ವಿಎಚ್‌ಪಿ ಬೃಹತ್ ರ‍್ಯಾಲಿಯಿಂದಾಗಿ ಮುಸ್ಲಿಮರು ಎರಡು ದಿನ ಮಟ್ಟಿಗೆ ಅಯೋಧ್ಯೆ ತೊರೆಯಲು ಚಿಂತನೆ ನಡೆಸಿದ್ದಾರೆ.
ಲಕ್ನೋ, (ನ.15): ಅಯೋಧ್ಯಾದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಬೃಹತ್ ರ‍್ಯಾಲಿ ನಡೆಸಲು ನಿರ್ಧರಿಸಿದೆ.
ವಿಎಚ್‌ಪಿಯ ಧರ್ಮ ಸಭಾ ಕಾರ್ಯಕ್ರಮ ನವೆಂಬರ್ 24 ಮತ್ತು 25ರಂದು ಆಯೋಜನೆಯಾಗಿದ್ದು, ಲಕ್ಷಾಂತರ 'ರಾಮ ಭಕ್ತರು' ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಂಘಟನೆ ತಿಳಿಸಿದೆ.
ರಾಮಮಂದಿರ ತುರ್ತು ವಿಚಾರಣೆ ಇಲ್ಲವೇ ಇಲ್ಲ
ಈ ರ‍್ಯಾಲಿ ಅಯೋಧ್ಯಾದ ಮುಸ್ಲಿಂ ನಿವಾಸಿಗಳನ್ನು ಚಿಂತೆಗೀಡು ಮಾಡಿದೆ. ಅಯೋಧ್ಯಾ ವಿವಾದದಲ್ಲಿ ಪ್ರಮುಖ ಅರ್ಜಿದಾರನಾಗಿರುವ ಮುಸ್ಲಿಂ ವ್ಯಕ್ತಿ ತಾವು ಪಟ್ಟಣವನ್ನು ತೊರೆಯಲು ಸಿದ್ಧರಾಗಿರುವುದಾಗಿ ಹೇಳಿದ್ದಾರೆ.
1992ರಂತೆಯೇ ಬೃಹತ್ ಗುಂಪು ಇಲ್ಲಿ ಸೇರಿಕೊಂಡರೆ ಅಯೋಧ್ಯಾದಲ್ಲಿರುವ ಮುಸ್ಲಿಮರಿಗೆ ಮತ್ತು ನನಗೆ ರಕ್ಷಣೆ ನೀಡಬೇಕಾಗುತ್ತದೆ. ನನಗೆ ಭದ್ರತೆ ನೀಡದೆ ಇದ್ದರೆ ನಾನು ನವೆಂಬರ್ 25ಕ್ಕೂ ಮುನ್ನ ಬೇರೆ ಎಲ್ಲಿಗಾದರೂ ಹೋಗಬೇಕಾಗುತ್ತದೆ ಎಂದು ಅನ್ಸಾರಿ ಕಳವಳ ವ್ಯಕ್ತಪಡಿಸಿದ್ದಾರೆ.
ಜನವರಿಯಲ್ಲಿ ಈ ವಿವಾದದ ಸಂಬಂಧ ಸುಪ್ರೀಂಕೋರ್ಟ್ ವಿಚಾರಣೆ ಆರಂಭವಾಗಲಿದೆ. ವಿಚಾರಣೆ ಬಾಕಿ ಇರುವಾಗಲೇ ಸರ್ಕಾರವು ರಾಮ ಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಚಾಲನೆ ನೀಡಬಹುದು ಎಂಬ ಆಗ್ರಹಗಳು ಕೇಳಿಬಂದಿವೆ.
