ಇಂದು ಭಾರತ-ಆಸ್ಟ್ರೇಲಿಯಾ 2ನೇ ಟಿ20 ಪಂದ್ಯ ನಡೆಯುತ್ತಿದೆ. ಭಾರತೀಯರು ದಾಖಲೆ ನಿರ್ಮಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಕಾಂಗರೂಗಳು ಹೇಗಾದರೂ ಮಾಡಿ ಸರಣಿ ಸೋಲಿನಿಂದ ತಪ್ಪಿಸಿಕೊಳ್ಳೋ ಪ್ಲಾನ್ ಮಾಡ್ತಿದ್ದಾರೆ. ಇನ್ನು ಗುವಾಹಟಿ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯಕ್ಕೆ ಆತಿಥ್ಯ ವಹಿಸುವ ಖುಷಿಯಲ್ಲಿದೆ.
ಎರಡು ದಿನ ವಿಶ್ರಾಂತಿ ನಂತ್ರ ಭಾರತ-ಆಸ್ಟ್ರೇಲಿಯಾ ಆಟಗಾರರು ಇಂದು ಎರಡನೇ ಚುಟುಕು ಯುದ್ಧದಲ್ಲಿ ಮುಖಾಮುಖಿಯಾಗ್ತಿದ್ದಾರೆ. ಕಾಂಗರೂಗಳ ವಿರುದ್ಧ ಟೆಸ್ಟ್ ಹಾಗೂ ಏಕದಿನ ಸರಣಿ ಗೆದ್ದಿರುವ ಭಾರತೀಯರು, ಈಗ ಟ್ವೆಂಟಿ-20 ಸರಣಿ ಗೆಲ್ಲಲು ಎದುರು ನೋಡುತ್ತಿದ್ದಾರೆ. ಅದಕ್ಕೆ ಬೇಕಿರುವುದು ಜಸ್ಟ್ ಒಂದು ಗೆಲುವು. ಆಗ್ಲೇ ರಾಂಚಿ ಪಂದ್ಯ ಗೆದ್ದಿರುವ ಭಾರತ, ಇಂದು ಗುವಾಹಟಿಯಲ್ಲಿ ಗೆದ್ದರೆ ಸರಣಿ ನಮ್ಮದೇ.
ಆಸೀಸ್ ವಿರುದ್ಧ ಭಾರತಕ್ಕೆ ಸತತ 8ನೇ ಜಯ ಸಿಗುತ್ತಾ..?: ದಾಖಲೆ ನಿರ್ಮಿಸ್ತಾರಾ ಕೊಹ್ಲಿ ಬಾಯ್ಸ್..?
ಇವತ್ತು ಟೀಂ ಇಂಡಿಯಾ ಗೆದ್ರೆ ಎರಡು ಸಂಭ್ರವನ್ನ ಆಚರಿಸಲಿದೆ. ಒಂದು ಟಿ20 ಸರಣಿ ಗೆಲ್ಲುತ್ತೆ. ಎರಡನೇಯದು ಆಸ್ಟ್ರೇಲಿಯಾ ವಿರುದ್ಧ ಸತತ 8 ಪಂದ್ಯ ಗೆದ್ದು ದಾಖಲೆ ನಿರ್ಮಿಸಲಿದೆ. ಒಂದೇ ತಂಡದ ವಿರುದ್ಧ ಸತತವಾಗಿ 8 ಮ್ಯಾಚ್ ಗೆದ್ದ ಏಕೈಕ ತಂಡ ಎನಿಸಿಕೊಳ್ಳಲಿದೆ ಭಾರತ. ಜೊತೆಗೆ ಒಂದೇ ವರ್ಷದಲ್ಲಿ ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ಎಲ್ಲ ಮೂರು ಮಾದರಿ ಟೂರ್ನಿಗಳನ್ನ ಗೆದ್ದ ಸಾಧನೆ ಮಾಡಲಿದೆ.
ಅದ್ಭುತ ಫಾರ್ಮ್'ನಲ್ಲಿ ಭಾರತೀಯರು
ಭಾರತೀಯ ಆಟಗಾರರು ಅದ್ಭುತ ಫಾರ್ಮ್ನಲ್ಲಿದ್ದಾರೆ. ಏಕದಿನ ಸರಣಿ ಗೆದ್ದು ಈಗ ಟಿ20 ಸರಣಿ ಗೆಲ್ಲಲು ಕಾದು ಕುಳಿತಿದ್ದಾರೆ. ರಾಂಚಿಯಲ್ಲಿ ಕಾಂಗರೂ ಬ್ಯಾಟ್ಸ್ಮನ್ಗಳನ್ನ ನಮ್ಮ ಬೌಲರ್ಸ್ ಇನ್ನಿಲ್ಲದಂತೆ ಕಾಡಿದ್ರು. ಪ್ರತಿ ಬೌಲರ್ ವಿಕೆಟ್ ಪಡೆಯೋ ಮೂಲ್ಕ ಆಸ್ಟ್ರೇಲಿಯಾ ಬ್ಯಾಟಿಂಗ್ ಲೈನ್ ಅಪ್ ಅನ್ನ ಧ್ವಂಸ ಮಾಡಿದ್ದರು. ರಾಂಚಿಯಲ್ಲಿ ಮಳೆ ಕಾಡಿದ್ರೂ ಗೆಲುವಿನ ರೂವಾರಿಗಳು ಬೌಲರ್ಗಳೇ. ಅದರಲ್ಲೂ ರಿಸ್ಟ್ ಸ್ಪಿನ್ನರ್ಗಳಾದ ಕುಲ್ದೀಪ್ ಯಾದವ್ ಮತ್ತು ಯುಜವೇಂದ್ರ ಚಹಲ್ ಸ್ಪಿನ್ ಮ್ಯಾಜಿಕ್ ಜೋರಾಗಿ ನಡೆಯುತ್ತಿದೆ. ಸ್ವಿಂಗ್ ಬೌಲರ್ಸ್ ಭುವನೇಶ್ವರ್ ಕುಮಾರ್ ಹಾಗೂ ಜಸ್ಪ್ರೀತ್ ಬುಮ್ರಾ ಸಹ ಡೇಂಜರಸ್.
