ಬಿಜೆಪಿ ಶಾಸಕನ ವಿವಾದಾತ್ಮಕ ಹೇಳಿಕೆ! ಪ್ರೀತಿ ನಿರಾಕರಿಸಿದರೆ ಎತ್ತಾಕೊಂಡು ಬರುತ್ತೇನೆ! ಮಹಾರಾಷ್ಟ್ರ ಬಿಜೆಪಿ ಶಾಸಕ ರಾಮ್ ಕದಮ್! ದಹಿ ಹಂಡಿ ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ

ಮುಂಬೈ(ಸೆ.5): 'ಬೇಟಿ ಪಡಾವೋ, ಬೇಟಿ ಬಚಾವೋ' ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಘೋಷವಾಕ್ಯ. ಆದರೆ ದೇಶದ ಹೆಣ್ಣುಮಕ್ಕಳ ಬಗ್ಗೆ ಬಿಜೆಪಿ ನಾಯಕರೇ ಕೀಳು ಮಟ್ಟದ ಮಾತುಗಳನ್ನಾಡಿ ಮೋದಿಗೆ ಮುಜುಗರ ತರುತ್ತಿರುವುದು ಮಾತ್ರ ವಿಪಾರ್ಯಸ.

ನೀವು ಇಷ್ಟಪಟ್ಟ ಹುಡುಗಿ ನಿಮ್ಮ ಪ್ರೀತಿಯನ್ನು ನಿರಾಕರಿಸಿದರೆ ನನಗೆ ತಿಳಿಸಿ ಅವಳನ್ನು ಎತ್ತಾಕೊಂಡು ಬಂದು ನಿಮಗೆ ಒಪ್ಪಿಸುತ್ತೇನೆ ಎಂದು ಮಹಾರಾಷ್ಟ್ರದ ಬಿಜೆಪಿ ಶಾಸಕ ರಾಮ್ ಕದಮ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 

ಮಹಾರಾಷ್ಟ್ರದ ಸುಬರ್ ಬನ್ ಘಟಕೋಪುರ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ರಾತ್ರಿ ಆಯೋಜಿಸಲಾಗಿದ್ದ ದಹಿ ಹಂಡಿ ಒಡೆಯುವ ಕಾರ್ಯಕ್ರಮದಲ್ಲಿ ಯುವಕರನ್ನು ಉದ್ದೇಶಿಸಿ ರಾಮ್ ಕದಮ್ ಈ ರೀತಿ ಹೇಳಿಕೆ ನೀಡಿದ್ದು ಜನರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. 

Scroll to load tweet…

ಹೆಚ್ಚಾಗಿ ಯುವಕರು ನನ್ನ ಬಳಿಗೆ ಹುಡುಗಿ ಪ್ರೀತಿ ನಿರಾಕರಿಸಿದ್ದಕ್ಕಾಗಿ ಸಹಾಯ ಕೇಳಿಕೊಂಡು ಬರುತ್ತಾರೆ. ಹಾಗೇ ನೀವು ಸಹ ಇಷ್ಟಪಟ್ಟ ಯುವತಿಯನ್ನು ವಿವಾಹವಾಗಬೇಕಾದರೇ ಹೇಳಿ ನಾನು ಕಿಡ್ನಾಪ್ ಮಾಡಿಕೊಂಡು ಬಂದು ನಿಮಗೆ ಒಪ್ಪಿಸುತ್ತೇನೆ ಎಂದು ಹೇಳಿದ್ದಾರೆ. 

ಬಿಜೆಪಿ ಶಾಸಕರ ಈ ಹೇಳಿಕೆಯ ವಿಡಿಯೋವನ್ನು ಎನ್‌ಸಿಪಿ ಶಾಸಕ ಜೀತೆಂದ್ರ ಆವ್ಹದ್ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಕಾನೂನು ರೂಪಿಸಬೇಕಾದರೇ ಈ ರೀತಿ ಬಹಿರಂಗವಾಗಿ ಹೇಳಿಕೆ ನೀಡಿದರೆ ಮಹಿಳೆಯರಿಗೆ ಎಲ್ಲಿದೆ ಸುರಕ್ಷೆ ಎಂದು ಪ್ರಶ್ನಿಸಿದ್ದಾರೆ.

ಇನ್ನು ರಾಮ್ ಕದಮ್ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಮಿತ್ರಪಕ್ಷ ಶಿವಸೇನೆ ಮತ್ತು ಪ್ರತಿಪಕ್ಷ ಎನ್‌ಸಿಪಿ, ಶಾಸಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿವೆ.