ್ಷರಾದಾಗ ರಾಜ್ಯಕ್ಕೊಂದು ಕಾಂಗ್ರೆಸ್‌ ಪಕ್ಷ ಹುಟ್ಟಿಕೊಂಡಿತ್ತು.

ಆದರೆ, ಗಾಂಧಿ ಕುಟುಂಬಕ್ಕೂ ಕೂಡ ತನ್ನ ಹೆಸರಿನ ಮೇಲೆ ವೋಟು ಬರದೇ ಇದ್ದರೆ ಬಹಳ ದಿನ ಪಕ್ಷ ಹಿಡಿದು ಇಡುವುದು ಕಷ್ಟ. ಪಾಲಿಟಿಕ್ಸ್ ಕೂಡ ಒಂದು ರೀತಿ ಬಿಗ್‌ಬಾಸ್‌ ಇದ್ದಂತೆ. ಜನ ಮತ ಕೊಟ್ಟರೆ ಮಾತ್ರ ಒಳಗೆ, ಇಲ್ಲದಿದ್ದರೆ ಹೊರಗೆ. ಅದಕ್ಕಾಗಿ ಸಾಮ ದಾನ ದಂಡ ಭೇದ ಎಲ್ಲ ಉಪಯೋಗಿಸಲೇಬೇಕು.

ಸುವರ್ಣ ನ್ಯೂಸ್ ದಿಲ್ಲಿ ಪ್ರತಿನಿಧಿ ಪ್ರಶಾಂತ್ ನಾತು ಅವರ ಕಾಲಂನಿಂದ