ಮಳೆ ಕಾಡಿದ್ದರಿಂದ ರಾಂಚಿಯಲ್ಲಿ ಭಾರತಕ್ಕೆ ಬ್ಯಾಟಿಂಗ್ ಮಾಡಲು ಸಿಕ್ಕಿದ್ದು ಕೇವಲ 6 ಓವರ್ಗಳು ಮಾತ್ರ. ಹೀಗಾಗಿ ಬ್ಯಾಟ್ಸ್ಮನ್ಗಳ ಪರೀಕ್ಷೆ ನಡೆದಿಲ್ಲ. ಇಂದು ಬ್ಯಾಟ್ಸ್ಮನ್ಗಳಿಗೆ ಅಗ್ನಿಪರೀಕ್ಷೆ. ಸರಣಿ ಗೆಲ್ಲಬೇಕಾದ್ರೆ ಬ್ಯಾಟ್ಸ್ಮನ್ಗಳು ಆರ್ಭಟಿಸಬೇಕು. ರಾಂಚಿಯಲ್ಲಿ ಆಡಿದ ತಂಡವೇ ಇಂದು ಕಣಕ್ಕಿಳಿಯುವ ಎಲ್ಲ ಚಾನ್ಸಸ್ ಇದೆ.
ಪುಟಿದೇಳುತ್ತಾ ಆಸೀಸ್..?
ಸತತ ಸೋಲಿನಿಂದ ಕೆಂಗೆಟ್ಟಿರುವ ಆಸ್ಟ್ರೇಲಿಯಾ ಈ ಪಂದ್ಯ ಗೆದ್ದು ಸರಣಿಯಲ್ಲಿ ಸಮಬಲ ಸಾಧಿಸಲು ಎದುರು ನೋಡ್ತಿದೆ. ಏಕದಿನ ಸರಣಿಯಲ್ಲಿ ಹೋದ ಮಾನವನ್ನ ಟಿ20 ಸರಣಿಯಲ್ಲಿ ಪಡೆದುಕೊಳ್ಳಲು ಕಾದು ಕುಳಿತಿದೆ. ಐದರಲ್ಲಿ ಏಕೈಕ ಏಕದಿನ ಪಂದ್ಯ ಗೆದ್ದಿದೆ. ಫಸ್ಟ್ ಟಿ20ಯಲ್ಲೂ ಬ್ಯಾಟ್ಸ್ಮನ್ಗಳು ವಿಫಲವಾಗಿದ್ದರಿಂದ ಸೋಲು ಅನುಭವಿಸಬೇಕಾಯ್ತು. ಈಗ ಅವನ್ನೆಲ್ಲಾ ಮರೆತು ಪುಟಿದೇಳಲು ಪ್ಲಾನ್ ಮಾಡ್ತಿದೆ.
ಚೊಚ್ಚಲ ಪಂದ್ಯಕ್ಕೆ ಆತಿಥ್ಯ ವಹಿಸ್ತಿದೆ ಗುವಾಹಟಿ
ಗುವಾಹಟಿ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯಕ್ಕೆ ಆತಿಥ್ಯ ವಹಿಸ್ತಿದೆ. ಇದಕ್ಕಾಗಿ ಸ್ಟೇಡಿಯಂ ಸಿದ್ದಗೊಂಡಿದೆ. ಮೊದಲ ಇಂಟರ್ನ್ಯಾಷನಲ್ ಮ್ಯಾಚ್ ವೀಕ್ಷಿಸಲು ಅಸ್ಸಾಂ ಕ್ರಿಕೆಟ್ ಅಭಿಮಾನಿಗಳು ಜತನದಿಂದ ಕಾಯ್ತಿದ್ದಾರೆ. ಪಿಚ್ ಬ್ಯಾಟ್ಸ್ಮನ್ ಸ್ವರ್ಗವಾಗಿದ್ದು ಇಂದು ರನ್ ಹೊಳೆ ಹರಿಯುವ ಸಾಧ್ಯತೆ ಇದೆ.
