ಸಂಪುಟ ವಿಸ್ತರಣೆ ಬಳಿಕ ಅಸಮಾಧಾನಗೊಂಡು ತೆರಳಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಶೀಘ್ರ ಭೇಟಿ ಮಾಡಲಾಗುವುದು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರೊಂದಿಗೆ ಮಾತುಕತೆ ನಡೆಸಲು ಕಾಂಗ್ರೆಸ್ ಪಕ್ಷ ಮುಕ್ತವಾಗಿದೆ ಎಂದು ರಮೇಶ್ ಸಹೋದರ ಹಾಗೂ ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ರಮೇಶ್ ಜಾರಕಿಹೊಳಿ ಅವರನ್ನು ಇನ್ನೂ ಭೇಟಿ ಆಗಿಲ್ಲ. ಬೆಂಗಳೂರಿನಿಂದ ಆಗಮಿಸಿರುವ ಅವರು ಎರಡು ಮೂರು ದಿನ ಬೆಳಗಾವಿಯಲ್ಲೇ ಇರಲಿದ್ದಾರೆ. ಈ ಅವಧಿಯಲ್ಲಿ ಭೇಟಿ ಮಾಡಲು ಯತ್ನಿಸುವುದಾಗಿ ಹೇಳಿದ್ದಾರೆ.
ಪುಟ್ಟರಂಗಶೆಟ್ಟಿ ಪಿಎ ಬಳಿ ಹಣದ ಪತ್ತೆ ವಿಚಾರ : ಹಿಂದುಳಿದ ವರ್ಗಗಳ ಇಲಾಖೆ ಸಚಿವ ಪುಟ್ಟರಂಗ ಶೆಟ್ಟಿ ಅವರ ಕಚೇರಿಯಲ್ಲಿ ಪಿಎ ಬಳಿ ಲಕ್ಷಾಂತರ ರೂ. ನಗದು ಸಿಕ್ಕ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಜಾರಕಿಹೊಳಿ, ಈ ಬಗ್ಗೆ ಪೊಲೀಸ್ ಅಥವಾ ಲೋಕಾಯುಕ್ತ ಸಂಸ್ಥೆಯಿಂದ ತನಿಖೆ ನಡೆದ ಬಳಿಕ ಅದಕ್ಕೆ ಯಾರು ಜವಾಬ್ದಾರರು ಎನ್ನುವುದು ತಿಳಿಯಲಿದೆ. ನಂತರ ಕ್ರಮ ಕೈಗೊಳ್ಳುವ ವಿಚಾರ ಮಾಡುತ್ತೇವೆ ಎಂದರು.
ಹಣಪತ್ತೆ ಬಗ್ಗೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯೆ : ಪುಟ್ಟರಂಗಶೆಟ್ಟಿ ಆಪ್ತರ ಬಳಿ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯಿಸಿದ್ದಾರೆ. ಈ ವಿಚಾರವಾಗಿ ತನಿಖೆ ನಂತರವಷ್ಟೇ ಸತ್ಯಾಸತ್ಯತೆ ಬಯಲಾಗಲಿದೆ ಎಂದರು. ಇನ್ನು ರಮೇಶ್ ಜಾರಕಿಹೊಳಿ ವಿಚಾರವಾಗಿ ಪ್ರತಿಕ್ರಿಯಿಸಲು ಈ ವೇಳೆ ನಿರಾಕರಿಸಿದ್ದು, ಪಕ್ಷದ ವಿಚಾರ ಬಂದಾಗ ಎಲ್ಲರೂ ಒಂದಾಗಿ ಇದ್ದೇವೆ ಎಂದರು.
