ನವದೆಹಲಿ (ಫೆ. 03): ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಸಕ್ರಿಯ ರಾಜಕಾರಣ ಪ್ರವೇಶಿಸಿದ ಪ್ರಿಯಾಂಕಾ ಗಾಂಧಿ ವಾದ್ರಾ ವಿರುದ್ಧ ಅಪಪ್ರಚಾರ ನಡೆಸುತ್ತಿರುವವರ ವಿರುದ್ಧ ಪ್ರಕರಣ ದಾಖಲಿಸಿ ತೀವ್ರ ಹೋರಾಟಕ್ಕೆ ನಾಂದಿ ಹಾಡಲು ಮಹಿಳಾ ಕಾಂಗ್ರೆಸ್‌ ಮುಂದಾಗಿದೆ.

ಪ್ರಿಯಾಂಕಾ ರಾಜಕೀಯ ಪ್ರವೇಶವನ್ನೇ ವಸ್ತುವಾಗಿಸಿಕೊಂಡು ಅವರ ವಿರುದ್ಧ ಅಪಪ್ರಚಾರ ನಡೆಸುವುದನ್ನೇ ಕೆಲವರು ಈಗ ಕಾಯಕವಾಗಿಸಿಕೊಂಡಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಹಾಗೂ ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ಬಾಯಿಗೆ ಬಂದಂತೆ ಅನೇಕರು ಹೇಳಿಕೆ ನೀಡುತ್ತಿರುವುದು ಕಂಡುಬಂದಿದೆ.

ಈ ಹ್ನಿನೆಲೆಯಲ್ಲಿ ಇಂಥವರ ವಿರುದ್ಧ ಫೆ.4 ರಿಂದ (ಸೋಮವಾರದಿಂದ) ದೂರು ನೀಡಿ, ಪ್ರಕರಣ ದಾಖಲಿಸಲು ಆಯಾ ರಾಜ್ಯಗಳ ಸ್ಥಳೀಯ ಮಹಿಳಾ ಕಾಂಗ್ರೆಸ್‌ ಘಟಕಗಳಿಗೆ ತಿಳಿಸಿದ್ದೇವೆ ಎಂದು ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಸುಷ್ಮಿತಾ ದೇವ್‌ ಹೇಳಿದ್ದಾರೆ.

ಬಿಜೆಪಿಯ ಕೆಲ ನಾಯಕರಂತೂ ಹೆಣ್ಣು ಎನ್ನುವುದನ್ನೂ ಲೆಕ್ಕಿಸದೇ ಅವಮಾನಕಾರಿಯಾದ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಟ್ವಿಟರ್‌ನಲ್ಲಿ ವಿಡಿಯೋವೊಂದನ್ನು ಪೋಸ್ಟ್‌ ಮಾಡಿರುವ ದೇವ್‌, ರಾಜಕಾರಣದಲ್ಲಿ ಹೆಣ್ಣನ್ನು ಕೆಟ್ಟದಾಗಿ ನಡೆಸಿಕೊಳ್ಳುವ ಮನಸ್ಥಿತಿಯವರಿಗೆ ಇನ್ನೂ ಬ್ರೇಕ್‌ ಬಿದ್ದಿಲ್ಲ ಎಂದಿದ್ದಾರೆ.

ಕಳೆದವಾರ ರಾಜಕಾರಣದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದನ್ನು ಖಚಿತ ಪಡಿಸಿರುವ ಪ್ರಿಯಾಂಕಾ ವಾದ್ರಾ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಅಷ್ಟೇ ಅಲ್ಲ, ಉತ್ತರಪ್ರದೇಶ ಪೂರ್ವ ವಲಯದ ಉಸ್ತುವಾರಿಯಾಗಿ ಮಾಡಲಾಗಿದೆ.

ಬಿಜೆಪಿ ಶಾಸಕ ಸುರೇಂದ್ರ ಸಿಂಗ್‌ ಅವರು ರಾಹುಲ್‌ ಅವರನ್ನು ರಾವಣ ಎಂದು, ಅವರ ತಂಗಿ ಪ್ರಿಯಾಂಕಾ ಗಾಂಧಿ ಶೂರ್ಪನಖಿ ಎಂದು ಹೇಳಿದ್ದರು. ಬಿಜೆಪಿ ಮುಖಂಡ ಸುಬ್ರಮಣಿಯನ್‌ ಸ್ವಾಮಿ ಅವರು ‘ಪ್ರಿಯಾಂಕಾ ತಲೆ ಸರಿ ಇಲ್ಲ. ಆಕೆ ಜನರನ್ನು ಹೊಡೆಯುವ ಮನೋಭಾವ ಹೊಂದಿದ್ದಾಳೆ’ ಎಂದಿದ್ದರು.